Breaking News

ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ : ಸಿದ್ದರಾಮಯ್ಯ

Spread the love

ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ : ಸಿದ್ದರಾಮಯ್ಯ

ಬೆಂಗಳೂರು :
ಸಮಾನ ಅವಕಾಶಗಳಿಂದ ನೆಮ್ಮದಿ ಶಾಂತಿಯಿಂದ, ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕಟ್ಟುತ್ತೇವೆಂಬ ನಂಬಿಕೆಯಿಂದ ಜನರು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದರು.

ರಾಜ್ಯದ ಜನರು ಯಾವತ್ತು ಬಿಜೆಪಿಯವರಿಗೆ ಆರ್ಶೀವಾದ ಮಾಡಿಲ್ಲ. ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು, ಮ್ಯಾಂಡೇಟ್ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದರು.

*ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ :*

ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿಸುವುದು ಮತ್ತು ನಡ್ಡಾರವರು ನರೇಂದ್ರ ಮೋದಿಯವರನ್ನು ನೋಡಿ ಮತ ನೀಡಿ ಎಂದರೂ ಜನ ಮತ ನೀಡಲಿಲ್ಲ ಎಂದರು. ಇನ್ನು ಮುಂದೆ ಪ್ರಧಾನಿ ಮೋದಿಯವರ ಮೇಲೆ ಅವಲಂಬಿತರಾಗಬೇಡಿ. ಅವರು ಬಂದ ಕಡೆಯಲೆಲ್ಲಾ ಬಿಜೆಪಿ ಸೋತಿದೆ. 1980 ರಲ್ಲಿ ಜನತಾ ಲೋಕದಳದಿಂದ ಲೋಕಸಭಾ ಸ್ಪರ್ಧಿಯಾಗಿದ್ದೆ. ಆ ಸಂದರ್ಭದಲ್ಲಿ ಮಂಜುನಾಥ್ ಎಂದು ಕಾಂಗ್ರೆಸ್ ಅವರ ಅಭ್ಯರ್ಥಿಯಾಗಿದ್ದಾಗ, ಇಂದಿರಾ ಗಂಧಿ ಹೆಸರು ಹೇಳಿ, ಚುನಾವಣೆ ಗೆಲ್ಲುತ್ತೀರಿ ಎಂದು ಅವರಿಗೆ ಹೇಳಿದರು. ಆ ಕಾಲದಲ್ಲಿಯೂ ಕಾಂಗ್ರೆಸ್ ನವರಿಗೆ ಅಲ್ಲ, ಇಂದಿರಾಗಾಂಧಿ ಹೆಸರು ಹೇಳಿದರೆ ಚುನಾವಣೆ ಗೆಲ್ಲುತ್ತಿದ್ದರು. ಅಂತೆಯೇ, ಮೋದಿಯವರಿಗೂ ಹೆಸರು ಇತ್ತು. ಆದರೆ ಈಗ ಅದು ಮಂಕಾಗುತ್ತಿದೆ. ಪ್ರಧಾನಿ ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈಗ ಮಂಕಾಗುತ್ತಿದೆ. ಮೇಲಿದ್ದವರು ಕೆಳಗೆ , ಕೆಳಗಿದ್ದವರು ಮೇಲೆ ಬರಬೇಕು. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದರು.

