ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ : 97% ಕೋಟ್ಯಾಧಿಪತಿಗಳು
ಯುವ ಭಾರತ ಸುದ್ದಿ ಬೆಂಗಳೂರು :
ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, ಕರ್ನಾಟಕದ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ವಿಶ್ಲೇಷಿಸಿದ 223ರಲ್ಲಿ 122 ಅಭ್ಯರ್ಥಿಗಳು ಅಂದರೆ 55%ರಷ್ಟು ಕ್ರಿಮಿನಲ್ ಮೊಕದ್ದಮೆ ಇರುವ ಅಭ್ಯರ್ಥಿಗಳು ಈಗ ಚುನಾಯಿತರಾಗಿದ್ದಾರೆ.
ಸುಮಾರು 32% ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 2018ರ ಅಂಕಿಅಂಶಗಳ ಹೋಲಿಸಿದರೆ ಈ ಚುನಾವಣೆಯಲ್ಲಿ ಸಂಖ್ಯೆಗಳು ಗಮನಾರ್ಹ ಏರಿಕೆಯನ್ನು ಸೂಚಿಸುತ್ತವೆ. 2018ರ ಚುನಾವಣೆಯಲ್ಲಿ 35%ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದರು ಮತ್ತು 24%ರಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು.
ಈ ವರ್ಷ ಕಾಂಗ್ರೆಸ್‌ನ 58%, ಬಿಜೆಪಿಯ 52% ಮತ್ತು ಜೆಡಿಎಸ್‌ನ 19%ರಷ್ಟು ವಿಜೇತರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಗಂಭೀರ ಅಪರಾಧಗಳ ವಿಭಾಗದಲ್ಲಿ ಕಾಂಗ್ರೆಸ್‌ನ 40, ಬಿಜೆಪಿಯ 23 ಮತ್ತು ಜೆಡಿಎಸ್‌ನ 7 ಅಭ್ಯರ್ಥಿಗಳು ಆರೋಪ ಎದುರಿಸುತ್ತಿದ್ದಾರೆ. ಒಬ್ಬ ವಿಜೇತ ಅಭ್ಯರ್ಥಿ ಕೊಲೆ ಆರೋಪ ಎದುರಿಸುತ್ತಿದ್ದಾರೆ, ಏಳು ಮಂದಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ ಮತ್ತು ಒಬ್ಬರು ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಆರ್ಥಿಕ ಹಿನ್ನೆಲೆ:
ವರದಿಯ ಪ್ರಕಾರ, 2018 ರ ಪರಿಸ್ಥಿತಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಇಲ್ಲ – ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ 97%ರಷ್ಟು ಕೋಟ್ಯಧಿಪತಿಗಳು. 2018 ರಲ್ಲಿ ವಿಜೇತ ಅಭ್ಯರ್ಥಿಗಳ ಆಸ್ತಿಯ ಸರಾಸರಿ 34.59 ಕೋಟಿ ರೂ.ಗಳಿಗೆ ಹೋಲಿಸಿದರೆ ವಿಜೇತ ಅಭ್ಯರ್ಥಿಗೆ ಸರಾಸರಿ ಆಸ್ತಿಯು 64.39 ಕೋಟಿ ರೂ.ಗಳಷ್ಟಿದೆ. ಸುಮಾರು 81%ರಷ್ಟು ಅಭ್ಯರ್ಥಿಗಳು 5 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಕಾಂಗ್ರೆಸ್ ಮತ್ತೊಮ್ಮೆ ಶ್ರೀಮಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ 67.13 ಕೋಟಿ ರೂ.ಗಳಾಗಿದೆ. ಪಕ್ಷವು ಟಾಪ್ 10 ಶ್ರೀಮಂತ ವಿಜೇತರ ಪಟ್ಟಿಯಲ್ಲಿ ಎಂಟು ಅಭ್ಯರ್ಥಿಗಳನ್ನು ಹೊಂದಿದೆ ಮತ್ತು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಸ್ಥಾನದ ಸಂಭಾವ್ಯ ಆಯ್ಕೆಗಳಲ್ಲಿ ಒಬ್ಬರಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶ್ರೀಮಂತ ಅಭ್ಯರ್ಥಿಯಾಗಿದ್ದು 1,413 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.
ಬಿಜೆಪಿಯಿಂದ ಗೆದ್ದ ಅಭ್ಯರ್ಥಿಯ ಸರಾಸರಿ ಆಸ್ತಿ 44.36 ಕೋಟಿ ರೂ., ಜೆಡಿಎಸ್ ಅಭ್ಯರ್ಥಿಯ ಆಸ್ತಿ 46.01 ಕೋಟಿ ರೂ. ಟಾಪ್ ಟೆನ್ ಪಟ್ಟಿಯಲ್ಲಿ ಒಬ್ಬರು ಬಿಜೆಪಿ ಮತ್ತು ಒಬ್ಬರು ಜೆಡಿಎಸ್ ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.
ವಯಸ್ಸು ಮತ್ತು ಲಿಂಗ:
ಸುಮಾರು 35% ಅಭ್ಯರ್ಥಿಗಳು 51-60 ವಯೋಮಾನದವರಾಗಿದ್ದಾರೆ. 50 ವರ್ಷದೊಳಗಿನ 64 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ ಕಿರಿಯ ಮತ್ತು ಹಿರಿಯ ಅಭ್ಯರ್ಥಿಗಳಿದ್ದಾರೆ, ಅತ್ಯಂತ ಕಿರಿಯ ಶಾಸಕರೆಂದರೆ ದರ್ಶನ ಧ್ರುವನಾರಾಯಣ, ಅವರ ವಯಸ್ಸು 28 ವರ್ಷ ಮತ್ತು ಅತ್ಯಂತ ಹಿರಿಯರು 91 ವರ್ಷದ ಶಾಮನೂರು ಶಿವಶಂಕರಪ್ಪ. 2018 ರಲ್ಲಿ ಏಳು ಮಂದಿಗೆ ಹೋಲಿಸಿದರೆ ಈ ವರ್ಷ 10 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ವರ್ಷ ಚುನಾವಣೆಗೆ 185 ಮಹಿಳೆಯರು ಸ್ಪರ್ಧಿಸಿದ್ದಾರೆ.