ಶಾಲೆ ಬಿಡುವ ಮಕ್ಕಳ ಸಂಖ್ಯೆ ಎಷ್ಟು ?
ನವದೆಹಲಿ:
2021-22ರಲ್ಲಿ ಪ್ರೌಢಶಿಕ್ಷಣ ಹಂತದಲ್ಲಿ ಶಾಲೆ ಬಿಟ್ಟಮಕ್ಕಳ ರಾಷ್ಟ್ರೀಯ ಸರಾಸರಿ ಸೇ.12.6ರಷ್ಟಿದ್ದರೆ, ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕವಾಗಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಇದ್ದಿದ್ದರಲ್ಲಿ ಖುಷಿಯ ವಿಷಯವೆಂದರೆ 2020-21ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
2023-24ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಜಾರಿಯ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ‘ಯೋಜನಾ ಅನುಮೋದನಾ ಮಂಡಳಿ’ ಸಭೆಯಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶೇ.100ರಷ್ಟುನೋಂದಣಿ ಮಾಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಹೀಗೆ ಮಕ್ಕಳ ಶಾಲೆ ಬಿಡುವ ಪ್ರಮಾಣವು ದೊಡ್ಡ ಅಡ್ಡಿಯಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
2021-22ನೇ ಸಾಲಿನಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಟ್ಟಮಕ್ಕಳ ಪ್ರಮಾಣ ಶೇ.12.6ರಷ್ಟಿತ್ತು. ಆದರೆ ಈ ಪ್ರಮಾಣವು ಮೇಘಾಲಯದಲ್ಲಿ ಶೇ.21.7, ಬಿಹಾರದಲ್ಲಿ ಶೇ.20.46, ಅಸ್ಸಾಂನಲ್ಲಿ ಶೇ.20.3, ಗುಜರಾತ್‌ನಲ್ಲಿ ಶೇ.17.85, ಪಂಜಾಬ್‌ನಲ್ಲಿ ಶೇ.17.2 ಆಂಧ್ರಪ್ರದೇಶದಲ್ಲಿ ಶೇ.16.7 ಮತ್ತು ಕರ್ನಾಟಕದಲ್ಲಿ ಶೇ.14.6ರಷ್ಟಿತ್ತು ಎಂದು ವರದಿ ಹೇಳಿದೆ. ಇನ್ನು ಕರ್ನಾಟಕದಲ್ಲಿ ಶಾಲೆ ಬಿಡುವ ವಿದ್ಯಾರ್ಥಿಗಳ ಪೈಕಿ ಬಾಲಕರ ಪ್ರಮಾಣ ಶೇ.16.2ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ.13ರಷ್ಟಿದೆ. ಕರ್ನಾಟಕದಲ್ಲಿ 2020-21ನೇ ಸಾಲಿನಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ ಶೇ.16.6ರಷ್ಟಿತ್ತು. ಅದು ಇದೀಗ ಶೇ.14.6ಕ್ಕೆ ಇಳಿಕೆ ಕಂಡಿದೆ. ಮಧ್ಯಪ್ರದೇಶದಲ್ಲಿ ಮಕ್ಕಳ ಶಾಲಾ ನೋಂದಣಿಗೆ ಕೈಗೊಂಡ ವಿವಿಧ ಕ್ರಮಗಳ ಫಲವಾಗಿ 2020-21ರಲ್ಲಿ ಶೇ.23.8ರಷ್ಟಿದ್ದ ಮಕ್ಕಳ ಶಾಲೆ ಬಿಡುವ ಪ್ರಮಾಣ 2021-22ರಲ್ಲಿ ಶೇ.10.1ಕ್ಕೆ ಇಳಿಕೆ ಕಂಡಿದೆ ಎಂದು ವರದಿ ಹೇಳಿದೆ.
ವಿದ್ಯಾರ್ಥಿಗಳ ಪೋಷಕರ ಆರ್ಥಿಕ ಸ್ಥಿತಿಗತಿ, ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ಆರೋಗ್ಯ ಸಮಸ್ಯೆ, ಶಾಲೆಗಳಿಗೆ ಇರುವ ದೂರ ಮೊದಲಾದ ವಿಷಯಗಳು, ವಿದ್ಯಾರ್ಥಿಗಳು ಪ್ರೌಢಶಾಲೆ ಹಂತದಲ್ಲಿ ಶಿಕ್ಷಣದಿಂದ ದೂರವಾಗಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.