*ಧರ್ಮಗಳ ನಡುವೆ ಬೆಂಕಿಯಿಡುವುದು ನಮ್ಮ ಪರಂಪರೆಯಲ್ಲ :*

ಕರ್ನಾಟಕದ ಒಂದು ಸಾವಿರ ವರ್ಷಗಳ ಪರಂಪರೆಯನ್ನು ಭಾಷಣದಲ್ಲಿ ಮಾಡಿಕೊಟ್ಟಿದ್ದಾರೆ. ಕವಿರಾಜಮಾರ್ಗ ಶ್ರೀ ವಿಜಯ ದಲ್ಲಿ ಪರಧರ್ಮವನ್ನು , ಜೀವನ ಮಾರ್ಗಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದೇ ಆಸ್ತಿ ಮತ್ತುಒಡವೆ ಎಂದು ಅದರಲ್ಲಿ ತಿಳಿಸಿದ್ದಾರೆ. ಅದೇ ಸಮಾಜದ ಆಸ್ತಿ ಎಂದು ಅಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಧರ್ಮಗಳು ಬೇರೆ ಇರಬಹುದು . ಆದರೆ ಎಲ್ಲ ಧರ್ಮಗಳ ಸಾರ ಒಂದೇ . ಮನುಷ್ಯರ ನಡುವೆ ಗೋಡೆ ಕಟ್ಟುವುದು, ಧರ್ಮಗಳ ನಡುವೆ ಬೆಂಕಿ ಇಡುವುದು ಅಮಾನವೀಯವಾದುದು. ಅದು ನಮ್ಮ ಪರಂಪರೆ ಅಲ್ಲ. ಎಲ್ಲರದರಲ್ಲೂ ವೈರುಧ್ಯಗಳಿದ್ದರೂ , ಏಕತೆಯನ್ನು ಕಾಣಬೇಕು. ಅದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದು ಒಂದು ಧರ್ಮ, ಜಾತಿಗೆ ಅಂಟಿಕೊಂಡವರಲ್ಲ ಎಂದರು.

*ಜಾತ್ಯಾತೀತೆಯ ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧ :*

ಎಲ್ಲ ಧರ್ಮ, ಜಾತಿ, ಆಚಾರಗಳನ್ನು ಗೌರವಿಸುತ್ತೇವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಆದಿಕವಿ ಪಂಪ ಹೇಳಿದರು. ನಾವೆಲ್ಲರೂ ಮಾನವತಾವಾದಿಗಳು. ಇದೇ ನಮ್ಮ ಸಂವಿಧಾನದಲ್ಲಿರುವದರಿಂದ , ಸಂವಿಧಾನದ ಹೊರತಾಗಿ ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಈ ಸಿದ್ದಾಂತಕ್ಕೆ ಕಾಂಗ್ರೆಸ್ ಪಕ್ಷ ಬದ್ಧತೆಯಾಗಿದೆ. ಇದನ್ನೇ ಜಾತ್ಯಾತೀತೆ ಎಂದು ಸಂವಿಧಾನ ತಿಳಿಸಿದೆ. ಭಾರತ ದೇಶದಲ್ಲಿ 142 ಕೋಟಿ ಜನತೆ ಇದೆ. ಅಷ್ಟು ಜನರೆಲ್ಲರೂ ಒಂದೇ , ನಾವೆಲ್ಲಾ ಭಾರತೀಯರೇ . ಯಾರದೋ ಸ್ವಾರ್ಥಕ್ಕಾಗಿ ಜಾತಿ ಮಾಡಲ್ಪಟ್ಟಿತ್ತು. 850 ವರ್ಷಗಳ ಹಿಂದೆಯೆ ಬಸವಣ್ಣನವರು ಹೇಳಿದಂತೆ , ಕಾಯಕ ಮತ್ತು ದಾಸೋಹ. ವೃತ್ತಿಯಲ್ಲಿ ಯಾರು ಮೇಲೂ ಅಲ್ಲ ಕೀಳೂ ಅಲ್ಲ. ಅನುಭವ ಮಂಟಪ ಅಲ್ಲಿಂದಲೇ ಬಂದಿದ್ದು . ವಿಧಾನಮಂಡಲದ ಪರಿಕಲ್ಪನೆ ಅಲ್ಲಿಂದಲೇ ಬಂದಿದೆ. ಜಾತಿ ಪದ್ದತಿಯಲ್ಲಿ ಮೇಲೊಬ್ಬ , ಕೆಳಗೊಬ್ಬ ಎಂಬ ಬೇಧಭಾವ ಇದೆ. Vertical society ಯನ್ನು horizontal society ಯಾಗಿ ಮಾಡಬೇಕು. ಮನುಷ್ಯರನ್ನು ಮೇಲೆ ಕೆಳಗೆ ಮಾಡಬಾರದು , ಎಲ್ಲರೂ ಸಮಾನಾಗಿರಬೇಕು ಎಂದರು.

*ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು :*

ಬಿಜೆಪಿಯವರಿಗೆ ಜಾತಿಯತೆ ಮಾಡಬೇಡಿ ಎಂದು ಬಹಳ ಬಾರಿ ಹೇಳಿದ್ದೇನೆ. ನಾವೇ , ನಮ್ಮ ಧರ್ಮವೇ ಶ್ರೇಷ್ಠ ಎನ್ನಬಾರದು. ಇದನ್ನು ಜನ ಒಪ್ಪಲ್ಲ. 5 ಚುನಾವಣೆಯಲ್ಲಿಯೂ ಜನ ನಿಮ್ಮನ್ನು ನಂಬಲ್ಲ. ಹಿಟ್ಲರ್ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಯಾಕೆ ಬೇಸರ? ಹಿಟ್ಲರ್ ಒಬ್ಬ ಮತಾಂಧ , ಬಿಜೆಪಿಯವರು ಅವನ ಪರವೇ ? ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು. ಜಾತಿ ನಡುವೆ ಬೆಂಕಿ ಹಚ್ಚಿದರೆ ಅದು ನಮ್ಮನೇ ಸುಡುತ್ತದೆ. ನಮ್ಮ ಸಮಾಜ ಒಳಿತಿಗೆ ಏನು ಮಾಡಬೇಕು. ರಾಜಕೀಯವಾಗಿ, ಸಾಮಾಜಿಕವಾಗಿ ಅಸಮಾನತೆ ಇದ್ದು , ಅದನ್ನು ಹೋಗಲಾಡಿಸಬೇಕು. 1949 , ನವೆಂಬರ್ 29 ನಲ್ಲಿ ಅಂಬೇಡ್ಕರ್ ಅವರು ಐತಿಹಾಸಿಕ ಭಾಷಣ ಮಾಡಿದರು. ನಾವು ಎಲ್ಲರಿಗೂ ಸಮಾನತೆ ನೀಡಿದ್ದೇವೆ. ಒಂದು ಮತ , ಒಂದು ಮೌಲ್ಯ ಎಂದಿದ್ದಾರೆ. ಆದರೆ ಸಾಮಾಜಿಕವಾಗಿ , ಆರ್ಥಿಕವಾಗಿ ಅಸಮಾನತೆ ಇದೆ . ಪ್ರಜಾಪ್ರಭುತ್ವದ ಸೌಧ ಧ್ವಂಸವಾಗುತ್ತದೆ ಎಂದು ಆಗಲೇ ಎಚ್ಚರಿಕೆ ನೀಡಿದ್ದರು ಎಂದರು.

*ನಾವು ಜನರ ಜೇಬಿಗೆ ದುಡ್ಡು ಹಾಕುತ್ತಿದ್ದೇವೆ :*
ರಾಜ್ಯದಲ್ಲಿ ಸಮಾನತೆ, ಸಾಮರಸ್ಯ ಇರಬೇಕು. ಉತ್ತರ ಯೂರೋಪ್ ದೇಶಗಳಲ್ಲಿ Universal basic income ನ್ನು ಪಾಲಿಸುತ್ತಿದ್ದಾರೆ. ಅದಕ್ಕೆ ನಾವು ಜನರ ಜೇಬಿಗೆ ದುಡ್ಡು ಹಾಕುತ್ತಿದ್ದೇವೆ. ಪಂಚ ಗ್ಯಾರೆಂಟಿಗಳ ಮೂಲಕ ಎಲ್ಲರಿಗೂ 5000 ರೂ. ಸಿಗುತ್ತದೆ.ಬಿಜೆಪಿಯವರು, ಅಕ್ಕಿ ಗೋಧಿ ಮೇಲೆ, ಹಾಲು ಮೊಸರು, ಪೆನ್ನು ಪೆನ್ಸಿಲ್ ಮೇಲೆ ಜಿಎಸ್ ಟಿ ಹಾಕುವ ಮೂಲಕ ಜೇಬಿನಿಂದ ಹಣ ಕಿತ್ತರು. ನಾವು ನೀಡುವ ಗೃಹ ಲಕ್ಷ್ಮಿ, ಗೃಹ ಜ್ಯೋತಿ , ಅನ್ನಭಾಗ್ಯ, ಶಕ್ತಿ, ಯುವನಿಧಿ ಗಳ ಮೂಲಕ ವರ್ಷಕ್ಕೆ ಸುಮಾರು 52,000 ಕೋಟಿಗೂ ಹೆಚ್ಚು ಖರ್ಚಾಗುತ್ತದೆ. ಜನರಿಗೆ ಮಾಹೆಯಾನ ಸುಮಾರು 5 ಸಾವಿರ ನೀಡಲಾಗುತ್ತವೆ. ಜನರ ಕೈಯಲ್ಲಿ ದುಡ್ಡು ಇದ್ದರೆ , ವ್ಯಾಪಾರ , ವಹಿವಾಟು ನಡೆಯುತ್ತದೆ. ಕರೋನಾ ಸಂದರ್ಭದಲ್ಲಿ ಜನರ ಕೈಯಲ್ಲಿ ದುಡ್ಡು ಇರದೇ ತೊಂದರೆ ಅನುಭವಿಸಿದರು. ಗ್ಯಾರೆಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿಗಳೇ ಹೇಳಿದ್ದಾರೆ. ಆದರೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಹಾಗೂ ರಾಜ್ಯ ದಿವಾಳಿಯಾಗುವುದಕ್ಕೂ ಬಿಡುವುದಿಲ್ಲ ಎಂದರು.

