Breaking News

ದೇವಿ ಸನ್ನಿಧಿಯಲ್ಲಿ ಮತ್ತೆ ಬೆಳಗಾವಿ ಗೆಲುವು ಪಣತೊಟ್ಟ ಸಾಹುಕಾರ್ !

Spread the love

ದೇವಿ ಸನ್ನಿಧಿಯಲ್ಲಿ ಮತ್ತೆ ಬೆಳಗಾವಿ ಗೆಲುವು ಪಣತೊಟ್ಟ ಸಾಹುಕಾರ್ !

ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಬಾವುಟ ಹಾರಿಸಲು ಶಪಥ ತೊಟ್ಟಿರುವ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಯವರು ಬೃಹತ್ ಸಭೆ ಉದ್ದೇಶಿಸಿ ಚುನಾವಣೆಯ ರಣಕಹಳೆ ಊದಿದ್ದಾರೆ.
ಬೆಳಗಾವಿ ತಾಲೂಕಿನ ಉಚಗಾವಿ ಮಳೆಕರಣಿ ದೇವಿ ದೇವಸ್ಥಾನದ ಬಳಿ ಮಂಗಳವಾರ ನಡೆದ ಬೃಹತ್ ಜನ ಸಂವಾದ ಸಭೆ ಉದ್ದೇಶಿಸಿ ಮಾತನಾಡಿದರು.
ರಮೇಶ್ ಜಾರಕಿಹೊಳಿ ಅವರು ಈ ಮೊದಲು ಬೆಳಗಾವಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಹಿಂಡಲಗಾ, ಸುಳೇಬಾವಿ, ಹಿರೇಬಾಗೇವಾಡಿ ಗ್ರಾಮಗಳಲ್ಲಿ ಕೆಲದಿನಗಳ ಹಿಂದೆ ಸರಣಿ ಸಭೆ ನಡೆಸಿ ಬಿಜೆಪಿ ಪರ ಬಿರುಗಾಳಿ ಎಬ್ಬಿಸಿದ್ದರು. ಇದೀಗ ಇಂದೂ ಸಹ ರಮೇಶ ಜಾರಕಿಹೊಳಿಯವರ ಸಭೆಗೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಗಮನಸೆಳೆಯಿತು.

ರಮೇಶ ಜಾರಕಿಹೊಳಿ ಗುಡುಗು : ಗ್ರಾಮ ದೇವಿಗೆ ಹಾಗೂ ಶಿವಾಜಿ ಮಹಾರಾಜರಿಗೆ ನಮಿಸಿ ಭಾಷಣ ಆರಂಭಿಸಿದ ರಮೇಶ ಜಾರಕಿಹೊಳಿಯವರು, ಕಳೆದ ಎರಡು ತಿಂಗಳಿನಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ವರಿಷ್ಠರ ಜೊತೆ ಮಾತನಾಡಿಕೊಂಡು ಮೊದಲು ಪಕ್ಷಾತೀತವಾಗಿ ಸಮಾವೇಶ ನಡೆಸಿ ನಂತರ ಪಕ್ಷದ ವತಿಯಿಂದ ಸಭೆ ನಡೆಸುವುದಾಗಿ ಹೇಳಿದ್ದೆ. ಅದೇ ರೀತಿಯಾಗಿ ಸಭೆ ನಡೆಸಲಾಗಿದೆ. ಸೋಮವಾರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ. ಇಡೀ ಕಾರ್ಯಕ್ರಮ ಕೇಸರಿಮಯವಾಗಿ ಅದ್ಭುತವಾಗಿ ನಡೆದಿದೆ. ಇಡೀ ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಪ್ರತಿಷ್ಠಾಪನೆಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಹೆಬ್ಬಾಳ್ಕರ್, ಡಿಕೆಶಿಗೆ ಪರೋಕ್ಷ ಟಾಂಗ್ : ಕುಕ್ಕರ್, ಮಿಕ್ಸಿ ಮೂಲಕ ಹಣದ ಆಮಿಷದ ಮೇರೆಗೆ ಇಡೀ ಕ್ಷೇತ್ರದ ಜನತೆಯನ್ನು ತನ್ನ ಮನೆಯಲ್ಲಿ ಒತ್ತೆ ಇರಿಸಿಕೊಳ್ಳಬಹುದೆಂಬ ದುಸ್ಸಾಹಸಕ್ಕೆ ಇಲ್ಲಿನ ಶಾಸಕರು ಮುಂದಾಗಿದ್ದರು. ಪ್ರತಿ ಗ್ರಾಮಕ್ಕೆ ಮಿಕ್ಸಿ ಕೊಟ್ಟಿದ್ದಾರೆ. ಆದರೆ ಮಿಕ್ಸಿ ಕೊಟ್ಟ ಗ್ರಾಮದಲ್ಲೇ ಇಂದು ಅವರಿಗೆ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಸೋಲು ಉಂಟಾಗಿದೆ.
ಬೆಳಗಾವಿ ಗ್ರಾಮೀಣದ ಮೂರು ಗ್ರಾಮ ಪಂಚಾಯಿತಿ ಮತಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೆಂದು ಇಲ್ಲಿನ ಜನತೆ ತೋರಿಸಿದ್ದಾರೆ. ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಕಮಲ ಉದಯವಾಗುವುದು ಶತಸಿದ್ಧ. ಈ ಬಗ್ಗೆ ಯಾವ ಸಂಶಯವೂ ಇಲ್ಲ. ಅವರು ಎಷ್ಟೇ ಹಣ ಹಂಚಲಿ, ಜನ ಮಾತ್ರ ಅವರ ನಾಟಕಕ್ಕೆ ಮರಳಾಗುವುದಿಲ್ಲ. ಯಾವಾಗ ಒಮ್ಮೆ ಇರಬಹುದು. ಆದರೆ ಮತ್ತೆ ಮತ್ತೆ ಜನ ಅವರ ಮಾತಿಗೆ ಮರಳಾಗುವುದಿಲ್ಲ.

ಈ ಹಿಂದೆ ನೀವು 2008 ರ ಚುನಾವಣೆಯಲ್ಲಿ ನೋಡಿರಬಹುದು. ಗಣಿ ಧಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಬಂದು ಮನೆಗೆ ಹೋಗಿದ್ದಾರೆ. ಆದರೆ ಮತ್ತೆ ಬಂದಿಲ್ಲ ಎಂದು ಈ ಹಿಂದೆ ಬೇರೆ ಜಿಲ್ಲೆಗಳಿಂದ ಬೆಳಗಾವಿಗೆ ಬಂದು ಚುನಾವಣೆಗೆ ಸ್ಪರ್ಧಿಸಿದವರ ವಿರುದ್ಧ ವ್ಯಂಗ್ಯವಾಡಿದರು.

ಗ್ರಾಮೀಣ ಭಾಗದಲ್ಲಿ ಏನು ಕೆಲಸ ನಡೆದಿಲ್ಲ. ಜನರನ್ನು ಮೋಸ ಮಾಡುವ ಕೆಲಸ ಮಾತ್ರ ಆಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಎರಡು ಕ್ಷೇತ್ರಗಳು ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುತ್ತವೆ. ಅದರ ಜೊತೆಗೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಇವೆ. ಆದರೆ ಇವೆಲ್ಲ ಸೌಲಭ್ಯ ವಂಚಿತ ಪ್ರದೇಶಗಳಾಗಿವೆ.

