Breaking News

ಬಹಿರಂಗ ಪ್ರಚಾರ ಮಾಡಿದರೆ ಕ್ರಮ ದಾಖಲು

Spread the love

ಬಹಿರಂಗ ಪ್ರಚಾರ ಮಾಡಿದರೆ ಕ್ರಮ ದಾಖಲು

ಯುವ ಭಾರತ ಸುದ್ದಿ ಬೆಳಗಾವಿ :
ವಿಧಾನಸಭಾ ಚುನಾವಣಾ ಅಂಗವಾಗಿ ಮೇ 10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಶಾಂತಿಯುತ ಹಾಗೂ ಸುಗಮ ಮತದಾನ ಪ್ರಕ್ರಿಯೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲ ತಿಳಿಸಿದರು.

ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಆವರಣದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಒಟ್ಟಾರೆ 187 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 174 ಪುರುಷರು ಹಾಗೂ 13 ಮಹಿಳೆಯರಿದ್ದಾರೆ.
ಒಟ್ಟು 360 ಜನರು ನಾಮಪತ್ರ ಸಲ್ಲಿಸಿದ್ದು, 25 ನಾಮಪತ್ರಗಳು ತಿರಸ್ಕೃತಗೊಂಡಿರುತ್ತವೆ. 47 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದುಕೊಂಡಿರುತ್ತಾರೆ.

ಜಿಲ್ಲೆಯಲ್ಲಿ 39.47 ಲಕ್ಷ ಮತದಾರರು:

ಜಿಲ್ಲೆಯಲ್ಲಿ ಒಟ್ಟಾರೆ 39,47,150 ಮತದಾರರಿದ್ದು, 20,424 ಸೇವಾ ಮತದಾರರು ಸೇರಿದಂತೆ ಒಟ್ಟು 39,67,574 ಜನರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

18 ರಿಂದ 19 ವಯೋಮಾನದ 94,652 ಯುವ ಮತದಾರರಿದ್ದಾರೆ.
42, 761 ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟಿರುವ 1,00,095 ಹಾಗೂ 151 ಇತರೆ ಮತದಾರರಿದ್ದಾರೆ.

ಜಿಲ್ಲೆಯಲ್ಲಿ 4439 ಮತಗಟ್ಟೆಗಳು:
ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಲ್ಲಿ 4434 ಮತಗಟ್ಟೆಗಳು ಮತ್ತು 5 ಹೆಚ್ಚುವರಿ(ಆಕ್ಜಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 4439 ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿ ಮಾಹಿತಿಯನ್ನು ನೀಡಿದರು.

ರಾಜ್ಯದಲ್ಲಿಯೇ ಬೆಳಗಾವಿಯಲ್ಲಿ ಅತೀ ಹೆಚ್ಚು ಜನರು ಮನೆಯಿಂದ ಮತದಾನ ಮಾಡಿರುತ್ತಾರೆ.
300 ಕ್ರಿಟಿಕಲ್ ‌ಬೂತ್, 701 ವಲ್ನರೇಬಲ್ ಹಾಗೂ ಕ್ರಿಟಿಕಲ್ ‌ಮತಗಟ್ಟೆ

ಭದ್ರತೆಗೆ ಒಟ್ಟು 10,913 ಪೋಲಿಸ್ ಅಧಿಕಾರಿ/ ಸಿಬ್ಬಂದಿಯನ್ನು ಮತ್ತು 21,600 ಜನ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ.
ಮತ ಎಣಿಕೆ‌ ಮೇ 13 ರಂದು ಬೆಳಗಾವಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.

26.18 ಕೋಟಿ ಮೊತ್ತದ ವಸ್ತು ವಶ:

ಜಿಲ್ಲೆಯಲ್ಲಿ ಒಟ್ಟಾರೆ 26.18 ಕೋಟಿ ನಗದು, ಮದ್ಯ, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ.
ಮಾದರಿ ನೀತಿ ಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟಾರೆ 69 ಎಫ್.ಐ.ಆರ್. ದಾಖಲಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಹಿರಂಗ ಪ್ರಚಾರ ಅಂತ್ಯ:
ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರಕ್ಕೆ ಅವಕಾಶವಿರುತ್ತದೆ.

ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಊರುಗಳಿಗೆ ತೆರಳಬೇಕು. ಚುನಾವಣಾ ಪ್ರಚಾರಕ್ಕೆ ಬೇರೆ ಕಡೆಯಿಂದ ಆಗಮಿಸಿರುವ ಯಾವುದೇ ವ್ಯಕ್ತಿಯು ಕ್ಷೇತ್ರದಲ್ಲಿ ಇರಕೂಡದು ಎಂದು ತಿಳಿಸಿದರು.
ಮತದಾನ ದಿನದಂದು ರಾಜಕೀಯ ಪಕ್ಷಗಳಿಗೆ ಪ್ರತಿ ಮತಗಟ್ಟೆಯ 200 ಮೀಟರ್ ಹೊರಗಡೆ ಒಂದು ಟೇಬಲ್ ಮತ್ತು ಕುರ್ಚಿ ಹಾಕಲು ಮಾತ್ರ ಅವಕಾಶ ಕಲ್ಪಿಸಲಾಗುವುದು.