*ವಿರೋಧ ಪಕ್ಷದವರದು ಅವಿವೇಕದ ತರ್ಕ :*
20 ಮೇ ರಂದು ಅಧಿಕಾರಕ್ಕೆ ಬಂದ ತಕ್ಷಣ , ಸರ್ಕಾರ 5 ಗ್ಯಾರೆಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿತು. ಜೂನ್ 8 ರಂದು ಯಾವ ಯೋಜನೆಗಳು ಯಾವಾಗ ಜಾರಿಯಾಗಬೇಕೆಂದೂ ನಿರ್ಧರಿಸಲಾಯಿತು. ಆಯವ್ಯಯದಲ್ಲಿ 5 ಗ್ಯಾರೆಂಟಿಗಳಿಗೂ ಹಣ ನಿಗದಿಪಡಿಸಲಾಗಿದೆ. ಇಷ್ಟು ಹಣ ಎಲ್ಲಿಂದ ಬರುತ್ತದೆ , ರಾಜ್ಯ ಹೇಗೆ ನಡೆಸುತ್ತಾರೆ ಎಂದು ಟೀಕಿಸಿದರು. ಗ್ಯಾರೆಂಟಿಗಳಿಗೆ ಷರತ್ತುಗಳನ್ನು ಹಾಕಿದ್ದಿರಿ ಎಂದು ಈಗ ಟೀಕಿಸುತ್ತಿದ್ದಾರೆ. ಷರತ್ತುಗಳಿಲ್ಲದೇ ಯೋಜನೆ ಜಾರಿ ಮಾಡಿ ಎಂದು ಹೋರಾಟ ಮಾಡಿದರು. ಗೃಹ ಜ್ಯೋತಿಯಡಿ ಎಲ್ಲರಿಗೂ 200 ಯೂನಿಟ್ ಕೊಡಿ ಎನ್ನುವುದು ಅವಿವೇಕದ ತರ್ಕ . ಬಿಜೆಪಿಯವರು 7 ಜಿಲ್ಲೆಗಳಲ್ಲಿ ಮತಗಳನ್ನೇ ಪಡೆದಿಲ್ಲ. ಬಿಜೆಪಿ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ನಾವು ಹೇಳುವುದಿಲ್ಲ. ಬಿಜೆಪಿಯವರು ಎಂದಿಗೂ ಅಧಿಕಾರಕ್ಕೆ ಬರಬಾರದು . ರಾಜ್ಯ ಅಭಿವೃದ್ಧಿ ಆಗಲ್ಲ. ಜನಪರ ಕೆಲಸಗಳು ಆಗಲ್ಲ. ದಲಿತರಿಗೆ , ಬಡವರಿಗೆ , ರೈತರಿಗೆ ನ್ಯಾಯ ಸಿಗುವುದಿಲ್ಲ. ಬಿಜೆಪಿಯವರು ವಿರೋಧಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಮಾತನಾಡುತ್ತೇನೆ. ನಮ್ಮ ಸರ್ಕಾರದಿಂದ ರಾಜ್ಯದ ಜನತೆ ಸಂತುಷ್ಟರಾಗಿದ್ದಾರೆ ಎಂದರು.