ಗೋಕಾಕದಂತೆ ಬೆಳಗಾವಿ ಗ್ರಾಮೀಣಕ್ಕೂ ನೀರಾವರಿ ಸೌಲಭ್ಯ : ನೀವು ಗೋಕಾಕ ಕ್ಷೇತ್ರ ನೋಡಬಹುದು. ನಾನು ಮೊದಲ ಬಾರಿಗೆ ಶಾಸಕನಾದಾಗ ಕೇವಲ ಶೇಕಡಾ 18 ರಷ್ಟು ಮಾತ್ರ ನೀರಾವರಿ ಸೌಲಭ್ಯವಿತ್ತು. ಆದರೆ ಇಂದು ಗೋಕಾಕ ಮತಕ್ಷೇತ್ರದಲ್ಲಿ 95 ರಷ್ಟು ನೀರಾವರಿ ಸೌಲಭ್ಯವಿದೆ. ಅದೇ ಮಾದರಿಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲೂ ನೀರಾವರಿ ಸೌಲಭ್ಯ ನೀಡುವ ಉದ್ದೇಶ ನನಗಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಪಶ್ಚಿಮ ಭಾಗದ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಡುಬಡವರಿದ್ದಾರೆ. ಆರ್ಥಿಕವಾಗಿ ಸಹ ಹಿಂದುಳಿದವರಿದ್ದಾರೆ. ವಿಶೇಷವಾಗಿ ಮರಾಠಾ ಸಮಾಜದ ಕಡುಬಡವರು ಇಲ್ಲಿ ವಾಸವಾಗಿದ್ದಾರೆ. ನಾನು ಈ ಹಿಂದೆ ನೀರಾವರಿ ಸಚಿವನಾಗಿದ್ದಾಗ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಜೊತೆ ಸೇರಿ ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತ ಪಾಟೀಲ ಹಾಗೂ ಚಂದಗಡ ಶಾಸಕ ರಾಜೇಶ ಪಾಟೀಲ ಅವರ ಜತೆ ಸೇರಿ ತಿಲಾರಿಯಲ್ಲಿ ಸಭೆ ನಡೆಸಿದ್ದೆ. ಚಂದಗಡ ಹಾಗೂ ಬೆಳಗಾವಿಯ ಪಶ್ಚಿಮ ಭಾಗದ ನೀರಾವರಿ ವ್ಯವಸ್ಥೆ ಮಾಡುವ ಸಂಕಲ್ಪ ಮಾಡಿದ್ದೆ. ಆದರೆ ದುರಾದೃಷ್ಟವಾದ ನಾನು ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಯೋಜನೆ ಅಲ್ಲೇ ಉಳಿದಿದೆ. ಈ ಹಿನ್ನೆಲೆಯಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತ್ತೆ ಈ ಯೋಜನೆಯನ್ನು ಮುಂದುವರಿಸುವ ಸಂಕಲ್ಪ ತೊಟ್ಟಿದ್ದೇವೆ. ಇಲ್ಲಿ ಸಣ್ಣ ಸಣ್ಣ ರೈತರು ಇದ್ದಾರೆ. ಇಲ್ಲಿನ ರೈತರು ತರಕಾರಿ ಬೆಳೆ ಬೆಳೆದು ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಕಳಿಸುವ ವ್ಯವಸ್ಥೆಯಾಗಬೇಕು. ಜೊತೆಗೆ ಶಿಕ್ಷಣ, ಆರೋಗ್ಯ, ಅಂಗನವಾಡಿ, ಕನ್ನಡ, ಮರಾಠಿ ಇಂಗ್ಲಿಷ್ ಶಾಲೆಗಳು ಸೇರಿದಂತೆ ಹಲವು ಯೋಜನೆಗಳನ್ನು ತಂದು ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಾಗೋಣ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಹೇಳಿದರು.

