Breaking News

ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ !

Spread the love

ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ !

ಉದ್ಯಮ ಕ್ಷೇತ್ರದಲ್ಲಿ ಪುರುಷರದ್ದೆ ಸಿಂಹಪಾಲು. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ಮಹಿಳೆಯರು ಆಗಾಗ ಸುದ್ದಿ ಮಾಡುತ್ತಿರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಸಾಧಕಿಯೊಬ್ಬರು ಇದೀಗ ತಮ್ಮ ಕೆಲಸದಿಂದ ಗುರುತಿಸಲ್ಪಟ್ಟಿದ್ದಾರೆ.

ಸತತ ಪ್ರಯತ್ನ, ಆತ್ಮವಿಶ್ವಾಸ, ಎಂಥದೇ ಸಮಸ್ಯೆಯಾದ್ರೂ ಅದನ್ನು ಮೆಟ್ಟಿ ನಿಂತು ಕ್ಷಣಾರ್ಧದಲ್ಲಿ ಮುನ್ನುಗ್ಗುವ ಛಲ, ಕಾಯಕದ ಮೇಲೆ ಅಚಲವಾದ ಶ್ರದ್ಧೆ ಇಟ್ಟರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬ ಮಹಿಳೆಯೇ ಸರಿಸಾಟಿಯಾಗಿ ನಿಲ್ಲಬಲ್ಲಳು.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಡಕುಟುಂಬದಲ್ಲಿ ಜನಿಸಿರುವ ಕವಿತಾ ಆನಂದ ಮಜಲೀಕರ ಬಡತನದಲ್ಲಿ ಹುಟ್ಟಿ, ಬೆಳೆದು ಆಟೋಮೊಬೈಲ್ ಕ್ಷೇತ್ರದಲ್ಲಿ ಇಂದು ಹಲವು ಕುಟುಂಬಗಳಿಗೆ ಉದ್ಯೋಗ ಒದಗಿಸಿ ಆಸರೆಯಾಗಿ ನಿಂತಿದ್ದಾರೆ. ಈ ಮೂಲಕ ಎಲ್ಲ ಬಡ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ.

ದಕ್ಷಿಣ ಭಾರತದಲ್ಲೇ ಹೆಸರು: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಮಹತ್ವಕಾಂಕ್ಷೆಯಿಂದ ಸಂಕಷ್ಟದ ಪರಿಸ್ಥಿತಿಯಲ್ಲೇ ಬಿ.ಕಾಂ. ಪದವಿ ಪಡೆದರು. ಮುಂದೆ ಆಟೋಮೊಬೈಲ್ ಇಂಡಸ್ಟ್ರಿ ಆಯ್ಕೆ ಮಾಡಿಕೊಂಡ ಅವರು, ಗೋಕಾಕ ನಗರದಲ್ಲಿ ಇದರ ತರಬೇತಿಯನ್ನೂ ಪಡೆದುಕೊಂಡರು. ಆಟೋ ಮೊಬೈಲ್ ಕ್ಷೇತ್ರದಲ್ಲಿ ಮುಂದುವರಿಯಲು ಮನಸ್ಸು ಮಾಡಿದ ಕವಿತಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹತ್ತರಗಿ ಗ್ರಾಮದ ಬಳಿ ಟಾಟಾ ಮೋಟರ್ಸ್‌ನ ವಾಣಿಜ್ಯ ವಾಹನಗಳ ಅಧಿಕೃತ ಸರ್ವಿಸ್ ಸೆಂಟರ್ ತೆರೆಯುವ ಮೂಲಕ ಇಂದು ೫೦-೬೦ ಕುಟುಂಬಗಳಿಗೆ ಉದ್ಯೋಗ ನೀಡಿ ಆಸರೆಯಾಗಿ ನಿತಿದ್ದಾರೆ ಎಂದರೆ ಊಹಿಸಲೂ ಅಸಾಧ್ಯ. ಆರಂಭದಲ್ಲಿ ಫೈನಾನ್ಸ್‌ನಲ್ಲಿ 15 ಲಕ್ಷ ಸಾಲ ಮಾಡಿ ಜಾಗ ಲೀಜ್ ಪಡೆದು ಆರಂಭಿಸಿದ ಉದ್ಯಮ ಇಂದು ೧೧ ಎಕರೆ ಸ್ವಂತ ಜಮೀನು ಹೊಂದಿ ಕಾರ‌್ಯನಿರ್ವಹಿಸುತ್ತಿದೆ. ಸತತ ಪರಿಶ್ರಮದ ಫಲವಾಗಿ ಇಂದು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎಂ.ಬಿ. ಮೋಟರ್ಸ್ ಭಾರಿ ಸರಕು ಸಾಗಾಣಿಕೆ ವಾಹನಗಳನ್ನು ದುರಸ್ತಿ ಮಾಡುವುದರ ಮೂಲಕ ದಕ್ಷಿಣ ಭಾರತದಲ್ಲಿ ಅತಿ ದೊಡ್ಡದು ಎಂಬ ಕೀರ್ತಿಗೆ ಭಾಜನವಾಗಿದೆ.

