Breaking News

ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯ, ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯ, ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ :
ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯಗಳು ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಮತ್ತಿತರ ಸೌಲಭ್ಯಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳು ಮತ್ತು ಕಾರ್ಮಿಕ ಕಾಯ್ದೆ ಅರಿವು ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರಗುತ್ತಿಗೆ ನೌಕರರಿಗೆ ಶಾಸನಬದ್ಧ ಸೌಲಭ್ಯ ಹಾಗೂ ನಿಯಮಾವಳಿ ಪ್ರಕಾರ ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.

ಕೆಲವೆಡೆ ಹೊರಗುತ್ತಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ. ಗುತ್ತಿಗೆದಾರರು ಸೇವಾಶುಲ್ಕವನ್ನು ಮಾತ್ರ ಕಡಿತ ಮಾಡಬೇಕು. ಉಳಿದಂತೆ ನೌಕರರಿಗೆ ದೊರಕಬೇಕಾದ ಸೌಲಭ್ಯ ಒದಗಿಸಬೇಕು. ಸೇವಾಶುಲ್ಕ ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವೇತನ ಕಡಿತವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೌಕರರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು:
ಪ್ರತಿಯೊಬ್ಬ ಹೊರ ಗುತ್ತಿಗೆ ನೌಕರರು ಕಡ್ಡಾಯವಾಗಿ ಭವಿಷ್ಯ ನಿಧಿ, ಇ.ಎಸ್.ಐ ಮತ್ತಿತರ ಖಾತೆಗಳನ್ನು ಹೊಂದಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಹೊರ ಗುತ್ತಿಗೆ ನೌಕರರ ವೇತನವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಹೊರ ಗುತ್ತಿಗೆ ನೀಡಿರುವ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮೂಲ ವೇತನ ಮತ್ತು ತುಟ್ಟಿಭತ್ಯೆ ಪಾವತಿಗೆ ಅವಕಾಶ:
ಹೊರಗುತ್ತಿಗೆ ಕಾರ್ಮಿಕರಿಗೆ ಮೂಲ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಾವತಿಸಬೇಕಾಗುತ್ತದೆ. ಈ ವೇತನದಲ್ಲಿ ಇಎಸ್ ಐ, ಪಿಎಫ್, ವೃತ್ತಿ ತೆರಿಗೆಯನ್ನು ಕಟಾಯಿಸಿ ನಿವ್ವಳ ವೇತನವನ್ನು ಪಾವತಿಸಬೇಕು ಎಂದು ಕಾರ್ಮಿಕ ಇಲಾಖೆಯ ಉಪ ಆಯುಕ್ತ ಡಿ.ಜಿ. ನಾಗೇಶ್ ಅವರು ತಿಳಿಸಿದರು.

ಕನಿಷ್ಠ ವೇತನ, ತುಟ್ಟಿ ಭತ್ಯೆ ನೀಡಬೇಕು ಎಂಬುದು ಕನಿಷ್ಠ ವೇತನ ಕಾಯ್ದೆಯಲ್ಲಿದೆ. ಪ್ರತಿ ವರ್ಷ ಏಪ್ರಿಲ್ ಮಾಹೆಯಿಂದ ಇದು ಪರಿಷ್ಕರಣೆ ಮಾಡಿ ತುಟ್ಟಿ ಭತ್ಯೆಯನ್ನು ಸೇರಿಸಿ ವೇತನವನ್ನು ನೀಡಬೇಕು.

ಪ್ರತಿ ತಿಂಗಳು 7 ಹಾಗೂ 10 ನೇ ತಾರೀಖಿನೊಳಗೆ ಬ್ಯಾಂಕ್ ಮೂಲಕ ಅವರ ಖಾತೆಗೆ ಜಮೆ ಮಾಡಬೇಕು. ವೇತನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ವೇತನ ಪಾವತಿ ವಿಳಂಬಗೊಳಿಸಿದರೆ ಕಾನೂನು ಪ್ರಕಾರ ಕ್ರಮವನ್ನು ತೆಗೆದುಕೊಳ್ಳಬಹುದು.
ವೇತನ ವಿಳಂಬ ತಪ್ಪಿಸಲು ಕೆಲ ಷರತ್ತುಗಳನ್ನು ಟೆಂಡರ್ ದಾಖಲೆಗಳಲ್ಲಿ ನಮೂದಿಸಿರಬೇಕು. ಗುತ್ತಿಗೆದಾರ ವೇತನ ಪಾವತಿ ವಿಳಂಬ ಮಾಡಿದರೆ ಅಥವಾ ವೇತನವನ್ನು ಭಾಗಶಃ ಅಥವಾ ಪೂರ್ಣ ಪಾವತಿ ಮಾಡದಿದ್ದರೆ ಸಂಬಂಧಿಸಿದ ಇಲಾಖೆಯೇ ಇದಕ್ಕೆ ಹೊಣೆಯಾಗುತ್ತದೆ.

