ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದಿಂದ ಚಾರಿತ್ರ‍್ಯ ನಿರ್ಮಾಣ, ಚಾರಿತ್ರ‍್ಯ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ-ಸರಸ್ವತಿ ಸ್ವಾಮೀಜಿ!!
ಗೋಕಾಕ: ಸಮರ್ಥ ಭಾರತ ನಿರ್ಮಾಣ ಮಾಡಲು ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ವಿಜಯಪುರ–ಗದಗ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗುರುವಾದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದಿಂದ ಚಾರಿತ್ರ‍್ಯ ನಿರ್ಮಾಣ, ಚಾರಿತ್ರ‍್ಯ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಮಕ್ಕಳಿಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯ, ಆ ದಿಸೆಯಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು . ಉನ್ನತ ಉದಾತ್ತ ಚಿಂತನೆಗಳು ಶಿಕ್ಷಕರ ಜೊತೆಗೆ ಮಕ್ಕಳ ಮನಸ್ಸನ್ನು ವಿಕಾಸಗೊಳಿಸುತ್ತವೆ ಎಂದರು. ಇಂತಹ ತರಬೇತಿ ಶಿಬಿರಗಳು ಶಿಕ್ಷಕರ ಮಾನಸಿಕ-ದೈಹಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕವಾದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಯಾಗುತ್ತಿವೆ. ಶಿಕ್ಷಕರು ಶಿಬಿರದಲ್ಲಿ ತಿಳಿದುಕೊಂಡಿರುವ ಎಲ್ಲ ನೀತಿ ಬೋಧನೆಗಳನ್ನು ಹಾಗೂ ಅಭ್ಯಾಸಗಳನ್ನು ಪ್ರತಿದಿನ ಮುಂದುವರಿಸಿ ಇದನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು, ಅನುಷ್ಠಾನ ಮಾಡಿಕೊಂಡು ಮಕ್ಕಳ ಬೆಳವಣಿಗೆಯ ಕಡೆ ಲಕ್ಷ್ಯಕೊಟ್ಟು ಪಾಠಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಸಂತೋಷ ತಡಸಲ ಮತ್ತು ಅಪ್ಪಾಸಾಹೇಬ ಗಿರಿಣ್ಣನವರ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ ನಾಡಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಈಟಿ, ಬಾಬು ಶೆಟ್ಟಿ, ಪ್ರಮೋದ ಗುಲ್ಲ, ಶ್ರೀಮತಿ ಆರತಿ ನಾಡಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.