Breaking News

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

Spread the love

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

”ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎನ್ನುವ ಕನ್ನಡ ಹಾಡು ಎಲ್ಲರ ಬಾಯಲ್ಲಿ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತದೆ. ಈ ಹಾಡು ಎಲ್ಲರ ಮನಸ್ಸನ್ನು ಮುಟ್ಟಲು ಯುಗಾದಿ ಹಬ್ಬವೇ ಕಾರಣ. ಪ್ರತೀ ವರ್ಷ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆಯಾದರೂ ಅದರ ಬಗ್ಗೆ ಯಾರಲ್ಲೂ ನಿರಾಸೆಯಾಗಲಿ, ಬೇಸರವಾಗಲಿ ಇಲ್ಲ. ಯುಗಾದಿ ಹಬ್ಬಕ್ಕೂ ಮುನ್ನವೇ ಸಂಭ್ರಮ – ಸಡಗರದಿಂದ ಮನೆ ಮಂದಿಯೆಲ್ಲಾ ಸೇರುತ್ತಾರೆ ಮತ್ತು ಯುಗಾದಿ ಆಚರಣೆಗೆ ಸಿದ್ಧತೆಯನ್ನು ನಡೆಸುತ್ತಾರೆ.

ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಂದು ನಾವು ಈ ಹಬ್ಬವನ್ನು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ನವ ಚೈತನ್ಯ ತುಂಬಿಕೊಂಡಿರುತ್ತದೆ. ಮರ-ಗಿಡಗಳಲ್ಲಿ ಹೊಸ ಚಿಗುರು ಬಿಡುವ ಕಾಲ. ಮರಗಳು ಹೂವಿನಿಂದ ಮೈ ತುಂಬಿ ನಿಂತಿರುವುದನ್ನು ನೀವು ಕಾಣಬಹುದು. ಭಾರತದಲ್ಲಿ ಈ ಯುಗಾದಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯುವಂತೆ ಆಚರಣೆಯು ಕೂಡ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೆಲವೆಡೆ ಪಚಡಿಯನ್ನು ಸೇವಿಸುವುದರೊಂದಿಗೆ ಯುಗಾದಿ ಹಬ್ಬವನ್ನು ಆಚರಿಸಿದರೆ, ಇನ್ನೂ ಕೆಲವಡೆ ಬೇವು – ಬೆಲ್ಲ ತಿನ್ನುವ ಮೂಲಕ ಯುಗಾದಿ ಹಬ್ಬವನ್ನು ಆಚರಿಸಲಾಗುವುದು.

*ಯುಗಾದಿ ಹಬ್ಬದ ವಿಧಗಳು:*
ಯುಗಾದಿಯಲ್ಲಿ ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎನ್ನುವ ಎರಡು ವಿಧಗಳಿವೆ. ಚಂದ್ರನ ಚಲನೆಯನ್ನು ಆಧರಿಸಿ ಮಾಡುವ ಯುಗಾದಿಗೆ ಚಾಂದ್ರಮಾನ ಯುಗಾದಿಯೆಂದೂ ಸೂರ್ಯನು ಮೇಷ ರಾಶಿಗೆ ಪ್ರವೇಶ ಮಾಡುವ ದಿನವನ್ನು ಸೌರಮಾನ ಯುಗಾದಿ ಎಂದು ಕರೆಯುತ್ತೇವೆ. ಚಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರಪ್ರದೇಶ , ಮಹಾರಾಷ್ಟ್ರ ಹಾಗೂ ಗುಜರಾತ್‍ಗಳಲ್ಲಿ ಆಚರಿಸುತ್ತಾರೆ. ಹಾಗೆಯೇ ಸೌರಮಾನ ಯುಗಾದಿಯನ್ನು ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಆಚರಿಸುತ್ತಾರೆ.