5೦-6೦ ಕುಟುಂಬಕ್ಕೆ ಆಸರೆ: ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ನುರಿತ ಸಿಬ್ಬಂದಿ ಮೂಲಕ ನಿಗದಿತ ಸಮಯಕ್ಕೆ ವಾಹನಗಳನ್ನು ಡೆಲಿವರಿ ಕೊಡುವುದರ ಮೂಲಕ ವಾರ್ಷಿಕ ಕೋಟ್ಯಂತರ ರು. ವಹಿವಾಟು ನಡೆಸುತ್ತಿದ್ದಾರೆ ಶ್ರೀಮತಿ ಕವಿತಾ. ಜತೆಗೆ ೫೦ ರಿಂದ ೬೦ ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಸ್ವಂತ ಉದ್ಯೋಗ ಮಾಡುವುದಕ್ಕೆ ಹಿಂದೇಟು ಹಾಕುವ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ. ಮಹಿಳೆ ಎಂಬುವುದು ಒಂದು ಶಕ್ತಿಯ ರೂಪ. ಅವಳಲ್ಲಿರುವ ಶಕ್ತಿ ಎಂಥದ್ದು ಎಂಬುವುದು ಅನೇಕ ಬಾರಿ ಅವಳಿಗೇ ಗೊತ್ತಿರುವುದಿಲ್ಲ. ಕೆಲವೊಂದು ಕೆಲಸವನ್ನು ಬರೀ ಪುರುಷರಿಗಷ್ಟೇ ಮಾಡಲು ಸಾಧ್ಯ ಎಂದು ಸಮಾಜ ನಂಬಿದ್ದ ಕಾಲವೊಂದಿತ್ತು. ಆದರೆ ಮಹಿಳೆ ಪುರುಷರಷ್ಟೇ ಸಮರ್ಥಳು ಎಂಬುದನ್ನು ಕವಿತಾ ಅವರು ಸಾಧಿಸಿ ತೋರಿಸಿದ್ದಾರೆ.

….
ಒಳ್ಳೆಯ ಕೆಲಸ ಮಾಡುವುದಕ್ಕೆ ನೂರೆಂಟು ವಿಘ್ನಗಳು. ಹಣಕಾಸಿನ ಮುಗ್ಗಟ್ಟು, ಸೋಲಿನ ಭೀತಿ, ಹೆಜ್ಜೆ ಹೆಜ್ಜೆಗೂ ಕಾಡುತ್ತವೆ. ಯಾವುದಕ್ಕೂ ಹೆದರದೆ, ಛಲ ಬಿಡದೆ, ಮುನ್ನುಗ್ಗುವ ಧೈರ್ಯವನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿನಿಯರು ಆತ್ಮ ವಿಶ್ವಾಸ, ದೃಢ ನಿರ್ಧಾರದೊಂದಿಗೆ ಮುನ್ನಡೆಯಬೇಕಾಗಿದೆ. ಸ್ಪಷ್ಟ ಗುರಿ ಇಟ್ಟುಕೊಂಡು, ತಾವು ಮಾಡುವ ಕೆಲಸದ ಬಗ್ಗೆ ಉತ್ತಮ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಕಂಡ ಕನಸು ನನಸಾಗುವುದು. -ಕವಿತಾ ಮಜಲೀಕರ ಸಾಧಕಿ


Spread the love

About Yuva Bharatha

Check Also

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !

Spread the loveಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ ! ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು …

Leave a Reply

Your email address will not be published. Required fields are marked *

five − 1 =