*ಶಕ್ತಿ ಯೋಜನೆ – ಕೆಎಸ್ ಆರ್ ಟಿಸಿ ಸುಧಾರಣೆ :*

ಕರ್ನಾಟಕ ರಾಜ್ಯದಲ್ಲಿ 7 ಕೋಟಿ ಜನರಲ್ಲಿ ಶೇ. 50 ರಷ್ಟು ಮಹಿಳೆಯರಿದ್ದಾರೆ.2011ರ ಜನಗಣತಿಯ ಪ್ರಕಾರ ಮಹಿಳೆಯರು ಕಡಿಮೆ ಇದ್ದರು. ಆದರೆ ಈಗ ಕೆಲ ವರದಿಗಳ ಪ್ರಕಾರ ಅಸಮಾನತೆ ಕಡಿಮೆಯಾಗುತ್ತಿದೆ. ಎಲ್ಲ ಮಹಿಳೆಯರೂ ಖುಷಿಯಾಗಿದ್ದಾರೆ. ಇದುವರೆಗೆ ಶಕ್ತಿ ಯೋಜನೆಯ ಮೂಲಕ 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಪುರುಷರಿಗೆ ತೊಂದರೆಯಾಗುತ್ತಿದೆ ಎಂದು ಟೀಕಿಸಿದರು .13 ಸಾವಿರ ಜನ ಕಂಡಕ್ಟರ್ , ಸಾರಿಗೆ ಸಿಬ್ಬಂದಿ ನೇಮಕ ಹಾಗೂ 4000 ಬಸ್ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಅವರು ಪ್ರಯಾಣಿಸಿದಾಗ , ಪ್ರವಾಸೋದ್ಯಮ , ಉದ್ಯೋಗ ಹೆಚ್ಚಾಗುತ್ತಿದೆ. ಒಂದು ದಿನಕ್ಕೆ 49.6 ಲಕ್ಷ ಪ್ರಯಾಣಿಸುತ್ತಿದ್ದಾರೆ. 28 ಕೋಟಿ 94 ಲಕ್ಷ , 4.72 ಕೋಟಿ ರೂ. ದಿನಕ್ಕೆ ಆದಾಯ ಜಾಸ್ತಿಯಾಗಿದೆ. ಮಹಿಳೆಯರೂ ಆರ್ಥಿಕ ಚಟುವಟಿಕೆಯಲ್ಲಿ ಭಾಗವಾಗಬೇಕು. ಯಾರ ಕೈಯಲ್ಲಿ ದುಡ್ಡಿಲ್ಲವೋ, ಅಂತಹವರ ಕೈಗೆ ದುಡ್ಡು ಸಿಗಬೇಕು. ಮಹಿಳೆಯರು ಸಾವಿರಾರು ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಮಹಿಳೆಯರಿಗೆ, ದಲಿತರಿಗೆ, ಬಡವರಿಗೆ ಆರ್ಥಿಕ ಸಬಲತೆ ತರುವ ಉದ್ದೇಶಿಂದ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ ಬಹಳ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಈಗಾಗಲೇ 3 ಗ್ಯಾರೆಂಟಿ ಜಾರಿಯಲ್ಲಿವೆ. ಇದಕ್ಕೆ 4000 ಕೋಟಿ ಶಕ್ತಿ ಯೋಜನೆಗೆ ಖರ್ಚಾಗುತ್ತಿವೆ. ಈ ವರ್ಷ ಉಳಿದ ಅವಧಿಗೆ 2,800 ರಿಂದ 3000 ಕೋಟಿ ವೆಚ್ಚವಾಗಲಿದೆ. ಕೆಎಸ್ ಆರ್ ಟಿಸಿ ಯೂ ಕೂಡ ಸುಧಾರಿಸುತ್ತಿದೆ ಎಂದರು.

