Breaking News

ಬೆಳಗಾವಿ ಮೂಲದವರು ಭೀಕರ ರಸ್ತೆ ಅಪಘಾತಕ್ಕೆ ಬಲಿ : ಬಾಲಕ ಸೇರಿ ಐವರು ಸ್ಥಳದಲ್ಲೇ ಸಾವು

Spread the love

ಬೆಳಗಾವಿ ಮೂಲದವರು ಭೀಕರ ರಸ್ತೆ ಅಪಘಾತಕ್ಕೆ ಬಲಿ : ಬಾಲಕ ಸೇರಿ ಐವರು ಸ್ಥಳದಲ್ಲೇ ಸಾವು

ಯುವ ಭಾರತ ಸುದ್ದಿ ಬೆಳಗಾವಿ/ಧಾರವಾಡ:
ಕಾರು- ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರ್‌ನಲ್ಲಿದ್ದ ನಾಲ್ವರು ಹಾಗೂ ಓರ್ವ ಪಾದಚಾರಿ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಮಂಜುನಾಥ ಮುದ್ದೋಜಿ ಇತ್ತೀಚೆಗೆ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ಅವರು ಹೈದ್ರಾಬಾದ್‌ಗೆ ತರಬೇತಿ ಕೇಂದ್ರಕ್ಕೆ ಹೋಗಬೇಕಿತ್ತು. ಹೀಗಾಗಿ ಸೈನ್ಯ ಸೇರಲು ಹೊರಟಿದ್ದ ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬರಲು ಸ್ನೇಹಿತರು ಹಾಗೂ ಸಂಬಂಧಿಕರು ಕಾರಿನಲ್ಲಿ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಇವರು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದವರು ಎನ್ನಲಾಗಿದ್ದು, ಮೃತರನ್ನು ನಾಗಪ್ಪ ಈರಪ್ಪ ಮುದ್ದೋಜಿ (29), ಮಹಾಂತೇಶ ಬಸಪ್ಪ ಮುದ್ದೋಜಿ (40), ನಿಚ್ಚಣಕಿ ಗ್ರಾಮದ ಬಸವರಾಜ ಶಿವಪುತ್ರಪ್ಪ ನರಗುಂದ (35), ಶ್ರೀಕುಮಾರ ನರಗುಂದ (5) ಹಾಗೂ ಪಾದಚಾರಿ ಈರಣ್ಣ ರಾಮನಗೌಡರ (35) ಎಂದು ಹೇಳಲಾಗಿದೆ.
ಕಾರಿನಲ್ಲಿದ್ದ ಮಡಿವಾಳಪ್ಪ ರಾಜು ಅಳ್ನಾವರ (22), ಶ್ರವಣಕುಮಾರ ಬಸವರಾಜ ನರಗುಂದ (7) ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಾಗೂ ಪ್ರಕಾಶಗೌಡ ಶಂಕರಗೌಡ ಪಾಟೀಲ (22), ಮಂಜುನಾಥ ಮುದ್ದೋಜಿ (22) ಎಂಬವರನ್ನು ಧಾರವಾಡ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ.
ತೇಗೂರು ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿ ಏಕಾಏಕಿ ಅಡ್ಡಬಂದಿದ್ದರಿಂದ ತಪ್ಪಿಸಲು ಹೋಗಿ ಕಾರು ರಸ್ತೆ ಪಕ್ಕ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಗುದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.


Spread the love

About Yuva Bharatha

Leave a Reply

Your email address will not be published. Required fields are marked *

8 − seven =