ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಜಾರಿ: ಸಿಎಂ ಬೊಮ್ಮಾಯಿ ಭರವಸೆ
ಯುವ ಭಾರತ ಸುದ್ದಿ ಹುಬ್ಬಳ್ಳಿ:
ರಾಜ್ಯ ಸರ್ಕಾರಿ ನೌಕರರಿಂದ 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಾಳೆ, ಮಾರ್ಚ್ 1 ರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಏತನ್ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಈ ವರದಿ ಕೈಸೇರಿದ ಬಳಿಕ ವರದಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 7ನೇ ವೇತನ ಆಯೋಗದ ಜಾರಿ ಕುರಿತಂತೆ ಸಮಿತಿ ರಚಿಸಲಾಗಿದೆ. ಸಮಿತಿಯು ಮಧ್ಯಂತರ ವರದಿ ತಯಾರಿಸುತ್ತಿದ್ದು, ವರದಿ ಕೈ ಸೇರಿದ ಕೂಡಲೇ 7ನೇ ವೇತನ ಆಯೋಗದ ಮಧ್ಯಂತರ ಶಿಫಾರಸ್ಸಿನಂತೆ ವೇತನವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
2023-24ನೇ ಸಾಲಿನಲ್ಲೇ 7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆ. ಬಜೆಟ್‌ನಲ್ಲಿ 7ನೇ ವೇತನ ಆಯೋಗ ಜಾರಿಗೆ ಹಣ ಕೂಡ ಮೀಸಲಿಡಲಾಗಿದೆ. ಸರ್ಕಾರಿ ನೌಕರಿಗೆ ಶೀಘ್ರವೇ ಅದರಂತೆ ವೇತನ ಜಾರಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.