ಕುಕ್ಕರ್, ಮಿಕ್ಸಿ ಬ್ಲಾಸ್ಟ್ ಆಗಬಹುದು : ಗ್ರಾಮೀಣ ಭಾಗದ ಶಾಸಕರು ಮೊದಲ ಬಾರಿಗೆ ಕುಕ್ಕರ್ ಕೊಟ್ಟರು. ಈ ಸಲ ಮಿಕ್ಸರ್ ಕೊಟ್ಟರು. ಇದಕ್ಕೆ ಮಾರುಕಟ್ಟೆಯಲ್ಲಿ 400 ಅಥವಾ 500 ರೂಪಾಯಿ ಇರಬಹುದು. ಬೆಂಗಳೂರಿನಲ್ಲಿ ಇತ್ತೀಚಿಗೆ ಒಂದು ಕಾಂಗ್ರೆಸ್ ಎಂಎಲ್ಎ ಕ್ಷೇತ್ರದಲ್ಲಿ ಮಿಕ್ಸರ್ ಬ್ಲಾಸ್ಟ್ ಆಗಿ ಎಷ್ಟೋ ಜನ ಆಸ್ಪತ್ರೆ ಸೇರಿದ್ದಾರೆ. ಮಿಕ್ಸರ್ ಒಂದಕ್ಕೆ 500 ರೂ.ಇರಬಹುದು. ಇದರ ಫ್ಯಾಕ್ಟರಿ ಇರುವುದು ಕನಕಪುರದಲ್ಲಿ. ಕನಕಪುರದಲ್ಲಿ ಯಾರಿದ್ದಾರೆ. ಡುಬ್ಲಿಕೇಟ್ ತಯಾರಿಸುವ ಮಹಾ ನಾಯಕರಿದ್ದಾರೆ. ಅವರು ಕೊಡುವ ಕುಕ್ಕರನ್ನು ಹುಷಾರಾಗಿ ಚಾಲು ಮಾಡಬೇಕು. ಯಾಕೆಂದರೆ ಅದು ಸರಿ ಇರಲ್ಲ. ಮಾರುಕಟ್ಟೆಯಲ್ಲಿ ಇದಕ್ಕೆ ಬಹುಶಃ 200 ರೂ.ಇರಬಹುದು. ಬಡವರು ಆಸೆಯಿಂದ ಪಡೆಯುತ್ತಾರೆ. ಜನ ಇದರ ಬಗ್ಗೆ ಜಾಗೃತಿ ವಹಿಸಬೇಕು. ಮಾರುಕಟ್ಟೆಯಲ್ಲಿ ಒಂದು ಸಾವಿರದಿಂದ 1,200 ವರೆಗೆ ಕುಕ್ಕರ್ ಇರುತ್ತದೆ. ಐ ಎಸ್ ಐ ಮಾರ್ಕ್ಸ್ ಇರುತ್ತದೆ. ಆದರೆ ಇವರು ಹಂಚುವ ಕುಕ್ಕರ್, ಮಿಕ್ಸರ್ ಉಪಯೋಗಿಸುವಾಗ ಹುಷಾರಾಗಿರಬೇಕು ಎಂದು
ಲೇವಡಿ ಮಾಡಿದರು.

ಅವರು ನೇರವಾಗಿಯೇ ಕುಕ್ಕರ್, ಮಿಕ್ಸಿ ಹಂಚುತ್ತಾರೆ. ಆದರೆ, ನಾನು ಅಂತಹ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ನನ್ನ ಮೇಲೆ ಮಹಾ ನಾಯಕ ಸೇರಿ ಇತರ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಅವರು ಇಷ್ಟು ಕೊಡುತ್ತಾರೆ, ನಾನು ಬೇರೆ ರೂಪದಲ್ಲಿ ನಿಮಗೆ ನೆರವಾಗುತ್ತೇನೆ ಎಂದು ಭಾಷಣದಲ್ಲಿ ಹೇಳಿದ್ದನ್ನೇ ದೊಡ್ಡದಾಗಿಸಿಕೊಂಡು ರಾಜ್ಯಾದ್ಯಂತ ಪ್ರಚಾರ ಮಾಡಿ ನಾನು ಹಣ ಕೊಡುತ್ತೇನೆ ಎಂದು ದೊಡ್ಡದಾಗಿ ಬಿಂಬಿಸಿದರು. ನಾನು ಮಾತನಾಡುವಾಗ ಒಂದು ಶಬ್ದ ತಪ್ಪು ಆಗಿರಬಹುದು. ಅದೇ ದೊಡ್ಡದು ಮಾಡಿಕೊಂಡ ರಾಜ್ಯಮಟ್ಟದ ಮಹಾ ನಾಯಕ ಹೋಗಿ ದೂರು ನೀಡಿದ್ದಾನೆ ಎಂದು ಇತ್ತೀಚಿಗೆ ಸುಳೇಬಾವಿಯಲ್ಲಿ ಮಾಡಿದ್ದ ಭಾಷಣವನ್ನು ಕಾಂಗ್ರೆಸಿಗರು ತಿರುಚಿರುವುದಕ್ಕೆ ಪ್ರತಿಕ್ರಿಯಿಸಿದರು.

