ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ
ಯುವ ಭಾರತ ಸುದ್ದಿ ಗೋಕಾಕ :
ಹಡಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ಗೃಹ ಹಾಗೂ ನೀರಾವರಿ ಬಳಕೆಗಾಗಿ ವಿದ್ಯುತ್ತ್ ಬೇಡಿಕೆ ಈಡೇರಿಸಲು ಹಡಗಿನಾಳ ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚಿಸಿದರು.
ರವಿವಾರದಂದು ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ತ ಪ್ರಸರಣ ನಿಗಮದಿಂದ 15.22 ಕೋಟಿ ರೂಗಳ ವೆಚ್ಚದ 110/11ಕೆ.ವ್ಹಿ ವಿದ್ಯುತ್ತ್ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇನ್ನೂ ಮುಂದೆ ರೈತರಿಗೆ ಈ ಭಾಗದಲ್ಲಿ ಸಮರ್ಪಕ ವಿದ್ಯುತ್ತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಈಗಿರುವ ಗೋಕಾಕ,ಮಮದಾಪೂರ, ಹುಣಶ್ಯಾಳ ಪಿ.ಜಿ. 110/ಕೆ.ವ್ಹಿ. ವಿದ್ಯುತ್ತ್ ಕೇಂದ್ರಗಳ ಮೇಲಿನ ವಿದ್ಯುತ್ ಸರಬುರಾಜಿನ ಒತ್ತಡವು ಕಡಿಮೆಯಾಗಲಿದೆ. ಇದರಿಂದ ಹಡಗಿನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಹಡಗಿನಾಳ, ಮೆಳವಂಕಿ, ಉದಗಟ್ಟಿ, ನಲ್ಲಾನಟ್ಟಿ, ಕೆಮ್ಮನಕೊಲ, ಅಜ್ಜನಕಟ್ಟಿ, ಮಮದಾಪೂರ, ಹುಣಶ್ಯಾಳ, ಬೀರನಗಡ್ಡಿ, ಬಳೋಬಾಳ ಗ್ರಾಮಗಳ ವಿದ್ಯುತ್ ಬಳಕೆದಾರರಿಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮಸ್ಥರ ಬೇಡಿಕೆಯಂತೆ ಹಡಗಿನಾಳ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಈಗಾಗಲೇ ಆರಂಭಿಸಲಾಗಿದೆ. ಹಡಗಿನಾಳ ಕ್ರಾಸ್‍ನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗನೆ ಪರಿಹರಿಸಲಾಗುವುದು. ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಹಡಗಿನಾಳ ಕ್ರಾಸ್‍ದಿಂದ ಹಡಗಿನಾಳ ಗ್ರಾಮದವರೆಗಿನ ರಸ್ತೆಯನ್ನು ಅಭಿವೃದ್ದಿಪಡಿಸಲಾಗುವುದು. ಸಾರ್ವಜನಿಕರಿಗೆ ಅಗತ್ಯವಿರುವ ಶೌಚಾಲಯಗಳನ್ನು ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಇನ್ನೂ ಕೆಲವು ಮನೆಗಳನ್ನು ಮಾಡಿಕೊಡಲಾಗುವುದು. ದಂಡಿನ ಮಾರ್ಗದ ಗ್ರಾಮಗಳ ಬಾಕಿ ಉಳಿದಿರುವ ಸಂತ್ರಸ್ತ ಫಲಾನುಭವಿಗಳಿಗೆ ಮೇ ತಿಂಗಳ ನಂತರ ಮನೆಗಳನ್ನು ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಅರ್ಜುನ ಸನದಿ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಪ್ರಭಾ ಶುಗರ ನಿರ್ದೆಶಕ ಭೂತಪ್ಪ ಗೊಡೇರ, ಮುಖಂಡರಾದ ಮುತ್ತೆನಗೌಡ ಪಾಟೀಲ, ನಾಗಪ್ಪ ಮಂಗಿ, ರಾಮಚಂದ್ರ ಪತ್ತಾರ, ಮುದಕಪ್ಪ ತಳವಾರ, ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಪಿಕೆಪಿಎಸ್ ಅಧ್ಯಕ್ಷ ರಮೆಶ ಚಿಗಡೊಳ್ಳಿ, ಭೂದಾನಿ ಶಿವಾನಂದ ನಾಯಿಕ, ಭೀಮಶಿ ಕಲ್ಲೋಳ್ಳಿ, ಭೀಮಶಿ ಗೌಡಪ್ಪನವರ, ಬಸಪ್ಪ ಸಿಗಿಹಳ್ಳಿ, ಹಣಮಂತ ಕೊಪ್ಪದ, ರಾಮಚಂದ್ರ ಚಪ್ಪರಿ, ರಾಜು ಬಳಗಾರ, ಗಣಪತಿ ಈಳಿಗೇರ, ಪಾಂಡು ದೊಡಮನಿ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ದಿನೇಶ ಬಿರಡಿ, ಎಮ್.ಎ.ಕುಂದಗೋಳ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಎನ್.ವ್ಹಿ.ಮೂಡಲಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಸ್.ಪಿ.ವರಾಳೆ, ಎಮ್.ಎಸ್. ನಾಗನ್ನವರ ಮುಂತಾದವರು ಉಪಸ್ಥಿತರಿದ್ದರು.