*ಯುಗಾದಿ ಹಬ್ಬದಂದು ಬೇವು – ಬೆಲ್ಲದ ಮಹತ್ವ:*
ಕರ್ನಾಟಕದಲ್ಲಿ ಯುಗಾದಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುವ ಅರ್ಥಪೂರ್ಣ ಹಬ್ಬವಾಗಿದೆ. ಈ ದಿನ ಜನರು ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ ದೇವರ ಪೂಜೆಯನ್ನು ಮಾಡುತ್ತಾರೆ. ನಂತರ ಬೇವು – ಬೆಲ್ಲದ ಸೇವನೆ ಅಂದರೆ ಸಿಹಿ – ಕಹಿಯ ಸೇವನೆಯೊಂದಿಗೆ ಯುಗಾದಿಯನ್ನು ಸ್ವಾಗತಿಸುತ್ತಾರೆ. ನಾವು ಯುಗಾದಿಯಂದು ಸೇವಿಸುವ ಬೇವು – ಬೆಲ್ಲವು ನಮ್ಮ ಜೀವನದ ಸುಖ-ದುಃಖವನ್ನು, ಬ್ರಹ್ಮಾಂಡದ ರಾತ್ರಿ – ಹಗಲನ್ನು, ಸೋಲು – ಗೆಲುವನ್ನು ಸೂಚಿಸುತ್ತದೆ.

ಬೇವು – ಬೆಲ್ಲದ ಸಿಹಿ ಮತ್ತು ಕಹಿಯ ಆಸ್ವಾದದಂತೆ ನಮ್ಮ ಜೀವನವೂ ನೋವು – ನಲಿವಿನಿಂದ, ಸುಖ – ದುಃಖದಿಂದ ಹಾಗೂ ಕಷ್ಟ – ಸುಖಗಳಿಂದ ತುಂಬಿರಬೇಕೆಂಬುದು ಇದರ ಒಳಾರ್ಥವಾಗಿದೆ. ಇವೆಲ್ಲವೂಗಳ ನಡುವೆ ನಾವು ಸಮತೋಲವನ್ನು ಸಾಧಿಸಿಕೊಂಡು ಜೀವನವನ್ನು ನಡೆಸಬೇಕೆನ್ನುವ ಪಾಠವನ್ನು ಯುಗಾದಿ ಹಬ್ಬದ ಬೇವು – ಬೆಲ್ಲದ ಆಸ್ವಾದವು ತಿಳಿಸುತ್ತದೆ.
*ಯುಗಾದಿ ಬೇವು – ಬೆಲ್ಲದ ಆರೋಗ್ಯ ಮಹತ್ವ:*
ಇದಲ್ಲದೇ, ಯುಗಾದಿಯಂದು ನಾವು ತಿನ್ನುವ ಬೇವು – ಬೆಲ್ಲವು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಹಬ್ಬದ ಸಮಯದಲ್ಲಿ ಬೇವಿನ ಎಲೆಗಳು ಅಥವಾ ಬೇವಿನ ಹೂವಿನ ಮೊಗ್ಗುಗಳನ್ನು ತಿನ್ನುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ. ಯುಗಾದಿ ಹಬ್ಬವನ್ನು ಆಚರಿಸುವ ಜನರು ಈ ಆಚರಣೆಯನ್ನು ತಪ್ಪದೇ ಮಾಡುತ್ತಾರೆ. ಈ ದಿನಗಳಲ್ಲಿ ಬೇವು ತಿನ್ನುವುದು ವ್ಯಕ್ತಿಯ ಯೋಗಕ್ಷೇಮಕ್ಕೆ ಮುಖ್ಯವಾಗಿದೆ ಎನ್ನುವ ನಂಬಿಕೆಯಿದೆ. ಬೇವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವ್ಯಕ್ತಿಯ ದೇಹವನ್ನು ಬಲಪಡಿಸುತ್ತದೆ ಎನ್ನುವ ನಂಬಿಕೆಯಿದೆ. ಮತ್ತು ಹಬ್ಬದ ದಿನ ನಾವು ತಿನ್ನುವ ವಿಶೇಷ ಖಾದ್ಯಗಳು, ಬಗೆ ಬಗೆಯ ಆಹಾರಗಳು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದು. ಈ ಸಮಯದಲ್ಲಿ ನಾವು ಬೆಲ್ಲವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಸಮತೋಲನವಾಗುತ್ತದೆ ಮತ್ತು ದೇಹದ ಕೆಟ್ಟ ಕೊಬ್ಬನ್ನು ಕೂಡ ಕರಗಿಸುತ್ತದೆ.