*ಗೃಹ ಜ್ಯೋತಿ*: ಜುಲೈ 1 ರಿಂದ ಜಾರಿಗೆ ಬರುತ್ತದೆ ಇದರಲ್ಲಿಯೂ ಹುಳುಕನ್ನು ಹುಡುಕುತ್ತಿದ್ದಾರೆ. ಸರಾಸರಿ ವಿದ್ಯುತ್ ವೆಚ್ಚ ಉಳಿತಾಯವಾದರೆ , ಆ ಹಣ ಜನರಿಗೆ ಉಳಿತಾಯವಾಗುತ್ತಿದೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳಿಗೆ ಎಸ್ ಸಿ ಎಸ್ ಟಿ ಗಳಿಗೆ 75 ಯೂನಿಟ್ ಬಳಸುತ್ತಾರೆ. ಅದರ ಸರಾಸರಿ ಮೇಲೆ ಶೇ. 10 ಸೇರಿಸಿ , ವಿದ್ಯುತ್ ಉಚಿತವಾಗುತ್ತದೆ ಎಂದು ವಿವರಿಸಿದರು.

*ಗೃಹಲಕ್ಷ್ಮಿ* – *ದೇಶದಲ್ಲೇ ಮಹಿಳಾ ಸಬಲೀಕರಣದ ಪ್ರಪ್ರಥಮ ಯೋಜನೆ :*

ಈ ಯೋಜನೆಗೆ ವರ್ಷಕ್ಕೆ 30 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಆಗಸ್ಟ್ 16 ರಿಂದ ಮನೆಯ ಯಜಮಾನಿ ಖಾತೆಗೆ 2000 ರೂ. ನೀಡಲಾಗುವುದು . ಈ ವರ್ಷದ ಉಳಿದ ಅವಧಿಗೆ 17 ರಿಂದ 18 ಸಾವಿರ ಕೋಟಿ ಮೀಸಲಿಟ್ಟಿದೆ. ಇದರಲ್ಲಿಯೂ ಅತ್ತೆಗೋ , ಸೊಸೆಗೋ ಎಂದು ವ್ಯಂಗ್ಯವಾಡಿದರು. 1 ಕೋಟಿ 30 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ. ಇದು ದೇಶದಲ್ಲಿ ಇಂತಹುದು ಪ್ರಪ್ರಥಮ ಯೋಜನೆಯಾಗಿದೆ. ಗ್ಯಾಸ್ ಬೆಲೆ, ತೊಗರಿಬೇಳೆ, ಪೆಟ್ರೋಲ್, ಡೀಸೆಲ್, ಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ದುಡ್ಡು ನೀಡುತ್ತಿರುವುದು ಒಳ್ಳೆಯ ಕಾರ್ಯಕ್ರಮವಲ್ಲವೇ ? . ಇದನ್ನೇ Universal Basic income ಎನ್ನುವುದು. ಇಷ್ಟರಮಟ್ಟಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಈ ಯೋಜನೆಯ ಹಿಂದಿನ ಸರ್ಕಾರದ ಉದ್ದೇಶವೇನು ಎಂದು ತಿಳಿಯಬೇಕು ಎಂದರು.

