ಪಿಂಕ್ ವಾಟ್ಸಾಪ್ ಲಿಂಕ್ ಬಗ್ಗೆ ಎಚ್ಚರ ವಹಿಸಿ : ನವೀನ ಫೀಚರ್ ಎಂದು ಕ್ಲಿಕ್ ಮಾಡಿದ್ರೆ ನಿಮ್ಮ ಹಣ, ದಾಖಲೆಗಳೇ ಮಾಯ !
ಯುವ ಭಾರತ ಸುದ್ದಿ ಮುಂಬಯಿ :
ಇಂದು ಆಧುನಿಕ ತಂತ್ರಜ್ಞಾನದ ಅತಿರೇಕ ಅಧಿಕವಾಗಿದೆ. ಈ ಮಾಧ್ಯಮಗಳ ಮೂಲಕ ವಂಚಕರು ದಿನೇದಿನೇ ವಂಚನೆ ಮಾಡುತ್ತಿದ್ದಾರೆ. ಪೊಲೀಸರಿಗೂ ಇದಕ್ಕೆ ತಡೆಯುವುದು ಕಠಿಣವಾಗುತ್ತಿದೆ. ಅದರಲ್ಲೂ ಹೊಸ ಹೊಸ ಲಿಂಕ್ ಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವ ಪ್ರಕರಣ ದಾಖಲಾಗುತ್ತಿದ್ದು, ನಾಗರಿಕರು ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯ.
ಸ್ಕ್ಯಾಮರ್‌ಗಳು ಆನ್ಲೈನ್ ವಂಚನೆ, ಮೋಸ ಇತ್ಯಾದಿಗಳಿಗೆ ವಾಟ್ಸಾಪ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ.
ಪಿಂಕ್ ವಾಟ್ಸಾಪ್ ಎಂಬುದು ವಂಚನೆ ಪಟ್ಟಿಗೆ ಸೇರ್ಪಡೆಯಾಗಿದೆ. ಇತ್ತೀಚಿಗೆ ವಾಟ್ಸಾಪ್ ಮೂಲಕ ವಂಚಕರು ಪಿಂಕ್ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್‌ಅನ್ನು ಸ್ವೀಕರಿಸಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಜನರನ್ನು ಮೋಸಗೊಳಿಸಲೆಂದೆ ಆನ್ಲೈನ್ ವಂಚಕರು ಪಿಂಕ್ ವಾಟ್ಸಾಪ್ ಲಿಂಕ್ ಕಳುಹಿಸುತ್ತಾರೆ.
ಪಿಂಕ್ ಕಲರ್ ವಾಟ್ಸಾಪ್ ಲೋಗೋವನ್ನು ಅಪ್‌ಡೇಟ್ ಮಾಡಲು ಮತ್ತು ಪಡೆದುಕೊಳ್ಳಲು ಬಳಕೆದಾರರನ್ನು ಕೇಳುವ ನಕಲಿ ಯುಆರ್‌ಎಲ್ ಲಿಂಕ್ ಹರಿದಾಡುತ್ತಿದೆ ಎಂದು ಮುಂಬೈ ಪೊಲೀಸರು ಎಚ್ಚರಿಸಿದ್ದಾರೆ.
ಇದು ಮೋಸ ಮಾಡುವ ಲಿಂಕ್ ಆಗಿದ್ದು, ಬಳಕೆದಾರರು ತಮ್ಮ ಮೊಬೈಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬಹುದು ಅಥವಾ ಅವರ ಮೊಬೈಲ್ ಹ್ಯಾಕ್ ಆಗಬಹುದು.
ಈ ಲಿಂಕ್‌ನ್ನು ಕ್ಲಿಕ್ ಮಾಡಿದರೆ ಹೊಸ ವಾಟ್ಸಾಪ್ ಅಪ್ಡೇಟ್‌ಗಳು ನಿಮಗೆ ದೊರಕುತ್ತವೆ. ಲೋಗೊ ಬಣ್ಣ ಬದಲಾಗುವುದಲ್ಲದೆ ಹಲವು ಫೀಚರ್‌ಗಳು ದೊರಕುತ್ತವೆ ಎಂದು ನಂಬಿಸುತ್ತಾರೆ.
ಹೊಸ ಫೀಚರ್ ಎಂದು ಪಿಂಕ್ ವಾಟ್ಸಾಪ್ ಲಿಂಕ್‌ಅನ್ನು ಕ್ಲಿಕ್ ಮಾಡಿದರೆ ಹಣ, ಮೊಬೈಲ್‌ನಲ್ಲಿರುವ ಫೋಟೋ, ವಿಡಿಯೋ ಒಳಗೊಂಡ ಎಲ್ಲ ದಾಖಲೆಗಳು ಮೋಸಗಾರರ ಕೈ ಸೇರುತ್ತದೆ.