ಮನುಷ್ಯನು ಆಗಾಗ ಅನೇಕ ತೊಂದರೆಗಳು ಮತ್ತು ದುರಾದೃಷ್ಟಗಳಿಗೆ ಒಳಗಾಗುತ್ತಾನೆ. ಯುಗಾದಿಯಂದು ಬೇವಿನ ಮರದ ಕಹಿ ಹೂವುಗಳನ್ನು ನೆನಪಿಸಿಕೊಳ್ಳಬೇಕು. ಅಂದರೆ ವರ್ಷದ ಮೊದಲ ದಿನದಂದು ನಾವು ಜೀವನದ ಕಹಿಯನ್ನು ಸ್ವೀಕರಿಸಬೇಕು ಎಂಬುದನ್ನು ಸೂಚಿಸುತ್ತದೆ. ವರ್ಷದ ಆರಂಭದಲ್ಲಿ ಕೇವಲ ಸಿಹಿಯಿದ್ದರೆ ಮುಂದೆ ಕಹಿಯನ್ನು ಎದುರಿಸಬೇಕಾಗಬಹುದು. ಕಹಿಯ ಬಗ್ಗೆ ನಮಗೆ ಯಾವುದೇ ಆಕ್ಷೇಪಣೆ ಇರಬಾರದು ಆದರೆ ಅದನ್ನು ಪ್ರಕೃತಿ ಮಾತೆಯ ಅಥವಾ ಧರ್ಮದ ಔಷಧಿ ಎಂದು ಒಪ್ಪಿಕೊಳ್ಳಬೇಕು. ನಾವು ಹಾಗೆ ಮಾಡುವುದರಿಂದ ನಮ್ಮ ಜೀವನದಲ್ಲಿ ಎಷ್ಟೇ ತೊಂದರೆಗಳು, ಕಷ್ಟಗಳು ಇದ್ದರೂ ನಾವು ಅದನ್ನು ಗಾಢವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸೃಷ್ಟಿಯಾಗುತ್ತದೆ.

*ಯುಗಾದಿ ದಿನ ಬೇವು – ಬೆಲ್ಲವನ್ನು ಹೇಗೆ ಸೇವಿಸಬೇಕು..?*
– ಯುಗಾದಿ ದಿನ ಮುಂಜಾನೆ ಎದ್ದಾಕ್ಷಣ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿ.
– ನಂತರ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ.
– ಬಳಿಕ ನಿಮ್ಮ ಮನೆಯ ದೇವರ ಕೋಣೆಯಲ್ಲೇ ಇರುವ ದೇವರನ್ನು ಪೂಜಿಸಿ, ಅಥವಾ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡುವುದಾದರೆ ಈ ಕೆಲಸವನ್ನು ಕೂಡ ಮಾಡಬಹುದು.
– ಪೂಜೆಯ ನಂತರ ಬೇವು ಮತ್ತು ಬೆಲ್ಲವನ್ನು ಜೊತೆಯಾಗಿ ಸವಿಯಬೇಕು.
– ಈ ದಿನ ನೀವು ಗುರು – ಹಿರಿಯರ ಆಶೀರ್ವಾದವನ್ನು ಕೂಡ ತೆಗೆದುಕೊಳ್ಳಬಹುದು.
ಯುಗಾದಿ ಹಬ್ಬದಂದು ಬೇವು – ಬೆಲ್ಲವು ನಮ್ಮ ಜೀವನದ ಸುಖ – ದುಃಖಗಳ, ನೋವು – ನಲಿವಿನ ಸಮತೋಲನವನ್ನು ಸೂಚಿಸುತ್ತದೆ. ಯುಗಾದಿ ದಿನ ನಾವು ಬೇವು – ಬೆಲ್ಲವನ್ನು ಸೇವಿಸುವುದರಿಂದ ನಮ್ಮ ಜೀವನದ ಸುಖ – ದುಃಖವನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದಿರುತ್ತೇವೆ ಎನ್ನುವುದನ್ನು ಇದು ಸೂಚಿಸುತ್ತದೆ. ನೀವೂ ಈ ಬಾರಿ ಯುಗಾದಿಯಂದು ಬೇವು – ಬೆಲ್ಲ ಅಂದರೆ ಸಿಹಿ – ಕಹಿಯನ್ನು ಸವಿದು ಜೀವನದ ಪ್ರತೀ ಕ್ಷಣವನ್ನು ಬೇವು – ಬೆಲ್ಲದಂತೆ ಅನುಭವಿಸಿ. ಈ ಯುಗಾದಿ ಎಲ್ಲರಿಗೂ ಶುಭವನ್ನೇ ತರಲಿ.
‌ *ಯುಗಾದಿ ಹಬ್ಬಕ್ಕಿರಲಿ ಆರೋಗ್ಯಪೂರ್ಣ ಅಭ್ಯಂಗ*

