ವಾರದಲ್ಲಿ ಐದು ದಿನ ಮಾತ್ರ ಸರಕಾರಿ ಕೆಲಸಕ್ಕೆ ಬೇಡಿಕೆ!
ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ ಮಾಡುವ ಪದ್ಧತಿ ಜಾರಿ ತರಬೇಕು. ಇದಕ್ಕಾಗಿ ಕೆಲಸದ ಅವಧಿಯನ್ನು ಬೆಳಗ್ಗೆ 10 ರಿಂದ ಸಂಜೆ 5:30 ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6:00 ವರೆಗೆ ಬದಲಾಯಿಸಬೇಕು ಎಂದು ರಾಜ್ಯ ಸರಕಾರ, 7ನೇ ವೇತನ ಆಯೋಗದ ಮುಂದೆ ರಾಜ್ಯ ಸರಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ.
ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಶುಕ್ರವಾರ ಈ ಕುರಿತ 63 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಸರಕಾರಿ ನೌಕರರಿಗೆ ವಾರಕ್ಕೆ ಐದು ದಿನ ಕರ್ತವ್ಯದ ಅವಧಿ ಮಾಡಿ ವಾರಾಂತ್ಯದಲ್ಲಿ ರಜೆ ನೀಡಬೇಕು. ಸರಕಾರಿ ನೌಕರರ ಪ್ರತಿದಿನದ ಕರ್ತವ್ಯದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಬಹುದು. ಪ್ರಸ್ತುತ ಮೂಲಭೂತ ಹಾಲಿ ವೇತನಕ್ಕೆ ಇರುವ ಶೇಕಡ 31 ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ.40 ರಷ್ಟು ಪಿಟ್ ಮೆಂಟ್ ಸೌಲಭ್ಯ 2022ರ ಜುಲೈ ಒಂದರಿಂದ ಜಾರಿಗೆ ತರುವುದು, ಹಾಲಿ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಶ್ರೇಣಿಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೇಂದ್ರ ಸರಕಾರದ ಮಾದರಿಯಲ್ಲಿ ನಾಲ್ಕು ವರ್ಷಕ್ಕೊಮ್ಮೆ ಎಲ್ ಟಿಸಿ ಸೌಲಭ್ಯ ಮತ್ತು ದಿನಭತ್ಯೆ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ನಿಗದಿ ಮಾಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.