Breaking News

ನಕಲಿ ಪತ್ರಕರ್ತರಿಗೆ ಕಡಿವಾಣ ಬೀಳಬೇಕು

Spread the love

ನಕಲಿ ಪತ್ರಕರ್ತರಿಗೆ ಕಡಿವಾಣ ಬೀಳಬೇಕು

ಕಂಡು ಕೇಳರಿಯದ ಪತ್ರಿಕೆಗಳ ಗುರುತಿನ ಚೀಟಿ ಮೂಲಕ ವಾಹನಗಳಲ್ಲಿ ಪ್ರೆಸ್ ಬರೆಸಿಕೊಳ್ಳುವವರ ವಿರುದ್ಧ ಕ್ರಮ ಅವಶ್ಯಕ

ಯುವ ಭಾರತ ಸುದ್ದಿ ತೆಲಸಂಗ (ಅಥಣಿ):
ಪತ್ರಿಕೋದ್ಯಮದ ಗಂಧ ಗಾಳಿ, ಸಭ್ಯತೆ, ನೀತಿ, ನಿಯಮ ಯಾವುದೂ ಗೊತ್ತಿಲ್ಲದ
ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಕೆಲವು ಹೆಬ್ಬೆಟ್ಟು ನಕಲಿ ಪತ್ರಕರ್ತರಿಂದ ನಿಜವಾದ
ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮದ ಘನತೆ- ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಗ್ರಾಮೀಣ
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಖೊಬ್ರಿ ಹೇಳಿದರು.

ಗ್ರಾಮದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಅವರು
ಮಾತನಾಡಿ, ಯೂಟ್ಯೂಬ್ ಮತ್ತು ಮುದ್ರಣವಾಗದ ವಾರಪತ್ರಿಕೆಗಳ ಹೆಸರಿನಲ್ಲಿ ಡಿಜಿಟಲ್
ಗುರುತಿನ ಪತ್ರ ಹಾಕಿಕೊಂಡು ಒಂದಕ್ಷರವನ್ನೂ ಮೂಡಿಸದೆ ಅಧಿಕಾರಿ ಹಾಗೂ
ಸಾರ್ವಜನಿಕರನ್ನು ಹೆದರಿಸಿ ಅನೀತಿಗೆ ಕೈ ಹಾಕಿ ಬದುಕುತ್ತಿರುವುರಿಂದ ಪತ್ರಕರ್ತರಿಗೆ
ಸಮಾಜದಲ್ಲಿರುವ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಸುದ್ದಿ ಪ್ರಸಾರಕ್ಕೆ ಬೇಕಿರುವ
ಕನಿಷ್ಠ ಕಾನೂನಿನ ಅರಿವೂ ಇಲ್ಲ. ಕನ್ನಡ ಬರವಣಿಗೆ ವ್ಯಾಕರಣವಂತೂ ಮೊದಲೇ ಗೊತ್ತಿಲ್ಲ.
ಇಂಥವರಿಗೆ ಕಡಿವಾಣ ಹಾಕಬೇಕಾಗಿರುವ ಅಧಿಕಾರಿ ವರ್ಗ ದೂರು ನೀಡಿದರೆ ಕ್ರಮ
ಕೈಗೊಳ್ಳುತ್ತೇವೆಂದು ಹೇಳಿ ಮೌನವಾಗುತ್ತಿದ್ದಾರೆ. ಬೆಕ್ಕಿನ ಕೊರಳಿಗೆ ಗಂಟೆ
ಕಟ್ಟುವವರ್ಯಾರು ಎಂಬ ಪ್ರಶ್ನೆ ಎದುರಾಗುತ್ತಿದೆ. 30-40 ವರ್ಷಗಳಿಂದ ಈ ಉದ್ಯಮದಲ್ಲಿ
ಕೆಲಸ ಮಾಡಿದ ಹಿರಿಯ ಪತ್ರಕರ್ತರು ಈ ವ್ಯವಸ್ಥೇ ನೋಡಿ ಮರುಗುವಂತಾಗಿದೆ. ದಿನದಿಂದ
ದಿನಕ್ಕೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ. ಪತ್ರಕರ್ತರ
ಸೋಗಿನಲ್ಲಿರುವವರಿಗೆ ಕಾನೂನಿನ ಭಯ ಹುಟ್ಟಿದರೆ ಮಾತ್ರ ಇದಕ್ಕೆ ಕಡಿವಾಣ
ಸಾಧ್ಯವಾಗಿದ್ದು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂಥ ನಕಲಿ
ಪತ್ರಕರ್ತರ ವಿರುದ್ದ ಸ್ವಯಂ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ
ಪತ್ರಿಕೆಗಳ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯದರ್ಶಿ ಪ್ರಕಾಶ ಪೂಜಾರಿ ಮಾತನಾಡಿ, ಪತ್ರಕರ್ತರು ಸಮಾಜದ ಧ್ವನಿ
ಎನ್ನುವುದು ಜನಸಾಮಾನ್ಯರ ತಿಳಿವಳಿಕೆಯಾಗಿತ್ತು. ಆದರೆ, ಪತ್ರಕರ್ತರ ಶ್ರೇಷ್ಠತೆಯನ್ನು
ಇನ್ನುಮುಂದೆ ಕಥೆಗಳಲ್ಲಿ ಮಾತ್ರ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕರು ಮೊಬೈಲ್
ಪತ್ರಕರ್ತರು ಆಗಿದ್ದಾರೆ. ಒಂದು ವಾಸ್ತವ ಸುದ್ದಿಯ ಬರವಣಿಗೆ ಗೊತ್ತಿಲ್ಲದ
ರೋಲ್‍ಕಾಲ್ ಪತ್ರಕರ್ತರ ಹಾವಳಿ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ನೂರಾರು
ಯುಟ್ಯೂಬ್ ಚಾನಲ್‍ಗಳು, ಕಂಡು ಕೇಳರಿಯದ ಪತ್ರಿಕೆಗಳ ಐಡಿ ಕಾರ್ಡ್, ವಿಸಿಟಿಂಗ್
ಕಾರ್ಡ್‌ಗಳನ್ನು ಇಟ್ಟುಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ತಮ್ಮ ಕಾರು, ಬೈಕ್‍ಗಳ
ಮುಂಭಾಗ ಪ್ರೆಸ್ ಎಂದು ಬರೆಸಿಕೊಂಡು ತಿರುಗುವವರ ವಿರುದ್ಧ ಕ್ರಮ ಅವಶ್ಯಕ ಎಂದರು.