ಗ್ರಾಮೀಣ ಮತಕ್ಷೇತ್ರದ ಜನ ಬಹಳ ಹುಷಾರಾಗಿರಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಗೆಲುವು ಸಾಧಿಸಬೇಕಾಗಿತ್ತು. ಆದರೆ ದುರ್ದೈವವಶಾತ್ ಸೋತರು. ಇನ್ನು ಮುಂದೆ ಈಗಾಗಬಾರದು. ಮರಾಠಿಗರು ಯಾವುದೇ ಒಡಕ್ಕಿಲ್ಲದೆ ಈ ಬಾರಿ ಬಿಜೆಪಿಗೆ ಬೆಂಬಲ ನೀಡಬೇಕು. ಗಡಿ ವಿಷಯಕ್ಕೆ ಸಂಬಂಧಿಸಿ ಮಹಾಜನ್ ವರದಿಯನ್ನು ನಾವೇ ಒಪ್ಪಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಏನು ಆಗುತ್ತದೆ ಅದಕ್ಕೆ ನಾವು ಸಹ ಬದ್ಧರಾಗಿದ್ದೇವೆ. ಈ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ. ಇಲ್ಲಿ ಆಸ್ಪತ್ರೆ ಸೇರಿದಂತೆ ಎಲ್ಲ ಯೋಜನೆಗಳನ್ನು ತರೋಣ. ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನು ಕೆಡಿಸಿರುವ ಶಾಸಕರನ್ನು ಮನೆಗೆ ಕಳಿಸಿ ಒಳ್ಳೆಯ ಸಂಭಾವಿತ ಶಾಸಕರನ್ನು ಗೆದ್ದು ತರೋಣ. ಕಮಿಷನ್ ಏಜೆಂಟನ ಬೆನ್ನು ಬೀಳುವವನ್ನು ಬಿಟ್ಟು ಉತ್ತಮ ಶಾಸಕರನ್ನು ಗೆದ್ದು ತರೋಣ. ವಿಧಾನಸಭಾ ಚುನಾವಣೆವರೆಗೆ ನಾವು ಇನ್ನು ಮುಂದೆ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕೆಲಸ ಮಾಡಿ ಈ ಕ್ಷೇತ್ರವನ್ನು ಗೆಲ್ಲಬೇಕಾಗಿದೆ. ಇನ್ನು ಮೇಲೆ ಸಭೆ ಸಮಾರಂಭಗಳನ್ನು ಕಡಿಮೆ ಮಾಡಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿಯ ವಿಸ್ತಾರಕ ಸೇರಿದಂತೆ ಹಲವು ಯೋಜನೆಗಳ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕು. ಬಿಜೆಪಿ ವರಿಷ್ಠರು ಯಾರನ್ನು ಈ ಕ್ಷೇತ್ರಕ್ಕೆ ಅಭ್ಯರ್ಥಿಯೆಂದು ಆಯ್ಕೆ ಮಾಡುತ್ತಾರೋ ಅವರನ್ನು ನಾವು ಗೆಲ್ಲಿಸೋಣ ಎಂದು ಕರೆ ನೀಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × 1 =