ಮುಖ್ಯಮಂತ್ರಿಗಳಿಂದ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವ ಭರವಸೆ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ
ಯುವ ಭಾರತ ಸುದ್ದಿ ಬೆಂಗಳೂರು :
ಎಲ್ಲ ವರ್ಗಗಳಲ್ಲಿಯೂ ಹಿಂದುಳಿದ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿಯನ್ನು ರಚಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಅವರು, ಈ ಸಮಾಜವು ಆರ್ಥಿಕ ವಾಗಿ ಮುಂದೆ ಬರಲು ಹಾಗೂ ಸಮಾಜಕ್ಕೆ ಸರಕಾರದ ವಿವಿಧ ಅನುಕೂಲತೆಗಾಗಿ ಕೂಡಲೇ ಕ್ಷತ್ರಿಯ ಸಮಾಜಕ್ಕೂ ನಿಗಮ ಮಂಡಳಿ ರಚಿಸಿ ಸಮಾಜಕ್ಕೆ ಅನುಕೂಲ ಮಾಡಿಕೊಡುವಂತೆ ಅವರು ಮನವಿ ಮಾಡಿದ್ದಾರೆ.
ಇತಿಹಾಸದ ಉದ್ದಲಗಕ್ಕೂ ಸಾಮ್ರಾಜ್ಯಗಳ ಕಲೆ, ಸಾಹಿತ್ಯ, ನೆಲ, ಜಲ, ಪರಂಪರೆ, ದೇಗುಲಗಳು ಸೇರಿದಂತೆ ಸಾಮಾನ್ಯ ಜನರ ರಕ್ಷಣೆಯ ಹೊಣೆ ಹೊತ್ತು ಶೌರ್ಯ ಪರಾಕ್ರಮದಿಂದ ದುಡಿದು ಅರಸರಾಗಿಯೂ ಆಳಿರುವ ಹಿನ್ನೆಲೆಯುಳ್ಳ ಈ ಸಮಾಜವಿಂದು ತೀರ ಹಿಂದುಳಿದಿದೆ. ಕ್ಷತ್ರಿಯ ಸಮಾಜದ ಸಂಘಟನೆಗಳು ಹಾಗೂ ಸಮಾಜದ ಮುಖಂಡರು ಈ ಬಗ್ಗೆ ನನ್ನನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಮಾಜದ ಬಾಂಧವರ ಮನವಿಯನ್ನು ಮುಖ್ಯಮಂತ್ರಿಗಳನ್ನು ಇಂದು ಭೇಟಿ ಮಾಡಿ ಪ್ರತ್ಯೇಕ ನಿಗಮವನ್ನು ರಚನೆ ಮಾಡುವಂತೆ ಕೋರಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶುಕ್ರವಾರದಂದೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಕ್ಷತ್ರಿಯ ಸಮಾಜಕ್ಕೂ ಪ್ರತ್ಯೇಕ ನಿಗಮ ಮಂಡಳಿಯನ್ನು ರಚಿಸಿ ಆದೇಶ ಹೊರಡಿಸುವ ಭರವಸೆಯನ್ನು ಬೊಮ್ಮಾಯಿ ಅವರು ನೀಡಿದ್ದಾರೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.