ಸಿಎಂ ಆದರೂ ಬದಲಾಗಲಿಲ್ಲ ಜನಸಾಮಾನ್ಯನಾಗಿಯೇ ಉಳಿದೆ : ಪ್ರಧಾನಿ ಮೋದಿ
ಯುವ ಭಾರತ ಸುದ್ದಿ ಗಾಂಧಿನಗರ : ಮುಖ್ಯಮಂತ್ರಿಯಾದ ಮೇಲೆ ಈ ವ್ಯಕ್ತಿ ಬದಲಾಗುತ್ತಾರೆ ಎಂದು ಹಲವರು ಹೇಳಿದರು. ಆದರೆ ಮುಖ್ಯಮಂತ್ರಿಯಾದಾಗ ನಾನು ಬದಲಾಗಬಾರದು ಎಂದು ನಿರ್ಧರಿಸಿದೆ. ಬದಲಾಗಲಿಲ್ಲ. ಹೀಗಾಗಿ ಜನಸ್ನೇಹಿ ಯೋಜನೆ ಜಾರಿಗೆ ತಂದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2003ರಲ್ಲಿ ತಾವು ಗುಜರಾತ್ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಸ್ವಾಗತ್ ಯೋಜನೆಗೆ 20 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯೋಜನೆಗಳ ಕಾಲಮಿತಿ ಅನುಷ್ಠಾನಕ್ಕೆ ಸ್ವಾಗತ್ ಯೋಜನೆಯನ್ನು ಮುಖ್ಯಮಂತ್ರಿ ಆದ ಬಳಿಕ ಜಾರಿಗೆ ತಂದೆ. ಇದೇ ಮಾದರಿಯಲ್ಲಿ ಪ್ರಧಾನಿ ಆದ ಬಳಿಕ ಕೇಂದ್ರದಲ್ಲಿ ಪ್ರಗತಿ ಯೋಜನೆ ಜಾರಿಗೊಳಿಸಿದೆ. ಅಧಿಕಾರಕ್ಕೆ ಬಂದ ನಂತರ ರಾಜಕಾರಣಿಗಳ ವರ್ತನೆಯೇ ಬದಲಾಗಿ ಬಿಡುತ್ತದೆ ಎಂದು ಜನ ಭಾವಿಸುತ್ತಾರೆ. ಆದರೆ ನಾನು ಈ ರೀತಿ ಆಗಬಾರದು, ಅಧಿಕಾರಕ್ಕೆ ಅಂಟಿಕೊಂಡು ಅದರ ದಾಸನಾಗಬಾರದು ಎಂದು ಮನಃಸಂಕಲ್ಪ ಮಾಡಿದ್ದೆ. ಅದಕ್ಕೆಂದೇ ಸಿಎಂ ಆದ ನಂತರ ಜನಸ್ನೇಹಿ ಸ್ವಾಗತ್ ಕಾರ‍್ಯಕ್ರಮ ಜಾರಿಗೆ ತಂದೆ. ಜನರೊಂದಿಗೇ ಉಳಿದೆ ಎಂದರು.