ಭಾರೀ ಪ್ರಮಾಣದಲ್ಲಿ ಹಣ ವಶ
ಯುವ ಭಾರತ ಸುದ್ದಿ ಬೆಂಗಳೂರು:
ಮಾರ್ಚ್ 29 ರಂದು ಜಾರಿಯಾದ ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ 147.46 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಶೇ 100 ರಷ್ಟು ಹೆಚ್ಚು.
ರಾಜ್ಯದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಿರ, ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯಾಚರಣೆ ಮಾಡಿದ್ದು ಒಟ್ಟು 375.60 ಕೋಟಿ ಮೌಲ್ಯದ ನಗದು, ಮದ್ಯ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿವೆ. 2018ರಲ್ಲಿ ಇದರ ಪ್ರಮಾಣ 185.74 ಕೋಟಿ ಇತ್ತು.
ಸುಮಾರು 100 ಕೋಟಿ ಮೌಲ್ಯದ ಚಿನ್ನ- ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, 24.22 ಕೋಟಿ ಮೌಲ್ಯದಷ್ಟು ಮತದಾರರಿಗೆ ವಿತರಿಸಲು ಸೀರೆ, ಕುಕ್ಕರ್-ಇನ್ನಿತರ ವಸ್ತುಗಳನ್ನು ಜಪ್ತಿಮಾಡಲಾಗಿದೆ.
ಮದ್ಯ ಜಪ್ತಿ ಪ್ರಮಾಣ ಶೇ. 230 ಏರಿಕೆ
2018ಕ್ಕೆ ಹೋಲಿಕೆ ಮಾಡಿದರೆ ಮದ್ಯ ಜಪ್ತಿ ಪ್ರಮಾಣ ಶೇ 230ರಷ್ಟು ಏರಿಕೆಯಾಗಿದ್ದು, 83.66 ಕೋಟಿ ಮೌಲ್ಯದ 22.7 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 2018ರಲ್ಲಿ 5.42 ಲಕ್ಷ ಲೀಟರ್‌ನಷ್ಟು ಮದ್ಯ ಪಶಪಡಿಸಿಕೊಳ್ಳಲಾಗಿತ್ತು.
1,954 ಕೆಜಿ ಡ್ರಗ್ಸ್ ವಶ
ಈ ಬಾರಿ ಡ್ರಗ್ಸ್- ಮಾದಕವಸ್ತು ಜಪ್ತಿ ಕೂಡ ಗಣನೀಯ ಏರಿಕೆ ಕಂಡಿದೆ. ಸುಮಾರು 23.67 ಕೋಟಿ ಮೌಲ್ಯದ 1,954 ಕೆಜಿ ಡ್ರಗ್ಸ್- ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2018 ರಲ್ಲಿ 40 ಲಕ್ಷ ಮೌಲ್ಯದ 127 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.