ಹಬ್ಬಗಳಲ್ಲಿ ಪೂಜೆ, ನೈವೇದ್ಯದಂಥ ಕ್ರಮಗಳ ಜೊತೆಯಲ್ಲೇ ಸಲ್ಲುವುದು ಅಭ್ಯಂಗ ಸ್ನಾನ ಅಥವಾ ಅಭ್ಯಂಜನ. ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅಭ್ಯಂಗವನ್ನು ಯುಗಾದಿಯಂತಹ ಪ್ರಮುಖ ಹಬ್ಬಗಳಲ್ಲಿ ವಾಡಿಕೆಯಂತೆ ಮಾಡಲಾಗುತ್ತದೆ. ಉಗುರು ಬೆಚ್ಚಗಿನ ಎಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಂಡು ಬಿಸಿನೀರು ಸ್ನಾನ ಮಾಡುವ ಕ್ರಮಕ್ಕೆ ಆಯುರ್ವೇದದಲ್ಲಿಯೂ ಮಹತ್ವದ ಸ್ಥಾನವಿದೆ.

*ಯಾವ ಎಣ್ಣೆಗಳನ್ನು ಬಳಸಬಹುದು ?*
ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆಗಳನ್ನು ಇದಕ್ಕೆ ಬಳಸಬಹುದು. ಸಾಮಾನ್ಯವಾಗಿ ಅರ್ಧ ಎಳ್ಳೆಣ್ಣೆ, ಇನ್ನರ್ಧ ಕೊಬ್ಬರಿ ಎಣ್ಣೆಯನ್ನು ಬಳಸುವುದು ಎಲ್ಲಾ ಕಾಲದಲ್ಲಿಯೂ ಉತ್ತಮ. ಅಭ್ಯಂಗ ಮಾಡುವುದಕ್ಕೆ ಯುಗಾದಿ, ದೀಪಾವಳಿಯನ್ನೇ ಕಾಯಬೇಕೆಂದಿಲ್ಲ; ವಾರಕ್ಕೊಮ್ಮೆ ಮಾಡಿದರೂ ಒಳ್ಳೆಯದೇ. ಆದರೆ ಇಷ್ಟೊಂದು ಸಮಯ ಇರಬೇಕಲ್ಲ. ಒಂದೊಮ್ಮೆ ಇಡೀ ದೇಹಕ್ಕೆ ಮಸಾಜ್‌ ಮಾಡುವಷ್ಟು ಸಮಯ ಇಲ್ಲದಿದ್ದರೆ, ಕೈ-ಕಾಲು, ತಲೆ-ಮುಖಗಳಿಗಾದರೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಒಳ್ಳೆಯದು. ಅಂತೂ ಎಣ್ಣೆ ಸ್ನಾನ ದೇಹಕ್ಕೆ ಬೇಕು.