ಮಹಿಳೆ ಮತ್ತು ಪುರುಷ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವಾಗ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ವೇತನ ತಾರತಮ್ಯವನ್ನು ಮಾಡುವುದು ಕಾನೂನುಬಾಹಿರ ಎಂದು ತಿಳಿಸಿದರು.
ಹೊರಗುತ್ತಿಗೆ ನೌಕರರ ಸೇವೆ ಪಡೆಯುವಾಗ ಗುತ್ತಿಗೆದಾರರು ಕನಿಷ್ಠ ವೇತನವನ್ನು ಕಡ್ಡಾಯವಾಗಿ ನೀಡಬೇಕು ಎಂಬುದನ್ನು ಟೆಂಡರ್ ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ನಾಗೇಶ್ ಹೇಳಿದರು.

ಇದಾದ ಬಳಿಕ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳು, ಇ.ಎಸ್.ಐ., ಭವಿಷ್ಯ ನಿಧಿ ಮತ್ತಿತರ ಸೌಲಭ್ಯಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿ ಶಿವಕುಮಾರ್ ಹಾಗೂ ಸುನಿಲ್ ಅವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ(ಆಡಳಿತ) ಬಸವರಾಜ ಹೆಗ್ಗನಾಯಕ, ಸಹಾಯಕ ಕಾರ್ಮಿಕ ಆಯುಕ್ತರಾದ ಅನ್ಸಾರಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ತರನ್ನುಂ ಬಂಗಾಲಿ, ಮಲ್ಲಿಕಾರ್ಜುನ ಜೋಗೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****

ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಳಗಾವಿ :
ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವತಿಯಿಂದ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರತಿ ಜಿಲ್ಲೆಗೆ ಒಬ್ಬರಂತೆ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆಯನ್ನು ಗುರುತಿಸಿ ಸೆಪ್ಟೆಂಬರ್ ನಲ್ಲಿ ಜರುಗುವ ಕೃಷಿಮೇಳದಲ್ಲಿ “ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ” ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಬೆಳಗಾವಿ ಜಿಲ್ಲೆಯ ಆಸಕ್ತ ರೈತ ಹಾಗೂ ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯನ್ನು ಕೃಷಿ ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಸಂಕೇಶ್ವರ ೫೯೧ ೩೧೪ ಜಿ. ಬೆಳಗಾವಿ ತಾ. ಹುಕ್ಕೇರಿ ಕಛೇರಿಯಿಂದ ಜು.28 ರ ವರೆಗೆ ಕಛೇರಿ ವೇಳೆ ಸೋಮವಾರ ದಿಂದ ಶುಕ್ರವಾರ ಬೆಳಗ್ಗೆ 9 ರಿಂದ ಸಾಯಂಕಾಲ 5 ಘಂಟೆ ಹಾಗೂ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ಒಳಗಾಗಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಉತಾರದೊಂದಿಗೆ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ತೋಟಗಾರಿಕೆ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ ಜು.31 ರ ಒಳಗಾಗಿ ಕಛೇರಿಯ ವೇಳೆಯಲ್ಲಿ ಸಂಕೇಶ್ವರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಕೇಶ್ವರ ಕೃಷಿ ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ (ಮೋಬೈಲ್ ಸಂಖ್ಯೆ ೯೪೪೮೮೭೪೦೯೭/ ೮೨೭೭೨೦೮೧೯೯ ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಸಂಕೇಶ್ವರ ಕೃಷಿ ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ರಾಜಿ

ಬೆಳಗಾವಿ :
ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷೆ ಎಲ್. ವಿಜಯಲಕ್ಷ್ಮಿ ದೇವಿ ಇವರ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜು.8 ರಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು.

ಲೋಕ ಅದಾಲತ್‌ನಲ್ಲಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕ್ರಿಮಿನಲ್ ಕಂಪೌಂಡೆಬಲ್ 116, ಚೆಕ್ ಬೌನ್ಸ್ ಪ್ರಕರಣಗಳು 1004 , ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು 7೦, ವಿದ್ಯುಚ್ಚಕ್ತಿ ಪ್ರಕರಣಗಳು 117, ವೈವಾಹಿಕ ಪ್ರಕರಣಗಳು 35, ಭೂ ಸ್ವಾಧೀನ ಪ್ರಕರಣಗಳು 4೦, ಅಸಲು ಧಾವೆ ಪ್ರಕರಣಗಳು 881 ಹೀಗೆ ಚಾಲ್ತಿ ಇರುವ ಪ್ರಕರಣಗಳಲ್ಲಿ ಒಟ್ಟು 22,227 ಪ್ರಕರಣಗಳು ಒಟ್ಟು 1,01,27,33,784 ರೂ. ಗಳ ಪರಿಹಾರ ಒದಗಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವಿಶೇಷವಾಗಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಗಳಲ್ಲಿ 12 ಹಾಗೂ ತಾಲ್ಲೂಕುಗಳಲ್ಲಿ 13 ಪತಿ-ಪತ್ನಿಯರು ಒಂದಾಗಿರುತ್ತಾರೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × five =