ಮತಗಟ್ಟೆ ಸಿಬ್ಬಂದಿ ಮೇ 9 ರಂದು ಮಸ್ಟರಿಂಗ್ ಸ್ಥಳದಿಂದ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ತೆರಳಲಿದ್ದಾರೆ.
ಶಾಂತಿಯುತ, ಸುಗಮ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು.
ಯಾವುದೇ ಆತಂಕ, ಭಯವಿಲ್ಲದೇ ಆಮಿಷಕ್ಕೆ ಒಳಗಾಗದೇ ಮುಕ್ತವಾಗಿ ಹಾಗೂ ನಿರ್ಭಿತಿಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಮುಕ್ತ ನ್ಯಾಯಸಮ್ಮತ ಚುನಾವಣೆಗೆ; ಬಿಗಿಭದ್ರತೆ:
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.

ಕೇಂದ್ರ ಮೀಸಲು ಪಡೆ, ಪೊಲೀಸ್ ಮೀಸಲು ಪಡೆ, ಗೃಹರಕ್ಷಕ ದಳ ಹಾಗೂ ನಾಗರಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ.

4803 ನಾಗರಿಕ ಪೊಲೀಸ್, 1354 ಗೃಹರಕ್ಷಕ ದಳ ಸಿಬ್ಬಂದಿ, 19 ಕೆ.ಎಸ್.ಆರ್.ಪಿ. ತುಕಡಿ, 249 ಸಶಸ್ತ್ರ ಮೀಸಲು ಪಡೆ ಹಾಗೂ 53 ಕೇಂದ್ರೀಯ ಸಶಸ್ತ್ರ ಕಂಪೆನಿಗಳನ್ನು ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಇಬ್ಬರು ಪೊಲೀಸ್ ವೀಕ್ಷಕರ ಮಾರ್ಗದರ್ಶನದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಾ.ಬೋರಲಿಂಗಯ್ಯ ತಿಳಿಸಿದರು.

ನೆರೆಯ ರಾಜ್ಯಗಳೊಡನೆ ಸಮನ್ವಯತೆ:
9 ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಗೋವಾ, ಮಹಾರಾಷ್ಟ್ರದಿಂದ ಗೃಹರಕ್ಷಕ ಸಿಬ್ಬಂದಿ ಆಗಮಿಸಿರುತ್ತಾರೆ. ಎಲ್ಲರನ್ನೂ ಬಳಸಿಕೊಂಡು ಭಯಮುಕ್ತ ಮತದಾನದ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಲಾಗಿರುತ್ತದೆ. ಕೊನೆಯ ಗಳಿಗೆಯಲ್ಲಿ ನಡೆಯುವ ಅಕ್ರಮ ತಡೆಗಟ್ಟಲು ಜಂಟಿ ಚೆಕ್ ಪೋಸ್ಟ್ ಗಳನ್ನು ಕೂಡ ಸ್ಥಾಪಿಸಲಾಗಿದೆ ಎಂದರು.

ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಗಟ್ಟಲು ಮತ್ತು ಭಯಮುಕ್ತ ವಾತಾವರಣ ಸೃಷ್ಟಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಆಮಿಷಕ್ಕೆ ಬಲಿಯಾಗದೇ ಮತದಾನ ಮಾಡಬೇಕು ಎಂದು ಡಾ.ಸಂಜೀವ ಪಾಟೀಲ ಮನವಿ ಮಾಡಿಕೊಂಡರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು, ಮತದಾನ ಪ್ರಮಾಣ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಇದಾದ ಬಳಿಕ ಮತ ಎಣಿಕೆ ಕೊಠಡಿ ಹಾಗೂ ಸ್ಟ್ರಾಂಗ್ ರೂಮ್ ಗಳಿಗೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಹಿರಂಗ ಪ್ರಚಾರ ಅಂತ್ಯ: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ

ಬೆಳಗಾವಿ :
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ‌ ಪ್ರಚಾರ ಸೋಮವಾರ ಸಂಜೆ‌ 6 ಗಂಟೆಗೆ ಅಂತ್ಯಗೊಂಡಿರುತ್ತದೆ‌‌. ಯಾವುದೇ ರೀತಿಯ ಚುನಾವಣಾ ಬಹಿರಂಗ ಸಭೆ-ಸಮಾರಂಭಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಚುನಾವಣಾ ಆಯೋಗದ‌ ಮಾರ್ಗಸೂಚಿ ಪ್ರಕಾರ ಮತದಾನ ಅಂತ್ಯಗೊಳ್ಳಲಿರುವ ಅವಧಿಗಿಂತ 48 ಗಂಟೆಗಳ ಮುಂಚಿನ ಅವಧಿಯಲ್ಲಿ ಬಹಿರಂಗ ಪ್ರಚಾರಕ್ಕೆ ನಿರ್ಬಂಧನೆ ಇರುತ್ತದೆ.

ಆದರೆ ಅಭ್ಯರ್ಥಿಗಳು ‌ಮನೆ‌ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿರುತ್ತದೆ.
ಸಂಜೆ‌ 6 ಗಂಟೆಯ‌ ಬಳಿಕ ಬಹಿರಂಗ ಪ್ರಚಾರ ಕಂಡುಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಚಾರ ವಾಹನಗಳ ಬಳಕೆಗೆ‌ ಅವಕಾಶ ಇರುವುದಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲಿ ಬಹಿರಂಗ ಪ್ರಚಾರ ಕಂಡುಬಂದರೆ ಕೂಡಲೇ ಪ್ರಕರಣಗಳನ್ನು ದಾಖಲಿಸಬೇಕು ಎಂದು ಹದಿನೆಂಟು ಮತಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

ಎಫ್.ಎಸ್‌‌.ಟಿ. ಸೇರಿದಂತೆ ಎಲ್ಲ ವಿಚಕ್ಷಣಾ ತಂಡಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twenty + 19 =