ಪತ್ರಕರ್ತ ಮಲಗೌಡ ಪಾಟೀಲ ಮಾತನಾಡಿ, ಒಂದು ಕಾರ್ಯಕ್ರಮಕ್ಕೆ ಹೋಗಿ ಪೆನ್ನು ಹಿಡಿದು ಹಾಳೆಯ ಮೇಲೆ ಗೀಜುವ ಅಥವಾ ಮೊಬೈಲ್ ಹಿಡಿದು ಚಿತ್ರೀಕರಿಸಿ ನಾನೂ ಪತ್ರಕರ್ತ ಅಂತ ತೋರಿಸಿಕೊಳ್ಳುತ್ತಾರೆ.
ಯಾವ ಪತ್ರಿಕೆಯಲ್ಲೂ, ಟಿವಿಯಲ್ಲೂ ಮಾರನೇ ದಿನ ಸುದ್ದಿಯೇ ಇರಲ್ಲ. ಆದರೂ ಇವರು ಪತ್ರಕರ್ತರು. ಹೀಗೆ ಪತ್ರಕರ್ತರ ಸೋಗು ಹಾಕಿಕೊಂಡು ಯಾವುದೇ ಕಾಮಗಾರಿಯ ಗುದ್ದಲಿ ಪೂಜೆ
ಅಥವಾ ಉದ್ಘಾಟನೆಯಾಗಲಿ ಅಲ್ಲಿ ಕಾಗೆಗಳಂತೆ ಮುಗಿಬೀಳುತ್ತಿದ್ದಾರೆ. ಇದಕ್ಕೆ ಕಡಿವಾಣ ಅತ್ಯಗತ್ಯ ಎಂದು ಹೇಳಿದರು.

ಉಪಾಧ್ಯಕ್ಷ ಮೋಹನ ಪಾಟಣಕರ, ಹಿರಿಯ ಪತ್ರಕರ್ತರಾದ ಬಸವರಾಜ ಚಮಕೇರಿ, ಮಲಗೌಡ
ಪಾಟೀಲ, ಕಲ್ಮೇಶ ಸತ್ತಿ, ಶ್ರೀಶೈಲ ಮಾಳಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾಗಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ

Spread the loveಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾಗಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ …

Leave a Reply

Your email address will not be published. Required fields are marked *

thirteen + 6 =