ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಕುಂದಾಪುರ ವಾಜಪೇಯಿ ಖ್ಯಾತಿಯ ಶಾಸಕ !

ಯುವ ಭಾರತ ಸುದ್ದಿ ಕುಂದಾಪುರ :
ಈ ಬಾರಿ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ನಡೆಸುವುದಿಲ್ಲ ಎಂದು ಕುಂದಾಪುರ ಬಿಜೆಪಿ ಶಾಸಕ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.
72 ವರ್ಷದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಮತಕ್ಷೇತ್ರದಿಂದ ಸತತ ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸಲ ಬಿಜೆಪಿ ಹಾಗೂ ಒಮ್ಮೆ ಪಕ್ಷೇತರಾಗಿ ಆಯ್ಕೆಯಾಗಿದ್ದಾರೆ. ನಾನು ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಶಾಸಕನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠೆಯಿಂದ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ನನ್ನನ್ನು ಬಹು ನಿರೀಕ್ಷೆಯಿಂದ ಆಯ್ಕೆ ಮಾಡಿದ ಕುಂದಾಪುರದ ಎಲ್ಲಾ ವರ್ಗದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕುಂದಾಪುರ ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಎಲ್ಲಾ ವರ್ಗದ ಮತದಾರರ ನೋವು ನಲಿವುಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿ ನನಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪ್ರಮುಖರಿಗೆ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರಋಣಿ ಎಂದು ಅವರು ತಿಳಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
YuvaBharataha Latest Kannada News