Breaking News

ಅಂಗಾರಕ ಸಂಕಷ್ಟ ಚತುರ್ಥಿ: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ

Spread the love

‌ ‌ ‌ ‌ ‌
ಅಂಗಾರಕ ಸಂಕಷ್ಟ ಚತುರ್ಥಿ: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ

ಅಂಗಾರಕ ಸಂಕಷ್ಟಹರ ಚತುರ್ಥಿ ದಿನ ಹಿಂದೂಗಳಿಗೆ ಶುಭ ಉಪವಾಸದ ದಿನವಾಗಿದ್ದು, ಮಂಗಳವಾರದಂದು ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುತ್ತದೆ. ಈ ವ್ರತ ಗಣೇಶನಿಗೆ ಅರ್ಪಿತವಾಗಿದೆ ಮತ್ತು ಇದನ್ನು ‘ಅಂಗಾರಕಿ ಸಂಕಷ್ಟ ಚತುರ್ಥಿ’ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ಚಂದ್ರ ಮಾಸದ ‘ಕೃಷ್ಣ ಪಕ್ಷ’ ಸಮಯದಲ್ಲಿ ಪೂರ್ಣಿಮಾ ನಂತರ ‘ಚತುರ್ಥಿ’ (4 ನೇ ದಿನ) ದಿನದಂದು ಉಪವಾಸವನ್ನು ಮಾಡಲಾಗುತ್ತದೆ.

ಈ ಬಾರಿ ಅಂಗಾರಕ ಸಂಕಷ್ಟಹರ ಚತುರ್ಥಿ ದಿನವನ್ನು ಜನವರಿ 10 ರಂದು ಮಂಗಳವಾರ ಆಚರಿಸಲಾಗುತ್ತದೆ. ‌

ಜನವರಿ 10, 2023 ರ ಅಂಗಾರಕ ಚತುರ್ಥಿ ಶುಭ ಮುಹೂರ್ತ:
ವರ್ಷದ ಮೊದಲ ಅಂಗಾರಕ ಚತುರ್ಥಿಯನ್ನು ಮಂಗಳವಾರ ಆಚರಿಸಲಾಗುತ್ತಿದೆ. ಚತುರ್ಥಿ ತಿಥಿ ಪ್ರಾರಂಭ : ಜನವರಿ 10 ರಂದು ಹಗಲು 12:08 ರಿಂದ ಆರಂಭವಾಗಿ ಚತುರ್ಥಿ ತಿಥಿ ಅಂತ್ಯ : ಜನವರಿ 11 ರಂದು ಹಗಲು 02:30 ರವರೆಗೆ ಇರುತ್ತದೆ.

*ಅಂಗಾರಕ ಸಂಕಷ್ಟ ಚತುರ್ಥಿ ಮಹತ್ವ:*
‌ ಅಂಗಾರಕ ಚತುರ್ಥಿಯನ್ನು ಎಲ್ಲಾ ಸಂಕಷ್ಟ ಗಣೇಶ ಚತುರ್ಥಿ ದಿನಗಳಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ದಿನವು ಅಪಾರ ಮಹತ್ವದ್ದಾಗಿದೆ ಮತ್ತು ಈ ಹಬ್ಬದ ಆಚರಣೆಗಳು ವಿಶೇಷವಾಗಿ ಭಾರತದ ಪಶ್ಚಿಮ ಪ್ರದೇಶಗಳಲ್ಲಿ ಪ್ರಸಿದ್ಧವಾಗಿವೆ. ಮಹಾರಾಷ್ಟ್ರದಲ್ಲಿ ಅಂಗಾರಕ ಚತುರ್ಥಿ ದಿನದಂದು ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗುತ್ತದೆ.