ಇದನ್ನು ಮಾಡುವುದಕ್ಕೆ ಬೆಳಗಿನ ಜಾವ, ಅಂದರೆ ಬ್ರಾಹ್ಮೀ ಮುಹೂರ್ತ ಒಳ್ಳೆಯದು ಎನ್ನಲಾಗುತ್ತದೆ. ಆ ಹೊತ್ತಿಗೆ ಸಾಧ್ಯವಿಲ್ಲ ಎಂದಾದರೆ, ದಿನದ ಬೇರಾವುದೇ ಹೊತ್ತೂ ಆದೀತು. ಆದರೆ ಹೊಟ್ಟೆ ತುಂಬಿದಾಗ ಮಾಡುವಂತಿಲ್ಲ. ಬೆಳಗಿನ ತಿಂಡಿ ಆದ ಅಥವಾ ಮಧ್ಯಾಹ್ನದ ಊಟದ ನಂತರ ಮೂರು ತಾಸುಗಳ ಬಳಿಕ ಅಭ್ಯಂಗಕ್ಕೆ ತೊಂದರೆಯಿಲ್ಲ.

*ಒತ್ತಡ ನಿಯಂತ್ರಣ*
ಆಯುರ್ವೇದದ ಪ್ರಕಾರ, ಮೈ-ಕೈ ನೋವು, ಸಂಧಿವಾತ ನಿರ್ವಹಣೆಯಿಂದ ಹಿಡಿದು, ಅಭ್ಯಂಗದ ಪ್ರಯೋಜನಗಳು ಬಹಳ ಇವೆ. ಆದರೆ ಸಾಮಾನ್ಯ ಮಾತುಗಳಲ್ಲಿ ಹೇಳುವುದಾದರೆ ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಒಳ್ಳೆಯ ಮದ್ದು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿರುವ ಸ್ಪಾ ಮಸಾಜ್‌ನಂಥವು ಸಹ ಇದೇ ರೀತಿಯ ತತ್ವಗಳನ್ನು ಬಳಸುತ್ತವೆ. ನವಿರಾದ ಎಣ್ಣೆ ಮಸಾಜ್‌ ಮತ್ತು ಹದವಾದ ಬಿಸಿ ನೀರ ಸ್ನಾನವು ಸಾಧಾರಣ ಎಂಥಾ ಒತ್ತಡವನ್ನೂ ಶಮನ ಮಾಡಬಲ್ಲದು.

*ಚರ್ಮದ ಆರೋಗ್ಯ*
ಎಣ್ಣೆ ಒತ್ತುವುದರಿಂದ ಚರ್ಮದ ತೇವಾಂಶವನ್ನು ಕಾಪಾಡಬಹುದು. ಒಡೆದ ಹಿಮ್ಮಡಿಗಳು, ತಲೆ ಹೊಟ್ಟು, ಚರ್ಮ ಸುಕ್ಕಾಗುವುದು ಮುಂತಾದವನ್ನು ತಡೆಗಟ್ಟು, ಇಡೀ ದೇಹವನ್ನು ಕಾಂತಿಯುತವಾಗಿ ಇರಿಸುತ್ತದೆ. ಕೀಲುಗಳಿಗೆ ಪದೇಪದೇ ಎಣ್ಣೆ ಹಚ್ಚುವುದರಿಂದ, ಅವುಗಳ ಆರೋಗ್ಯವೂ ಸುಧಾರಿಸುತ್ತದೆ. ಎಣ್ಣೆ ಮತ್ತು ಬಿಸಿನೀರಿನಿಂದ ಮೈ-ಕೈ ನೋವು ಸಹ ಕಡಿಮೆಯಾಗುತ್ತದೆ. ಹಾಗಾಗಿ ಬಾಣಂತಿಯರಿಗೆ ಎಣ್ಣೆ-ನೀರು ಹಾಕುವ ಕ್ರಮವಿದೆ.

