ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ-ಮೀರಾಸಾಬ ನದಾಫ.!
ಗೋಕಾಕ: ರಾಜ್ಯದಲ್ಲಿ ೨೫ರಿಂದ ೩೦ಲಕ್ಷ ಜನಸಂಖ್ಯೆ ಹೊಂದಿರುವ ನದಾಫ/ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು, ಶೋಷಿತ ಹಾಗೂ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸುಂತೆ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ತಾಲೂಕ ಅಧ್ಯಕ್ಷ ಮೀರಾಸಾಬ ನದಾಫ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಳೆದ ಹಲವು ವರ್ಷಗಳಿಂದ ನದಾಫ/ಪಿಂಜಾರ ಸಮಾಜವು ಸರಕಾರಗಳ ಗಮನ ಸೆಳೆಯಲು ಪ್ರತಿಭಟಿಸುತ್ತ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಳೀಯ ಜಿಲ್ಲಾಧಿಕಾರಿ ಹಾಗೂ ತಾಲೂಕ ದಂಢಾಧಿಕಾರಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲಹ್ಮದ ಅವರ ನೇತ್ರತ್ವದಲ್ಲಿ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ನಮ್ಮ ಬೇಡಿಕೆಗೆ ಸಿಎಮ್ ಭರವಸೆ ನೀಡಿದ್ದರು.
ನದಾಫ್/ಪಿಂಜಾರ/ದೂದೇಕುಲ/ಮನ್ಸೂರಿ ಎಂದು ಕರೆಯಲಾಗುವು ನದಾಫ, ಪಿಂಜಾರ ಜನಾಂಗವು ಹತ್ತಿ ಉತ್ಪನ್ನ ತಯಾರಿಸುವ ಜಾಗತಿಕ ವೃತ್ತಿ ಸಮುದಾಯದ ಒಂದು ಭಾಗವಾಗಿದೆ. ಹೊಟ್ಟೆ ಪಾಡಿಗಾಗಿ ಹತ್ತಿ ಅರಳೆ ಮೂಟೆಗಳನ್ನು ಸೈಕಲ್ ಸೇರಿದಂತೆ ಮತ್ತಿತರು ವಾಹನಗಳಲ್ಲಿ ಹೇರಿಕೊಂಡು ಊರೂರು ಅಲೆಯುತ್ತಾ ಗಾದೆ, ಹಾಸಿಗೆ, ಹೊದಿಕೆ, ದಿಂಬುಗಳನ್ನು ತಯಾರಿಸುವುದು, ದುರಸ್ತಿ ಮಾಡುವುದು, ಮಾರಾಟ ಮಾಡುತ್ತಾ ಕನಿಷ್ಠ ಆದಾಯದ ಅನಿಶ್ಚಿತೆಯಲ್ಲಿ ಕೆಲವೊಮ್ಮೆ ಹಸಿದ ಹೊಟ್ಟೆಗೆ ಅನ್ನವು ಸಿಗದ ಪರಿಸ್ಥಿತಿಯಲ್ಲಿದ್ದಾರೆ.
ಈ ಸಮುದಾಯದ ಅಲ್ಪಸಂಖ್ಯಾತ ಕುಟುಂಬಗಳು ವೃತ್ತಿಯಲ್ಲಿನ ಅನಿಶ್ಚಿತೆಯಿಂದಾಗಿ ತಮ್ಮ ಪಾರಂಪರಿಕ ವೃತ್ತಿಯನ್ನು ಬಿಟ್ಟು ಕೃಷಿ ಕಾರ್ಮಿಕರಾಗಿ, ಇತರೆ ಕೆಲಸಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಶೈಕ್ಷಣಿಕವಾಗಿ ಹಿಂದುಳಿದ ಕಾರಣಕ್ಕೆ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದು, ಈ ಸಮಾಜದಲ್ಲಿ ಬಹುತೇಕ ಜನ ಕೂಲಿ-ನಾಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಯೋಜನೆಗಳು ಸಮಾಜಕ್ಕೆ ಸರಿಯಾಗಿ ತಲುಪುತ್ತಿಲ್ಲ. ಹತ್ತಿ ಹಿಂಜುವಿಕೆಯಿAದ ಏಳುವ ಹತ್ತಿಯ ಅತೀ ಸೂಕ್ಷ್ಮ ಧೂಳಿನ ಕಣಗಳು ಈ ದುಡಿಮೆಗಾರರ ದೇಹ ಪ್ರವೇಶಿಸಿ ಅಸ್ತಮಾ ಹಾಗೂ ಕ್ಷಯರೋಗಕ್ಕೆ ಪಿಂಜಾರ ವೃತ್ತಿದಾರರು ಬಲಿಯಾಗಿರುವುದು ಉಂಟು. ಗ್ರಾಮೀಣ ಹಾಗೂ ಶಹರ ಪ್ರದೇಶಗಳಲ್ಲಿ ಗುಡಿಸಲು ನಿವಾಸಿಗಳಗಿ ಅರೆಮಣ್ಣು, ಜಿಂಕ್ ಶೀಟ್ ಮೇಲ್ಚಾವಣಿಗಳಮನೆಯಲ್ಲಿ ಮೂಲ ಸೌಲಭ್ಯಗಳು ಇಲ್ಲದೇ ಈ ಸಮುದಾಯ ವಾಸಿಸುತ್ತಿದೆ. ಈಬಗ್ಗೆ ಸಮೀಕ್ಷೆ ನಡೆಸಿ ಇವರಿಗಾಗಿ ವಿಶೇಷ ಆರ್ಥಿಕ ನೀತಿಯನ್ನು ರೂಪಿಸಬೇಕಾಗಿದೆ.
ಜೀವನ ರೂಪಿಸಿಕೊಳ್ಳಲು ಅಲೆಮಾರಿಗಳಾಗಿ ವೃತ್ತಿ ನಿರ್ವಹನೆ ಮಾಡುತ್ತಾ ಎಲ್ಲ ಧರ್ಮದವರೊಂದಿಗೆ ಸಹಬಾಳ್ವೆ ಸಾಗಿಸುತ್ತಾ ಕೋಮು ಸೌಹರ್ದತೆಯಲ್ಲಿ ಜೀವನಸಾಗಿಸುತ್ತಿರುವ ನದಾಫ/ಪಿಂಜಾರ ಜನಾಂಗದ ರಾಜ್ಯದಲ್ಲಿ ೨೫ ರಿಂದ ೩೦ಲಕ್ಷ ಜನಸಂಖ್ಯೆ ಹೊಂದಿದೆ. ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿ ನದಾಫ/ಪಿಂಜಾರ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಸಹ ನದಾಫ/ಪಿಂಜಾರ ಜನಾಂಗದ ಸರ್ವೋತೋಮುಖ ಅಭಿವೃದ್ಧಿಗಾಗಿ ನದಾಫ/ಪಿಂಜಾರ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕಿದೆ. ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಈ ಸಮುದಾಯದ ಬಗ್ಗೆ ಚರ್ಚೆ ನಡೆಸಿ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.