*ಅನ್ನಭಾಗ್ಯ* – *ಅನ್ನಕ್ಕಾಗಿ ಯಾರೊಬ್ಬರ ಮುಂದೂ ಕೈಚಾಚಬಾರದು*

ಜುಲೈ 1 ರಿಂದ ಪ್ರಾರಂಭ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಯಿತು. ಒಂದು ತಿಂಗಳಿಗೆ 2,29,000 ಮೆ.ಟನ್ ಅಕ್ಕಿ ಬೇಕು. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯ ಜೊತೆ ರಾಜ್ಯ 5 ಕೆಜಿ ಅಕ್ಕಿ ನೀಡುತ್ತೇವೆ ಎಂದೆವು. 1-4-2017 ರಿಂದ ನಾವು 7 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದೆವು. ಆದರೆ ನಂತರ ಬಿಜೆಪಿಯವರು ಅದನ್ನು 5 ಕೆಜಿಗೆ ಇಳಿಸಿದರು. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ನೀಡುವ ಕಾರ್ಯಕ್ರಮವನ್ನು ನಾನು 2013ರಲ್ಲಿ ಪ್ರಾರಂಭಿಸಿದೆ. . ಆದರೆ ನೆಹರೂ ಅವರ ಕಾಲದಲ್ಲಿ ಪಡಿತರ ವ್ಯವಸ್ಥೆ ಜಾರಿಯಾಯಿತು. ಒಂದು ಕೆಜಿಗೆ 1 ರೂ. ನಲ್ಲಿ ನೀಡುವ ತೀರ್ಮಾನವನ್ನು ಕೈಗೊಂಡೆವು. ಆಹಾರ ಭದ್ರತೆ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಹಿಂದಿನ ಕಾಲದಲ್ಲಿ , ಹಬ್ಬ ಹರಿದಿನಗಳಲ್ಲಿ ಅಥವಾ ಆರೋಗ್ಯ ಹದಗೆಟ್ಟಾಗ ಮಾತ್ರ ಅನ್ನ ಮಾಡುತ್ತಿದ್ದರು. ಇದನ್ನು ಕಣ್ಣಾರೆ ಕಂಡವನು ನಾನು. ಆದ್ದರಿಂದ ಮುಖ್ಯಮಂತ್ರಿಯಾದ ತಕ್ಷಣ , ಅನ್ನಕ್ಕಾಗಿ ಒಬ್ಬರು ಮತ್ತೊಬ್ಬರ ಮನೆಗೆ ಹೋಗಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ. ಎಫ್ ಸಿ ಐ ನಲ್ಲಿ 400 ಲಕ್ಷ ಮೆ.ಟನ್ ಕ್ಕೂ ಹೆಚ್ಚು ದಾಸ್ತನು ಇದೆ. ಎಫ್ ಸಿ ಐ ಡೆಪ್ಯೂ ಟಿ ಮ್ಯಾನೇಜರ್ ಜೊತೆಗೆ ಮಾತನಾಡಿದ್ದಾಗ, 7 ಲಕ್ಷ ಮೆ.ಟನ್ ದಾಸ್ತಾನು ಇರುವುದಾಗಿ ಒಪ್ಪಿಕೊಂಡಿದ್ದರು. ನಂತರ ಆಗಲ್ಲ ಎಂದರು. ಬಿಜೆಪಿಯವರು ಬಡವರ ಪರ ಇರುವವರೇ ? ಅಕ್ಕಿ , ಗೋಧಿ , ಹಾಲು ಇತ್ಯಾದಿಗಳ ಮೇಲೆ ಜಿಎಸ್ ಟಿ ಹಾಕಿದವರು ಮೋದಿ . 34 ರೂ. ಕೆಜಿ ಅಕ್ಕಿಗೆ ನೀಡುತ್ತೇವೆ ಎಂದರೂ , ದಾಸ್ತಾನು ಇದ್ದರೂ ಕೇಂದ್ರ ಅಕ್ಕಿ ನೀಡಲು ಒಪ್ಪಲಿಲ್ಲ. ಈಶಾನ್ಯ ರಾಜ್ಯಗಳಿಗೆ ಅಕ್ಕಿ ನೀಡುತ್ತಿದ್ದಾರೆ. ರಾಜ್ಯಕ್ಕೆ ಅಕ್ಕಿ ಇಲ್ಲವೆಂದ ಕೇಂದ್ರ ಸರ್ಕಾರ, ಎಥನಾಲ್ ತಯಾರಿಕೆಗೆ 29.5 ಮೆ.ಟನ್ ಅಕ್ಕಿ ನೀಡಿದ್ದಾರೆ. ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಎಫ್ ಸಿ ಐ , ಇ – ಹರಾಜಿನಲ್ಲಿ ಅಕ್ಕಿ ತೆಗೆದುಕೊಳ್ಳಲು ಯಾರೂ ಮುಂದೆ ಬಂದಿಲ್ಲ ಎಂದಿದ್ದಾರೆ. ಒಂದು ಕ್ವಿಂಟಾಲ್ ಗೆ 3400 ರೂ. ನೀಡುತ್ತೇವೆಂದರೂ , ಕೇಂದ್ರ ಒಪ್ಪಲಿಲ್ಲ. ಆದ್ದರಿಂದ 5 ಕೆಜಿ ಬದಲು ಒಟ್ಟು 170 ರೂ. ಪ್ರತಿ ಫಲಾನುಭಾವಿಯ ಖಾತೆಗೆ ನೀಡಲಾಗಿದೆ ಎಂದರು.

