ಭೀಕರ ಅಪಘಾತಕ್ಕೆ ರೈತರಿಬ್ಬರ ಬಲಿ
ಯುವ ಭಾರತ ಸುದ್ದಿ ಖಾನಾಪುರ :
ಗುರುವಾರ ಮಧ್ಯರಾತ್ರಿ ವಾಹನ ಹರಿದು ಇಬ್ಬರು ರೈತರು ಬಲಿಯಾದ ಘಟನೆ ಗೋದೊಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಗೋಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ( 65), ಪುಂಡಲಿಕ್ ರೆಡೇಕಾರ (72 ) ಮೃತಪಟ್ಟಿದ್ದಾರೆ. ಪುಂಡಲಿಕ್ ಅವರ ಹಿರಿಯ ಸಹೋದರ ಕೃಷ್ಣರೇಡೆಕರ (74)ಗಾಯಗೊಂಡು ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಬ್ಬರು ಮಂಜುನಾಥ (47) ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋದೊಳ್ಳಿ ಗ್ರಾಮದ ನಾಲ್ವರು ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ನೀರು ಹಾಯಿಸಲು ಹೊರಟಿದ್ದರು. ಆ ಸಂದರ್ಭದಲ್ಲಿ ವಾಹನ ಇವರಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಘಟನೆ ವಿವರ :
ಈ ಬಗ್ಗೆ ಸಿಕ್ಕಿರುವ ಮಾಹಿತಿ ಏನೆಂದರೆ ಗೋಧೋಳಿ ಭಾಗದಲ್ಲಿ ಕರಡಿ ಸೇರಿದಂತೆ ಕಾಡುಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಈ ಭಾಗದ ರೈತರಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಹೀಗಾಗಿ ಈ ಭಾಗದ ರೈತರು ಒಂದೆಡೆ ಸೇರಿ ರಾತ್ರಿ ವೇಳೆ ಹೊಲಗಳಿಗೆ ಹೋಗುತ್ತಾರೆ. ಅದೇ ರೀತಿ ಗುರುವಾರ ರಾತ್ರಿ ಐದಾರು ಜನ ರೈತರು ಒಂದೆಡೆ ಸೇರಿದ್ದರು. ರಾತ್ರಿ 12:00 ಗಂಟೆ ಸುಮಾರಿಗೆ ಜಮೀನಿನಲ್ಲಿ ಬೋರ್ ವೆಲ್ ಪೈಪ್ ಬದಲಾಯಿಸಿ ಹುಬ್ಬಳ್ಳಿ-ಗೋವಾ ಹೆದ್ದಾರಿಯಲ್ಲಿ ರಸ್ತೆ ಬದಿ ಕುಳಿತು ವೀಳ್ಯದೆಲೆ ತಿನ್ನುತ್ತಿದ್ದಾಗ ಗೋವಾದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಅಪರಿಚಿತ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೂಡಲೇ ಗ್ರಾಮದಲ್ಲಿ ಈ ಸುದ್ದಿ ಹಬ್ಬಿದ್ದು, ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮಾಜಿ ಶಾಸಕ ಅರವಿಂದ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದರು.