ಪುತ್ತೂರು: ಕಾರ್ಗೆ ಡಿಕ್ಕಿ ಹೊಡೆದ ನಂತ್ರ ಬಂಪರ್ ಒಳಗೆ ಸಿಲುಕಿದ ನಾಯಿ : ಅದೇ ಸ್ಥಿತಿಯಲ್ಲಿ 70 ಕಿಮೀ ಸಾಗಿದ್ರೂ ಯಾವುದೇ ಗಾಯಗಳಿಲ್ಲದೆ ಪಾರು..!
ಯುವ ಭಾರತ ಸುದ್ದಿ ಮಂಗಳೂರು :
ಕಾರಿಗೆ ಡಿಕ್ಕಿಯಾದ ನಾಯಿಯೊಂದು ನಂತರ ಕಾರಿನ ಬಂಪರಿನೊಳಗೆ ಸಿಲುಕಿಕೊಂಡಿದ್ದು, ನಂತರ ಕಾರು 70 ಕಿಮೀ ದೂರ ಸಾಗಿದೆ. ಆದರೂ ನಾಯಿ ಮಾತ್ರ ಯಾವುದೇ ಗಾಯಗಳಾಗದೆ ಬಂಪರ್ ಒಳಗಿನಿಂದ ಬಚಾವ್ ಆಗಿ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ಬಳ್ಪ ಎಂಬಲ್ಲಿ ನಡೆದ ವರದಿಯಾಗಿದೆ.
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಪುತ್ತೂರಿಗೆ ವಾಪಸ್ಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದು ನಾಯಿಗಾಗಿ ಕಾರಿನ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ನಾಯಿ ಸುತ್ತಮುತ್ತ ಕಂಡುಬರಲಿಲ್ಲ.
ನಂತರ ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಅವರ ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿನ ಕಬಕದ ತಮ್ಮ ಮನೆಗೆ ಬಂದಿದ್ದಾರೆ. ಅಲ್ಲಿ ಅವರು ಕಾರನ್ನು ಪರಿಶೀಲಿಸಿದಾಗ ಬಂಪರ್ ಗ್ರಿಲ್ ತುಂಡಾಗಿರುವುದು ಕಂಡುಬಂದಿದೆ. ಅಲ್ಲದೆ, ತುಂಡಾದ ಗ್ರಿಲ್ ಮಧ್ಯೆ ಡಿಕ್ಕಿಯಾದ ನಾಯಿ ಕಂಡುಬಂದಿದೆ…!
ನಂತರ ಪಕ್ಕದಲ್ಲಿದ್ದ ಗ್ಯಾರೇಜ್‌ನವರಿಗೆ ಮಾಹಿತಿ ನೀಡಿದ್ದಾರೆ.
ಅವರು ಬಂದು ಬಂಪರ್ ತೆಗೆದ ನಂತರ ನಾಯಿ ಸುರಕ್ಷಿತವಾಗಿ ಹೊರಬಂದಿದೆ. ಅದು ಡಿಕ್ಕಿ ಹೊಡೆದ ಜಾಗದಿಂದ ಸುಮಾರು 70 ಕಿಮೀ ದೂರ ಬಂಪರ್ ಒಳಗೆ ಸಿಕ್ಕಿಹಾಕಿಕೊಂಡ ರೀತಿಯಲ್ಲಿಯೇ ಕಾರಿನ ಜೊತೆ ಬಂದಿದೆ. ಆದರೆ ಅಚ್ಚರಿ ಎಂಬಂತೆ ನಾಯಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.