*ಕಣ್ಣಿನ ಆರೋಗ್ಯಕ್ಕೆ*
ದಿನದ ಹೆಚ್ಚಿನ ಹೊತ್ತು ಸ್ಕ್ರೀನ್‌ ನೋಡುವುದರಿಂದ ಕಣ್ಣುಗಳ ಸಹಜವಾಗಿ ಹೆಚ್ಚು ಆಯಾಸಗೊಳ್ಳುತ್ತವೆ. ಹಾಗಾಗಿ ತಲೆ ತಂಪಾಗುವಂತೆ ಎಣ್ಣೆ ಮಸಾಜ್‌ ಮಾಡುವುದರಿಂದ, ತಲೆ, ಕಣ್ಣಿನ ನರಗಳ ಆಯಾಸವೆಲ್ಲಾ ಶಮನವಾಗುತ್ತದೆ. ದೃಷ್ಟಿ ಚುರುಕಾಗುತ್ತದೆ. ಇಡೀ ದೇಹದ ಒತ್ತಡ ನಿವಾರಣೆಯಲ್ಲಿ ಇದರ ಪಾತ್ರವೂ ಮಹತ್ವದ್ದು.

*ಕಣ್ತುಂಬಾ ನಿದ್ದೆ*
ನಿದ್ರಾಹೀನತೆಯಲ್ಲಿ ಒತ್ತಡದ್ದೇ ಮುಖ್ಯ ಭೂಮಿಕೆ. ಒತ್ತಡ ನಿವಾರಣೆ ಆಗುತ್ತಿದ್ದಂತೆ ನಿದ್ದೆಯೂ ಸುಲಲಿತವಾಗುತ್ತದೆ. ಅದರಲ್ಲೂ, ಎಣ್ಣೆ- ಬಿಸಿನೀರಿನ ಸ್ನಾನವು ನಿದ್ದೆಯನ್ನು ಉದ್ದೀಪಿಸುತ್ತವೆ. ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ಇದ್ದವರು ಪದೇಪದೇ ಅಭ್ಯಂಗ ಮಾಡುವುದು ಒಳ್ಳೆಯ ಪರಿಹಾರ ಆಗಬಲ್ಲದು.

*ಯಾರಿಗೆ ಸೂಕ್ತವಲ್ಲ ?*
ಅಭ್ಯಂಗವನ್ನು ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದರೂ ಅದಕ್ಕೆ ಕೆಲವು ಅಪವಾದಗಳಿವೆ. ಸೋಂಕು, ಜ್ವರ, ನೆಗಡಿಯಿಂದ ಬಳಲುತ್ತಿರುವವರಿಗೆ ಅಭ್ಯಂಗ ಸಲ್ಲದು. ಆರೋಗ್ಯ ಸುಧಾರಿಸಿದ ನಂತರ ಎಣ್ಣೆ-ನೀರು ಸೂಕ್ತ. ಜೋರು ಮಳೆಗಾಲದಲ್ಲಿ ಅಥವಾ ವಾತಾವರಣದಲ್ಲಿ ಬಹಳ ಥಂಡಿಯಿದ್ದಾಗ ಎಣ್ಣೆ ಸ್ನಾನ ಬೇಕಾಗುವುದಿಲ್ಲ.

ಎಣ್ಣೆ ಲೇಪಿಸಿಕೊಂಡ ಮೇಲೆ ತಾಸುಗಟ್ಟಲೆ ನೆನೆಯುತ್ತಾ ಕುಳಿತುಕೊಳ್ಳಬೇಕಿಲ್ಲ. ಹತ್ತಾರು ನಿಮಿಷಗಳ ನಂತರ ಬಿಸಿನೀರಿನ ಸ್ನಾನ ಮಾಡಬಹುದು. ಜೊತೆಗೆ ಕಡಲೆಹಿಟ್ಟು, ಹೆಸರಿಟ್ಟು, ಸೀಗೆಪುಡಿಯಂಥವುಗಳ ಬಳಕೆ ಒಳ್ಳೆಯದು.


Spread the love

About Yuva Bharatha

Check Also

ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ !

Spread the loveಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ ! ಉದ್ಯಮ ಕ್ಷೇತ್ರದಲ್ಲಿ ಪುರುಷರದ್ದೆ ಸಿಂಹಪಾಲು. ಆದರೆ …

Leave a Reply

Your email address will not be published. Required fields are marked *

11 − 7 =