3ಸಾವಿರ ಮಹಿಳೆಯರಿಂದ ನಡೆದ ಶ್ರೀರಾಮ ನಾಮ ಜಪ ಕಾರ್ಯಕ್ರಮ ಯಶಸ್ವಿ.!
ಗೋಕಾಕ: ಅಯೋಧ್ಯೆಯ ರಾಮಲಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ವಿಶ್ವ ಹಿಂದೂ ಪರಿಷತ, ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ವತಿಯಿಂದ ನಗರದ ಶ್ರೀಮಹಾಲಕ್ಷ್ಮಿ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡ ರಾಮನಾಮ ಜಪ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ರಾಷ್ಟ್ರೀಯ ಸೇವಿಕಾ ಸಮಿತಿ ಮುಖಂಡರಾದ ಸೀತಾಬಾಯಿ ರಾಮಚಂದ್ರ ನಾಯಕ ಕಾರ್ಯಕ್ರಮ ಶ್ರೀರಾಮನ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಮಹಿಳೆಯರಿಗಾಗಿ ಮಾತ್ರ ಆಯೋಜಿಸಿದ್ದ ರಾಮನಾಮ ಜಪ ಕಾರ್ಯಕ್ರಮದಲ್ಲಿ ೩ಸಾವಿರ ಮಹಿಳೆಯರು ಒಂದೇ ರೀತಿಯ ಬಟ್ಟೆ ಧರಿಸಿ ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ನಾಮವನ್ನು ೧೦೮ ಸೆಟ್‌ಗಳನ್ನು ಒಟ್ಟು ೧೧ ಬಾರಿ ಸಾಮೂಹಿಕವಾಗಿ ಜಪಿಸಿದರು. ಏಕಕಾಲಕ್ಕೆ ಮಹಿಳೆಯರಿಂದ ಹೊರಬಂದ ರಾಮನಾಮ ಜಪದ ಸ್ವರಗಳು ಗಮನ ಸೆಳೆಯಿತು.
ವೇದಿಕೆಯ ಮೇಲೆ ಭವ್ಯವಾದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಜೊತೆಗೆ ಮಹಿಳೆಯರ ೧೧ ಭಜನಾ ತಂಡಗಳು ಸಹ ವಿವಿಧ ನಾಮಾವಳಿಗಳನ್ನು ಹಾಡಿದವು. ಶಾಲಾ ಕಾಲೇಜು ಮಕ್ಕಳು ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವಿಎಚ್ ಪಿ ಪ್ರಮುಖರಾದ ನಾರಾಯಣ ಮಠಾಧಿಕಾರಿ, ವಿಎಚ್ ಪಿ ನಗರ ಅಧ್ಯಕ್ಷ ಆನಂದ ಪಾಟೀಲ, ಉಪಾಧ್ಯಕ್ಷ ಸಂಜು ಚಿಪ್ಪಲಕಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.