Breaking News

ಗೋಕಾಕ ಕಾಂಗ್ರೆಸಿನಲ್ಲಿ ಅಲ್ಲೋಲ ಕಲ್ಲೋಲ !

Spread the love

ಗೋಕಾಕ ಕಾಂಗ್ರೆಸಿನಲ್ಲಿ ಅಲ್ಲೋಲ ಕಲ್ಲೋಲ !

ಸತೀಶ ಮನ್ನಿಕೇರಿ,  ಗೋಕಾಕ :
ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ಅವರಿಗೆ ಇದರಿಂದ ರಾಜಕೀಯವಾಗಿ ಬಹುದೊಡ್ಡ ಹಿನ್ನಡೆಯಾಗಿದೆ. ಅವರ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ದೊಡ್ಡ ಶಾಕ್ ನೀಡಿದ್ದು ಅದನ್ನು ಅರಗಿಸಿಕೊಳ್ಳಲು ಆಗದಂಥ ಸನ್ನಿವೇಶವನ್ನು ನಿರ್ಮಾಣ ಮಾಡಿದೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರದಿಂದ ಅಶೋಕ ಪೂಜಾರಿ ಅವರ ಮುಂದಿನ ರಾಜಕೀಯ ಭವಿಷ್ಯ ಮುಸುಗಾಗಿದೆ. ಅವರು ಕಾಂಗ್ರೆಸ್ ಪಕ್ಷದಲ್ಲೇ ಉಳಿಯುತ್ತಾರೋ ಅಥವಾ ತಮ್ಮ ಹಳೆಯ ಪಕ್ಷವಾಗಿರುವ ಜಾತ್ಯತೀತ ಜನತಾದಳ ಸೇರ್ಪಡೆಯಾಗುತ್ತಾರೋ ಎಂಬ ಚರ್ಚೆ ಈಗ ಗೋಕಾಕ ಮತಕ್ಷೇತ್ರದಲ್ಲಿ ಜೋರಾಗಿ ನಡೆದಿದೆ.

ಅಶೋಕ ಪೂಜಾರಿ ಅವರು ಶಾಸಕರಾಗಬೇಕು ಎಂಬ ಕನಸು ಕಂಡು ಕಾಲ ಕಾಲಕ್ಕೆ ವಿವಿಧ ಪಕ್ಷಗಳನ್ನು ಬದಲಾಯಿಸಿದ್ದರು. ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಲ್ಲಿ ಮೊದಲಿಗೆ ಗುರುತಿಸಿಕೊಂಡು ಆ ಪಕ್ಷದಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಈ ನಡುವೆ ಅವರು ಜೆಡಿಎಸ್ ನಲ್ಲಿದ್ದೆ ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ನೆಲೆ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಿ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದರು. ಆದರೆ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರ್ಪಡೆಗೊಂಡ ನಂತರ ಅವರು ಮತ್ತೆ ಪಕ್ಷ ಬದಲಾವಣೆ ಮಾಡಿದರು. ಕಾಂಗ್ರೆಸ್ ಸೇರ್ಪಡೆಗೊಂಡು ಆ ಪಕ್ಷದ ಮೂಲಕವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕನಸು ಕಂಡರು. ಆದರೆ, ಚುನಾವಣೆಗೆ ಹಲವು ತಿಂಗಳುಗಳು ಇರುವಂತೆ ಅವರ ಕಾಂಗ್ರೆಸ್ ಪಕ್ಷದ ಹಿತ ಶತ್ರುಗಳು ಈ ಬಾರಿ ಅವರಿಗೆ ಟಿಕೆಟ್ ತಪ್ಪಿಸಬೇಕು ಎಂದು ಪಣತೊಟ್ಟರು.
ಇದರಿಂದ ಅಶೋಕ ಪೂಜಾರಿ ಅವರು ಧರ್ಮಸ್ಥಳಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿಕೊಂಡರು.

ಒಟ್ಟಾರೆ ಬೆಳವಣಿಗೆಗಳನ್ನು ಗಮನಿಸಿದರೆ ಈ ಬಾರಿ ಹೇಗಾದರೂ ಮಾಡಿ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಅಶೋಕ ಪೂಜಾರಿ ಅವರಿಗೆ ಟಿಕೆಟ್ ತಪ್ಪಿಸಬೇಕು ಎಂಬ ಷಡ್ಯಂತ್ರ ನಡೆದಿತ್ತು. ಆದೀಗ ನಿಜವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರೇ ಇದೀಗ ಅವರನ್ನು ಹಿಂದೆ ಸರಿಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಇದೀಗ ಅಶೋಕ ಪೂಜಾರಿ ಅವರ ರಾಜಕೀಯ ಭವಿಷ್ಯಕ್ಕೆ ಅತ್ಯಂತ ದೊಡ್ಡ ಹಿನ್ನಡೆಯಾಗಿದೆ. ಮಾತ್ರವಲ್ಲ ಅವರ ನಾಯಕತ್ವಕ್ಕೆ ಪಕ್ಷದ ವರಿಷ್ಠರು ಸೊಪ್ಪು ಹಾಕಿಲ್ಲ. ಜತೆಗೆ ವಿಶ್ವಾಸ ಇಟ್ಟಿಲ್ಲ ಎಂಬ ಅಂಶ ಎದ್ದುಕೊಂಡಿದೆ. ಇದರಿಂದ ನೊಂದಂತೆ ಕಂಡಿರುವ ಅಶೋಕ ಪೂಜಾರಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಾರೋ ನಡೆಸುವುದಿಲ್ಲವೋ ಎಂಬ ರಾಜಕೀಯ ಚರ್ಚೆ ಇದೀಗ ಗೋಕಾಕನಲ್ಲಿ ನಡೆದಿದೆ.

ಬಿಜೆಪಿ ಜಯ ಇನ್ನೂ ಸುಲಭ :
ಅಶೋಕ ಪೂಜಾರಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೈತಪ್ಪಿಸಿದೆ. ಇದರಿಂದ ಬಿಜೆಪಿಗೆ ಈ ಬಾರಿ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾತುಗಳು ವ್ಯಕ್ತವಾಗಿದೆ. ಅಶೋಕ ಪೂಜಾರಿಯವರು ಈ ಹಿಂದಿನ ಚುನಾವಣೆಗಳಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರುವುದರಿಂದ ತೀವ್ರ ಅಸಮಧಾನಗೊಂಡಿರುವುದರಿಂದ ಕಾಂಗ್ರೆಸ್ ಪಕ್ಷದ ಪಾಲಿಗೆ ದೊಡ್ಡ ತೊಡಕಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಹಂಚಿಕೆ ಗೊಂದಲ ಹಾಗೂ ಅಸಮಾಧಾನಗಳು ಈ ಬಾರಿ ಬಿಜೆಪಿಯ ಬಹುದೊಡ್ಡ ಜಯದ ಕನಸನ್ನು ಇನ್ನಷ್ಟು ಸುಗಮವಾಗಿಸುವುದರಲ್ಲಿ ಯಾವ ಸಂಶಯವೂ ಇಲ್ಲ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

six + nineteen =