ಪ್ರತಿಭೆ, ಪರಿಶ್ರಮ, ಕೌಶಲ್ಯಗಳೇ ಉದ್ಯೋಗದ ಬುನಾದಿ: ಪ್ರೊ. ಶಿವಾನಂದ ಗೊರನಾಳೆ
ಯುವ ಭಾರತ ಸುದ್ದಿ ಬೆಳಗಾವಿ :
ವಿದ್ಯಾರ್ಥಿಗಳಲ್ಲಿನ ಜ್ಞಾನ, ತಾಂತ್ರಿಕ ಸಾಮರ್ಥ್ಯಗಳು ಮತ್ತು ಕೆಲಸ ಮಾಡುವ ಉತ್ಸಾಹ ಇವು ವೃತ್ತಿಯ ಭರವಸೆಯನ್ನು, ಅವಕಾಶವನ್ನು ಒದಗಿಸುತ್ತವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಗಳ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ವಿದ್ಯಾರ್ಥಿ ಉದ್ಯೋಗ ಕೋಶಗಳು ಮತ್ತು ದೇಶದ ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆಯಾದ ಟಿಸಿಎಸ್ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ಹಮ್ಮಿಕೊಳ್ಳಲಾಗಿತ್ತು. ಮೌಲ್ಯ ಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಗೊರನಾಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಕಾಲೀನ ಉದ್ಯೋಗದ ಮಾರುಕಟ್ಟೆಯಲ್ಲಿ ಅಭ್ಯರ್ಥಿಗಳ ಭಾಷಾ ಜ್ಞಾನ, ಮಾರುಕಟ್ಟೆಯ ಕೌಶಲ್ಯಗಳು, ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳು, ವೃತ್ತಿಯಲ್ಲಿ ವಿಶಿಷ್ಟತೆ ಮತ್ತು ಹೊಸತನದ ಹುಡುಕಾಟಗಳು ಮಾನದಂಡಗಳಾಗಿವೆ. ನಮ್ಮ ವೃತ್ತಿ ಜೀವನದ ಕುರಿತು ನಾವೇ ನಿರ್ಧರಿಸಬೇಕು. ನಮ್ಮ ಜ್ಞಾನ, ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯೋಗವನ್ನು ಆರಿಸಿಕೊಳ್ಳಬೇಕು. ಟಿಸಿಎಸ್ ದೇಶದ ಹೆಮ್ಮೆಯ ಸಂಸ್ಥೆ. ಈ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಬೇಕೆಂಬುದು ಎಲ್ಲರ ಬಯಕೆಯಾಗಿದೆ. ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಕ್ಕಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿಗಳಾದ ಡಾ. ಆರ್. ಎನ್. ಮನಗೂಳಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಮ್ಮ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವನ್ನು ಮಾಡಲು ವೇದಿಕೆಯನ್ನು ನಿರಂತರವಾಗಿ ಒದಗಿಸಲಾಗುತ್ತಿದೆ. ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್ ಎಸ್ ತೇರದಾಳ ಅವರು ಕ್ಯಾಂಪಸ್ ನೇಮಕಾತಿಯು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ನೇಮಕಾತಿ ಕಂಪನಿಗಳಿಗೂ ಪ್ರಯೋಜನವನ್ನು ನೀಡುತ್ತದೆ. ಸಂಸ್ಥೆಗೆ ಉತ್ತಮ-ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇದು ಸೂಕ್ತವಾದ ಭೂಮಿಕೆಯಾಗಿದೆ. ನಮ್ಮ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ವೃತ್ತಿಪರತೆಯ ಕೌಶಲಗಳ ಕುರಿತು ಮಾರ್ಗದರ್ಶನ ನೀಡುತ್ತಿದೆ ಎಂದರು.
ಟಿಸಿಎಸ್ ಸಂಸ್ಥೆಯ ಎಚ್. ಆರ್. ಅಧಿಕಾರಿಗಳಾದ ಕಿರಣ ಎಂ. ಮತ್ತು ಗಿರೀಶ್ ಪ್ರಕಾಶ ಅವರು ಸಂಸ್ಥೆ ಮತ್ತು ನೇಮಕಾತಿ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ನೂರು ವಿದ್ಯಾರ್ಥಿಗಳಲ್ಲಿ ಕೇವಲ ಎಂಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಸುಧಾರಣೆಯಾಗಬೇಕಿದೆ ಎಂದರು.
ಒಟ್ಟೂ 530 ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿ ಡ್ರೈ ವ್ ಅಲ್ಲಿ ಪಾಲ್ಗೊಂಡಿದ್ದರು.
ಮಹಾವಿದ್ಯಾಲಯದ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿಗಳಾದ ಡಾ. ಮುಕುಂದ ಮುಂಡರಗಿ ಸ್ವಾಗತಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯ್ಕ ಪ್ರಾರ್ಥಿಸಿದರು. ಉಪನ್ಯಾಸಕ ವಿನೂತ ವಡಗಾವಿ ವಂದಿಸಿದರು. ಡಾ. ಜ್ಯೋತಿ ಪಾಟೀಲ್ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ -ಬೋಧಕೇತರ ಸಿಬ್ಬಂದಿ ಹಾಗೂ ಬೆಳಗಾವಿ ಜಿಲ್ಲೆಯ ಮಹಾವಿದ್ಯಾಲಯದ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.