ಬೆಳಗಾವಿವರೆಗೂ ಬಾರದು ವಂದೇ ಭಾರತ್ ರೈಲು
ಯುವ ಭಾರತ ಸುದ್ದಿ ಬೆಳಗಾವಿ :
ಜುಲೈ 26 ರಿಂದ ಹುಬ್ಬಳ್ಳಿ -ಬೆಂಗಳೂರು ನಡುವೆ ಅತಿ ವೇಗವಾಗಿ ಚಲಿಸುವ ವಂದೇ ಭಾರತ್ ರೈಲು ಆರಂಭವಾಗಲಿದೆ. ಆದರೆ ಈ ರೈಲು ಬೆಳಗಾವಿಗೆ ಬರಲು ತಾಂತ್ರಿಕ ಸಮಸ್ಯೆಯಂತೆ !
ಈ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಪಷ್ಟನೆ ನೀಡಿ ವಂದೇ ಭಾರತ ರೈಲು ಸೇವೆ ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ವಂದೇ ಭಾರತ ರೈಲು ಬೆಂಗಳೂರಿನಿಂದ ಧಾರವಾಡ ಮಾರ್ಗದಲ್ಲಿ 110 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಅದನ್ನು 130 ಕಿಲೋಮೀಟರ್ ವೇಗ ಮಾಡಿ ನಾಲ್ಕುವರೆಯಿಂದ 5 ಗಂಟೆ ವರೆಗೆ ಪ್ರಯಾಣ ಮುಗಿಸುವ ಯೋಜನೆ ರೂಪಿಸಲಾಗುತ್ತದೆ. ಬೆಳಗಾವಿ ವರೆಗೂ ಇದನ್ನು ವಿಸ್ತರಿಸಬೇಕೆಂಬ ಬೇಡಿಕೆ ಇತ್ತು. ಆದರೆ ಈ ಭಾಗದಲ್ಲಿ ಡಬಲಿಂಗ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಬೆಳಗಾವಿಗೆ ಇದನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆ ಬಿಜೆಪಿ ನೇತೃತ್ವದ ಸರಕಾರದ ನೀತಿಗೆ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುರೇಶ ಅಂಗಡಿ ಅವರ ಅವಧಿಯಲ್ಲಿ ಬೆಳಗಾವಿಗೆ ರೈಲು ಯೋಜನೆಗಳು ಹರಿದು ಬಂದಿದ್ದವು. ಆದರೆ ಇದೀಗ ಎಲ್ಲಾ ಯೋಜನೆಗಳು ಹುಬ್ಬಳ್ಳಿ- ಧಾರವಾಡಕ್ಕೆ ಮಾತ್ರ ಸೀಮಿತವಾಗುತ್ತಿವೆ ಎಂಬ ಮಾತಿಗೆ ವಂದೇ ಭಾರತ ರೈಲು ನಿದರ್ಶನವಾಗುತ್ತಿದೆ.