ಇದು ಫೋಟೋಗಳು, ಒಟಿಪಿ(OTP)ಗಳು ಮತ್ತು ಸಂಪರ್ಕಗಳಂತಹ ವೈಯಕ್ತಿಕ ಡೇಟಾವನ್ನು ದುರ್ಬಲಗೊಳಿಸುತ್ತದೆ. ಈ ಡೇಟಾವನ್ನು ವಂಚಕರು ಸುಲಭವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ.
ವಂಚಕರು ಸ್ಪ್ಯಾಮ್ ಮೆಸೆಜ್‌ಗಳನ್ನು ಕಳುಹಿಸಿ ಬ್ಯಾಂಕಿನಿಂದ, ಗೂಗಲ್ ಪೇ, ಫೋನ್ ಪೇಯಿಂದ ಹಣ ಕದಿಯಬಹುದು, ನಿಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬಳಸಿ ಸಮಾಜಘಾತುಕ, ಕಾನೂನು ವಿರೋಧಿ ಚಟುವಟಿಕೆಗಳಿಗೆ ಬಳಸಬಹುದು ಅಥವಾ ಸಹಿಯನ್ನು ದುರುಪಯೋಗಪಡಿಸಿಕೊಳ್ಳಬಹುದು
ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಯನ್ನು ಕದಿಯಬಹುದು. ಇದನ್ನು ಕೆಟ್ಟ ಉದ್ದೇಶಗಳಿಗೆ ಅಥವಾ ಮಾರ್ಕೆಟಿಂಗ್ ಉದ್ದೇಶಗಳಿಗೆ ಬಳಸಬಹುದು
ನಿಮ್ಮ ಗ್ಯಾಲರಿಯಲ್ಲಿರುವ ಫೋಟೊಗಳನ್ನು ಕದ್ದು ಕೆಟ್ಟ ಉದ್ದೇಶಗಳಿಗೆ ಬಳಸಬಹುದು
ನಿಮ್ಮ ಮೊಬೈಲ್ ಮೇಲೆ ನಿಮಗೆ ನಿಯಂತ್ರಣ ಇಲ್ಲದಂತೆ ಮಾಡುವ ಸಾಧ್ಯತೆಯೂ ಇರುತ್ತದೆ.
ಈಗಾಗಲೇ Pink WhatsApp ಡೌನ್‌ಲೋಡ್ ಮಾಡಿದ್ದರೆ ಏನು ಮಾಡಬೇಕು?
ಅಂತಹ ಅಪ್ಲಿಕೇಶನ್ ಈಗಾಗಲೇ ಡೌನ್‌ಲೋಡ್ ಆಗಿದ್ದರೆ ತಕ್ಷಣ ಅನ್‌ಇನ್‌ಸ್ಟಾಲ್ ಮಾಡಲು ಮುಂಬೈ ಪೊಲೀಸರು ಬಳಕೆದಾರರಿಗೆ ಸೂಚಿಸಿದ್ದಾರೆ. ಯಾದೃಚ್ಛಿಕ ಲಿಂಕ್(random links)ಗಳಿಗೆ ಬಲಿಯಾಗದಂತೆ ಮತ್ತು ಅಧಿಕೃತ ಪ್ಲೇ ಸ್ಟೋರ್‌ಗಳನ್ನು ಬಿಟ್ಟು ಏನನ್ನೂ ಡೌನ್‌ಲೋಡ್ ಮಾಡದಂತೆ ಪೊಲೀಸರು ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ವಾಟ್ಸಾಪ್‌ನಲ್ಲಿ ವಂಚನೆ ಕರೆಗಳು ಮತ್ತು ಸಂದೇಶಗಳು ಹೆಚ್ಚುತ್ತಿವೆ. +84, +62, +60 ಮತ್ತು ಇವೇ ಮೊದಲಾದವುಗಳಿಂದ ಪ್ರಾರಂಭವಾಗುವ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಅನಾಮಿಕ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಬಹಳಷ್ಟು ಜನರು ಟ್ವಿಟರ್‌ನಲ್ಲಿ ದೂರಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ಕರೆಗಳು ಮತ್ತು ಟೆಕ್ಸ್ಟ್ ಗಳಿಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದಿರಲು ಬಳಕೆದಾರರಿಗೆ ಸಲಹೆ ನೀಡಲಾಗುತ್ತದೆ.