*ಯುವನಿಧಿ :* 2022-23 ರಲ್ಲಿ ಪಾಸಾಗಿರುವವರು 6 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಅಂತಹವರಿಗೆ ಮುಂದಿನ 24 ತಿಂಗಳು ಯುವನಿಧಿ ನೀಡಲಾಗುವುದು. ಈ ಮಧ್ಯೆ ಅವರಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಯುವಕರಿಗೆ ತಮಗೆ ಕೆಲಸ ಸಿಕ್ಕಿದ ತಕ್ಷಣ ಯುವನಿಧಿ ನಿಲ್ಲಿಸಲಾಗುತ್ತದೆ . ಈ ರೀತಿ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಲಿದೆ ಎಂದರು.

*ಜನರು ಆತಂಕದಿಂದ ಬದುಕಬೇಕಿಲ್ಲ :*
ವಿದ್ಯಾಸಿರಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ಈಗ ಮತ್ತೆ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಹೆಚ್ಚು ಒಣಭೂಮಿ ಇದ್ದಿದ್ದರಿಂದ ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆ ಈಗ ಮತ್ತೆ ಪ್ರಾರಂಭಿಸಲಾಗಿದೆ. ಜಿಎಸ್ ಟಿ ತೆರಿಗೆ ಸಂಗ್ರಹ , ಅಬಕಾರಿ ಸುಂಕ ಹೆಚ್ಚಳ , ಮೋಟಾರ್ ವೆಹಿಕಲ್ ತೆರಿಗೆ , ಮುದ್ರಾಂಕ ಶುಲ್ಕ ಗಳನ್ನು ಹೆಚ್ಚಿಸಿ 13500 ಕೋಟಿ ಹೆಚ್ಚು ಸಂಗ್ರಹ ಮಾಡಲಾಗುತ್ತಿದೆ. 8000 ಕೋಟಿ ಸಾಲ ಪಡೆಯುತ್ತಿದ್ದೆವೆ. ನುಡಿದಂತೆ ನಡೆಯುತ್ತಿದ್ದೇವೆ. ನಾವು ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ ಶೇ. 10 ರಷ್ಟೂ ಈಡೇರಿಸಿಲ್ಲ. ರೈತ ಸಾಲ ಮನ್ನಾ ಎಂದರು. ಆದರೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುದಾನ ನಿಗದಿಪಡಿಸಲಾಗಿದೆ. ಅನುಷ್ಠಾನ ಮಾಡುತ್ತಿದ್ದೇವೆ. 35,410 ಕೋಟಿ ಈ ವರ್ಷ ಉಳಿದ ಅವಧಿಗೆ ಬೇಕಾಗುತ್ತಿದ್ದು , ಅನುದಾನ ನಿಗದಿಪಡಿಸಲಾಗಿದೆ. ಎಲ್ಲ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು , ಜಾರಿ ಮಾಡಿಯೇ ಮಾಡುತ್ತೇವೆ. ಜನರು ಯಾರೂ ಆತಂಕದಿಂದ ಬದುಕುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಊಟ , ಕಾನೂನು ರಕ್ಷಣೆ , ಕೈಗೆ ಹಣ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

*ಶಕ್ತಿ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೆಚ್ಚುಗೆ :*

ಧರ್ಮಸ್ಥಳದ ಧರ್ಮಾಧಿಕಾರಿಯವರು ಪತ್ರ ಮುಖೇನ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಅಲ್ಲಿಗೆ ಬಂದು ಮುಖ್ಯಮಂತ್ರಿಗಳ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದದಾರೆ . ಮಹಿಳಾ ಮೀಸಲಾತಿ ಹೆಚ್ಚಿಸಿದವರು ಕಾಂಗ್ರೆಸ್ ನವರು. ಈಗ ಮಹಿಳಾ ಮೀಸಲಾತಿ ಮಸೂದೆ ಕೇಂದ್ರ ಸರ್ಕಾರದಲ್ಲಿದ್ದು, ಬಿಜೆಪಿಯವರು ಅದನ್ನು ಮಾಡಿಸಲಿ ಎಂದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eighteen + 2 =