ವನ್ಯಜೀವಿ ಹಂತಕನ ಮನೆ ಮೇಲೆ ದಾಳಿ: ರೈಫಲ್ ಇತರೆ ವಸ್ತು ವಶ
ಬೆಳಗಾವಿ: ಹವ್ಯಾಸಿ ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನ್(50) ಎಂಬಾತನ ನೆಹರೂ ನಗರದ ಮನೆ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ರೈಫಲ್ ಸೇರಿದಂತೆ ವಣ್ಯಜೀವಿ ಬೇಟೆಯಾಡುವ ವಸ್ತುಗಳು ಪತ್ತೆಯಾಗಿವೆ.
ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಒಂದು (ಟೆಲಿಸ್ಕೋಪ್) ದೂರದರ್ಶಕ, ಎರಡು ಚಾಕುಗಳು, 2 ಟಾರ್ಚ್, ವಾಹನಕ್ಕೆ ಅಳವಡಿಸುವ ಟಾರ್ಚ್, 2 ವಾಕಿ ಟಾಕಿ, ಜೀವಂತ ಬುಲೆಟಗಳು 26, ಡಿಬಿಎಲ್ ಸೇರಿದಂತೆ ವನ್ಯಬೇಟೆಗೆ ಬೇಕಾದ ಸಾಮಗ್ರಿಗಳು ಈತನ ಮನೆಯಲ್ಲಿ ತಪಾಸಿಸಿದಾಗ ಸಿಕ್ಕಿವೆ. ದಾಳಿ ವೇಳೆ ಆರೋಪಿತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ನಾಗರಗಾಳಿ ಮತ್ತು ಬೆಳಗಾವಿ ಉಪವಿಭಾಗದ ಅರಣ್ಯಾಧಿಕಾರಿಗಳ ತಂಡ ಬೆಳಂಬೆಳಿಗ್ಗೆ ದಾಳಿ ನಡೆಸಿತು. ಕಳೆದ ಡಿ . 27 ರಂದು ಕಿತ್ತೂರು ಅರಣ್ಯ ವಲಯದ ಕುಲವಳ್ಳಿ ಅರಣ್ಯದಲ್ಲಿ ಜಿಂಕೆ ಭೇಟಿಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಇಬ್ಬರ ಪೈಕಿ ಮೆಹಮೂದ್ ಮನೆ ಮೇಲೆ ಇಂದು ನಾಗರಗಾಳಿ ಎಸಿಎಪ್ ಸಿ. ಜಿ. ಮಿರ್ಜಿ ನೇತೃತ್ವದಲ್ಲಿ ಬೃಹತ್ ದಾಳಿ ನಡೆಯಿತು.
ಪರೀಕ್ಷಾರ್ಥಿ ಎಸಿಎಫ್ ಚಂದ್ರಶೇಖರ ಪಾಟೀಲ, ಗೋಲಿಹಳ್ಳಿ ಆರ್ ಎಫ್ಓ ಶ್ರೀಕಾಂತ್ ಕಡೋಲಕರ, ಬೆಳಗಾವಿ ಆರ್ ಎಫ್ ಓ ಶಿವಾನಂದ ಮಗದುಮ, ಡಿಆರ್ ಎಫ್ಓ ಸಂಜಯ ಮಗದುಮ, ಡಿಆರ್ ಎಫ್ಓ ಮಾಧುರಿ ದಳವಾಯಿ, ವಿನಯ ಗೌಡರ, ಅಜೀಜ್ ಮುಲ್ಲಾ, ಗಿರೀಶ್ ಮೆಕ್ಕೇದ, ಪ್ರವೀಣ ದೂಳೆಪ್ಪಗೋಳ, ನವೀನ ಹಂಚಿನಮನಿ ಇತರರು ಉಪಸ್ಥಿತರಿದ್ದರು.