“ಅಂಗಾರಕ” ಎಂಬುದು ಸಂಸ್ಕೃತ ಮೂಲದ ಪದವಾಗಿದ್ದು, ಇದರ ಅರ್ಥ ‘ಸುಟ್ಟ ಕಲ್ಲಿದ್ದಲಿನಂತೆ ಕೆಂಪು’. ಈ ದಿನದಂದು ಭಗವಾನ್‌ ಗಣೇಶನನ್ನು ಪೂಜಿಸುವುದರ ಮೂಲಕ ಮತ್ತು ಉಪವಾಸ ವ್ರತವನ್ನು ಮಾಡುವುದರಿಂದ ಅವರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ ಎಂದು ಹಿಂದೂ ಭಕ್ತರು ಬಲವಾಗಿ ನಂಬುತ್ತಾರೆ. ಅಂಗಾರಕ ಚತುರ್ಥಿ ದಿನವು ವಿಮೋಚನೆಯ ದಿನ. ಈ ದಿನ ಭಗವಾನ್‌ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯು ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದವನ್ನು ಪಡೆಯುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ನೆಮ್ಮದಿಯ ಮತ್ತು ಶಾಂತಿಯುತ ಜೀವನವನ್ನು ನಡೆಸುತ್ತಾನೆ ಎಂದು ಹೇಳಲಾಗಿದೆ.

*ಅಂಗಾರಕ ಚತುರ್ಥಿ ಪೂಜೆ ವಿಧಾನ:*
‌ 1. ಅಂಗಾರಕ ಚತುರ್ಥಿಯಲ್ಲಿ ಭಕ್ತರು ಬೇಗನೇ ಎದ್ದು ಸ್ನಾನ ಮಾಡುತ್ತಾರೆ. ಅಂದು ಮಣ್ಣು, ತಾಮ್ರ ಅಥವಾ ಚಿನ್ನದಿಂದ ಮಾಡಿದ ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ. ಸರಿಯಾದ ಆಚರಣೆಗಳು ಮತ್ತು ಅರ್ಪಣೆಗಳೊಂದಿಗೆ ಅವನನ್ನು ಪೂಜಿಸಲಾಗುತ್ತದೆ. ಗಣೇಶನ ಅಚ್ಚುಮೆಚ್ಚಿನ ಸಿಹಿ ‘ಮೋದಕ’ ವನ್ನು ‘ಆರತಿ’ ಮಾಡಿದ ನಂತರ ಅರ್ಪಿಸಲಾಗುತ್ತದೆ.

2. ಈ ದಿನ ಗಣೇಶನನ್ನು ಮೆಚ್ಚಿಸಲು ಭಕ್ತರು ಅಂಗಾರಕ ಚತುರ್ಥಿ ದಿನದಂದು ಕಟ್ಟುನಿಟ್ಟಾದ ವ್ರತವನ್ನು ಇಟ್ಟುಕೊಳ್ಳುತ್ತಾರೆ. ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಕೊನೆಗೊಳ್ಳುತ್ತದೆ. ಇಡೀ ದಿನವನ್ನು ಏನನ್ನು ತಿನ್ನದೇ ಧ್ಯಾನದಲ್ಲಿ ಕಳೆಯುತ್ತಾರೆ. ಕೆಲವು ಜನರು ಭಾಗಶಃ ಉಪವಾಸವನ್ನು ಆಚರಿಸುತ್ತಾರೆ, ಇದರಲ್ಲಿ ಹಣ್ಣುಗಳನ್ನು ಮತ್ತು ಸಾಬುದಾನ ಖಿಚಡಿಗಳನ್ನು ತಿನ್ನಲು ಅವಕಾಶವಿದೆ.

3. ಉಪವಾಸ ಆಚರಿಸುವಾಗ, ಅತಿಯಾದ ದ್ರವ್ಯವನ್ನು ಕುಡಿಯುವುದು ಅಥವಾ ಅಡಿಕೆ ಮತ್ತು ಎಲೆಯನ್ನು ಅಥವಾ ತಂಬಾಕು ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದು ಉಪವಾಸವನ್ನು ಮುರಿಯುವುದಕ್ಕೆ ಸಮಾನವಾಗಿರುತ್ತದೆ ಎನ್ನುವ ನಂಬಿಕೆಯಿದೆ.

4. ಅಂಗಾರಕ ಚತುರ್ಥಿ ವ್ರತವು ಚಂದ್ರನನ್ನು ನೋಡಿದ ನಂತರ ಮತ್ತು ಗಣೇಶ ದೇವರ ಪೂಜೆಯನ್ನು ಮಾಡಿದ ನಂತರ ಕೊನೆಗೊಳ್ಳುತ್ತದೆ. ಭಕ್ತರು ಗಣೇಶನಿಗೆ ‘ಅರ್ಘ್ಯ’ ಅರ್ಪಿಸುತ್ತಾರೆ ಮತ್ತು ನಂತರ ಶುದ್ಧ ಸಸ್ಯಾಹಾರಿ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯುತ್ತಾರೆ.
ಭಕ್ತರು ಈ ದಿನದಂದು ಶ್ರೀಗಂಧದ, ಅಕ್ಕಿ ಮತ್ತು ಹೂವುಗಳೊಂದಿಗೆ ಚಂದ್ರ ದೇವನನ್ನು ಪೂಜಿಸುತ್ತಾರೆ.

