ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !
ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು ಬೆಳಗಾವಿ ಎಂದರೆ ತಾತ್ಸಾರ ಮಾಡುತ್ತಲೇ ಬಂದಿವೆ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಆಕಾಶವಾಣಿ ಕೇಂದ್ರಗಳು ಬೆಳಗಾವಿಗೇ ಬರಬೇಕಾಗಿತ್ತು ಬರಲಿಲ್ಲ – ಕಾರಣ ಗಡಿಭಾಗವೆಂಬ ಹಣೆಪಟ್ಟಿ. ಸುವರ್ಣ ವಿಧಾನಸೌಧ ಬಂದರೂ ಸಚಿವಾಲಯಗಳು ಬರಲಿಲ್ಲ. ಶಾಸಕರ ಭವನಗಳನ್ನು ನಿರ್ಮಿಸಲಿಲ್ಲ. ಪೂರ್ಣಾವಧಿಗೆ ಅಧಿವೇಶನಗಳನ್ನು ಮಾಡುತ್ತಿಲ್ಲ. ಬೆಳಗಾವಿಯಿಂದ ಪುಣೆ-ಮುಂಬಯಿ-ದೆಹಲಿ-ಬೆಂಗಳೂರು ನಡುವೆ ಹಾರುತ್ತಿದ್ದ ವಿಮಾನಗಳು ರದ್ದಾದವು. ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಯಾವ ಸಂಸದರೂ ಏನನ್ನೂ ಹೇಳುತ್ತಿಲ್ಲ. ಎಲ್ಲ ಮಹತ್ವದ ಯೋಜನೆಗಳು ಧಾರವಾಡ-ಹುಬ್ಬಳ್ಳಿಗೆ ಸೀಮಿತವಾಗುತ್ತಿವೆ. ಯಾಕೀ ತಾತ್ಸಾರ ?
ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಪ್ರತಿಭಾಸಂಪನ್ನ ಶಿಕ್ಷಣ ತಜ್ಞರು, ಲೇಖಕರು, ಕಲಾವಿದರು, ನಾಟಕಕಾರರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಪ್ರಸಿದ್ಧ ಕವಿ ಮತ್ತು ಸಾಹಿತಿಗಳ ಹೆಸರಿನಲ್ಲಿರುವ ಪ್ರತಿಷ್ಠಾನಗಳಿಗೆ ಅನುದಾನ ಬರುವುದಿಲ್ಲ. ಕಲಾ ತಂಡಗಳಿಗೆ ಅನ್ಯಾಯವಾಗುತ್ತಿದೆ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ನಮ್ಮ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ ಹೇಳಬೇಕು. ಸರಕಾರದಲ್ಲಿರುವವರನ್ನು ಕೈಹಿಡಿದು ಕೆಲಸ ಮಾಡಿಸಬೇಕು. ಪಾಲಕ ಮಂತ್ರಿಗಳು ಮೌನ ವಹಿಸಬಾರದು. ಕಾರಣ ಇವರು ನಮ್ಮ ಉತ್ತರ ಕರ್ನಾಟಕದವರು. ಕೇವಲ ಮರಾಠರ ಮತಗಳ ಓಲೈಕೆಗಾಗಿ ಕನ್ನಡಿಗರನ್ನು ಬಲಿಕೊಡಬೇಡಿ. ಎಂದೆಂದಿಗೂ ಕನ್ನಡವಾಗಿರಿ.
*ಬಿ.ಎಸ್.ಗವಿಮಠ, ಚಿಂತಕರು ಬೆಳಗಾವಿ*