ಯಡಿಯೂರಪ್ಪ ಭೇಟಿಯಾಗಿ ಚರ್ಚಿಸಿದ ಕಿರಣ ಜಾಧವ
ಯುವ ಭಾರತ ಸುದ್ದಿ ಬೆಳಗಾವಿ :
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಳಗಾವಿಯ ಮರಾಠಾ ನಾಯಕ ಹಾಗೂ ಕರ್ನಾಟಕ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸುಮಾರು 90 ಸಾವಿರ ಮರಾಠಾ ಸಮುದಾಯಕ್ಕೆ ಸೇರಿರುವ ಮತದಾರರಿದ್ದಾರೆ. ಮರಾಠಾ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ ಕಿರಣ ಜಾಧವ ಅವರು ಮರಾಠಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಅಭಿವೃದ್ಧಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚಿಸಿದರು.
ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮ (ಕೆಎಂಡಿಸಿ) ಸ್ಥಾಪನೆ ಮತ್ತು ಮರಾಠಾ ಸಮುದಾಯದ ಪ್ರಗತಿಗೆ ರಾಜ್ಯದ ಬಿಜೆಪಿ ಸರಕಾರ ಕೈಗೊಂಡಿರುವ ಬದ್ಧತೆಯ ನಿರ್ಧಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಮೊದಲಿನಿಂದಲೂ ಕರ್ನಾಟಕದ ಎಲ್ಲಾ ಸಮುದಾಯಗಳ ಜೊತೆ ಅತ್ಯುತ್ತಮ ಸ್ನೇಹ-ಸಂಬಂಧ ಹೊಂದಿದ್ದಾರೆ. ರೈತರು ಹಾಗೂ ಜನರ ನಡುವೆ ಬೆಳೆದಿರುವ ಗಟ್ಟಿ ಧ್ವನಿಯ ನಾಯಕ ಅವರಾಗಿದ್ದು ಮರಾಠಾ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯದ ಪ್ರತಿನಿಧಿಗೆ ಅವಕಾಶ ಮಾಡಿಕೊಡುವಂತೆ ಕಿರಣ ಜಾಧವ ಅವರು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.