5. ಗಣೇಶನಿಗೆ ಅರ್ಪಿತವಾದ ವೈದಿಕ ಮಂತ್ರಗಳನ್ನು ಈ ದಿನ ಪಠಿಸಲಾಗುತ್ತದೆ. ಅಂಗಾರಕ ಚತುರ್ಥಿಯ ದಿನದಂದು ಚಂದ್ರನು ಉದಯಿಸುವ ಮೊದಲು ‘ಗಣಪತಿ ಅಥರ್ವಶೀರ್ಷ’ ಪಾರಾಯಣ ಮಾಡುವುದು ಬಹಳ ಲಾಭದಾಯಕ. ಗಣೇಶನನ್ನು ಸ್ತುತಿಸಿ ಭಜನೆಗಳು ಮತ್ತು ಧಾರ್ಮಿಕ ಸ್ತುತಿಗೀತೆಗಳನ್ನು ಸಹ ಈ ದಿನ ಹಾಡಲಾಗುತ್ತದೆ.

*ಅಂಗಾರಕ ಚತುರ್ಥಿ ಆಚರಣೆಯ ಪ್ರಯೋಜನ:*
‌ ‌ ಅಂಗಾರಕ ಚತುರ್ಥಿಯ ಪ್ರಾಮುಖ್ಯತೆ ಮತ್ತು ಆಚರಣೆಗಳನ್ನು ಧಾರ್ಮಿಕ ಗ್ರಂಥಗಳಾದ ‘ಗಣೇಶ ಪುರಾಣ’ ಮತ್ತು ‘ಸ್ಮೃತಿ ಕೌಸ್ತುಭ’ ಗಳಲ್ಲಿ ಉಲ್ಲೇಖಿಸಲಾಗಿದೆ. ಸಂತೋಷದಾಯಕ ಮತ್ತು ಸಮೃದ್ಧ ಜೀವನಕ್ಕಾಗಿ ಭಕ್ತರು ಈ ದಿನ ಗಣೇಶನನ್ನು ಆರಾಧಿಸುತ್ತಾರೆ. ‌ ‌ ಹಿಂದೂ ಧರ್ಮದ ಪ್ರಕಾರ, ಗಣೇಶನು ಬುದ್ಧಿವಂತಿಕೆಯ ಸರ್ವೋಚ್ಚ ಅಧಿಪತಿ ಮತ್ತು ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವವನು ಎಂದೂ ತಿಳಿದುಬಂದಿದೆ. ಆದ್ದರಿಂದ ಗಣಪತಿ ದೇವರನ್ನು ಪೂಜಿಸುವುದರಿಂದ ಭಕ್ತರ ಜೀವನಲ್ಲಿನ ಎಲ್ಲಾ ವಿಘ್ನಗಳನ್ನು ದೂರಾಗಿಸುತ್ತಾನೆ ಮತ್ತು ಅವರ ಜೀವನದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾನೆ.

ಅಂಗಾರಕ ಚತುರ್ಥಿಯಾದ್ದರಿಂದ ಭಕ್ತರು ವ್ರತವನ್ನು ಆಚರಿಸಬಹುದು ಮತ್ತು ಗಣೇಶನಿಗೆ ವಿಶೇಷ ಪೂಜೆಯನ್ನು ಮಾಡಬಹುದು. ಒಮ್ಮೆ ಅಂಗಾರಕ ಸಂಕಷ್ಟ ಚತುರ್ಥಿಯನ್ನು ಆಚರಿಸಿದರೆ ವರ್ಷದಲ್ಲಿನ ಎಲ್ಲಾ ಸಂಕಷ್ಟ ಚತುರ್ಥಿಯ ಫಲವನ್ನು ಪಡೆದುಕೊಳ್ಳಬಹುದು.


Spread the love

About Yuva Bharatha

Check Also

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !

Spread the loveಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ ! ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು …

Leave a Reply

Your email address will not be published. Required fields are marked *

2 × 2 =