Breaking News

ಪ್ರವಾಹ ಮತ್ತು ಕೋವಿಡ್-19 ನಿಯಂತ್ರಣ||ಪರಿಶೀಲನಾ ಸಭೆ||ನೀರು ಬಿಡುಗಡೆ ಸಮನ್ವಯತೆಗೆ ಅಧಿಕಾರಿ ನಿಯೋಜನೆ||– ಸಚಿವ ರಮೇಶ್ ಜಾರಕಿಹೊಳಿ.!!

Spread the love

ಪ್ರವಾಹ ಮತ್ತು ಕೋವಿಡ್-19 ನಿಯಂತ್ರಣ||ಪರಿಶೀಲನಾ ಸಭೆ||ನೀರು ಬಿಡುಗಡೆ ಸಮನ್ವಯತೆಗೆ ಅಧಿಕಾರಿ ನಿಯೋಜನೆ||– ಸಚಿವರಮೇಶ್ ಜಾರಕಿಹೊಳಿ.!!

ಬೆಳಗಾವಿ : ಜಲಾಶಯಗಳಲ್ಲಿ ನೀರು ಪ್ರಮಾಣ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮತ್ತಿತರ ಸಮನ್ವಯ ಸಾಧಿಸಲು ರಾಜ್ಯದ ಒಬ್ಬ ಅಧಿಕಾರಿಯನ್ನು ಮಹಾರಾಷ್ಟ್ರದ ಜಲಾಶಯಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳು ಇಲ್ಲಿನ ಜಲಾಶಯಗಳಿಗೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಪ್ರಮಾಣ ಹೆಚ್ಚಳವಾದರೆ ಮಹಾರಾಷ್ಟ್ರ ತಕ್ಷಣವೇ ನೀರು‌ಬಿಡುಗಡೆ ಮಾಡುತ್ತದೆ. ಆದ್ದರಿಂದ ನಿರಂತರ ನಿಗಾ ವಹಿಸಬೇಕು.
ವಿಶೇಷವಾಗಿ ಕೊಯ್ನಾ ಮತ್ತು ರಾಜ್ಯದ ಆಲಮಟ್ಟಿ ಜಲಾಶಯಗಳ ಬಗ್ಗೆ ಉಭಯ ರಾಜ್ಯಗಳ ಅಧಿಕಾರಿಗಳು ಸತತ‌ ಮಾಹಿತಿ ವಿನಿಮಯ ಮತ್ತು ಸಮನ್ವಯತೆ ಸಾಧಿಸಬೇಕು.
ಜಿಲ್ಲೆಯ ಜಲಾಶಯಗಳಿಂದ ಮೊದಲು‌ ಕೆರೆಗಳನ್ನು ತುಂಬಿಸಬೇಕು. ಇದಾದ ಬಳಿಕವೇ ಮುಂದೆ ನೀರು ಬಿಡುಗಡೆ ಮಾಡಬೇಕು ಎಂದು ಸಚಿವ ಜಾರಕಿಹೊಳಿ ಸೂಚನೆ ನೀಡಿದರು.

 

ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿಯಿಂದ ನಿನ್ನೆ ಮೂರ್ನಾಲ್ಕು ಬಾರಿ ಚರ್ಚೆ ನಡೆಸಿದ್ದಾರೆ.
ಆದ್ದರಿಂದ ಎಲ್ಲ ಅಧಿಕಾರಿಗಳು ತುರ್ತು ಪರಿಸ್ಥಿತಿ ನಿರ್ವಹಣೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಈ ವರ್ಷ ಕೊರೊನಾ ಮತ್ತು ಪ್ರವಾಹ ಎರಡೂ‌ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟ‌ ತಕ್ಷಣವೇ ನಮ್ಮ ರಾಜ್ಯದ ಜಲಾಶಯಗಳಿಂದ ಮುಂದೆ ನೀರು ಬಿಡುಗಡೆ ಬಗ್ಗೆ ಸೂಚನೆ ನೀಡಬೇಕು ಎಂದರು.
ಬೀಜ, ಗೊಬ್ಬರ ಸೇರಿದಂತೆ ಯಾವುದೇ ಕೊರತೆ ಇದ್ದರೂ ತಮ್ಮ ಗಮನಕ್ಕೆ ತಂದರೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸಲಾಗುವುದು ಎಂದರು.

ಸದ್ಯಕ್ಕೆ ಜಲಾಶಯಗಳ ಭರ್ತಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಸದ್ಯಕ್ಕೆ ತೊಂದರೆಯಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.

ಪ್ರವಾಹ ನಿರ್ವಹಣೆ ಎಲ್ಲ ತಾಲ್ಲೂಕು ಮತ್ತು ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ನದಿ ತೀರದ ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣ ಆಧರಿಸಿ ಆಲಮಟ್ಟಿ ಆಣೆಕಟ್ಟುಯಿಂದ ನೀರು ಬಿಡುಗಡೆ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ
ಕಳೆದ ಬಾರಿ ಎಲ್ಲೆಲ್ಲಿ ಪರಿಹಾರ ಕೇಂದ್ರ ಮತ್ತು ಜಾನುವಾರು ಕೇಂದ್ರ ಸ್ಥಾಪಿಸಲಾಗಿತ್ತು. ಅದೇ ಸ್ಥಳದಲ್ಲಿ ಈ ಬಾರಿ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ನದಿ ತೀರದ ಜನರಿಗೆ ಆಗಾಗ ಎಚ್ಚರಿಕೆ ನೀಡಲಾಗುತ್ತಿದೆ.
ಚಿಕ್ಕೋಡಿ ಭಾಗದಲ್ಲಿ ಕಳೆದ ವರ್ಷ ಆರಂಭಿಸಲಾಗಿದ್ದ ಪರಿಹಾರ ಕೇಂದ್ರ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದರು.

ನಗರದಲ್ಲಿ ಕೂಡ ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿ ಎರಡು ದಿನಕ್ಕೊಮ್ಮೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆ ನಡೆಸಬೇಕು.
ಸಂಘ-ಸಂಸ್ಥೆಗಳು ಐಸೋಲೇಷನ್ ಗಾಗಿ ಬೆಡ್ ವ್ಯವಸ್ಥೆ ಕಲ್ಪಿಸಲು ಮುಂದಾದರೆ ತಕ್ಷಣ ಅನುಮತಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗೆ ಕಿಟ್ ನೀಡುವ ಕುರಿತು ಚರ್ಚೆ:

ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಸಿ ದೊಡ್ಡ ಪರದೆ ಅಳವಡಿಸುವ ಮೂಲಕ ಹೊರಗಡೆಯಿಂದ ಹಿರಿಯ ವೈದ್ಯರು ನಿಗಾ ವಹಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನಿಡಿದರು.

 

ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಿಗೆ ರ್ಯಾಪಿಡ್ ಆಂಟಿಜೆನ್ ಕಿಟ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸೋಂಕಿತರು ಕಡೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳು ಹಾಗೂ ಅಧಿಕ‌ ಜನಸಾಂದ್ರತೆ ಇರುವ ಕಡೆಗಳಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮೊದಲ ಮೂರು ತಿಂಗಳಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಅದರೆ ನಂತರ ಸಾವು ಸಂಖ್ಯೆ ಜಾಸ್ತಿ ವರದಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದರು.
ವಾರ್ಡ ಮಟ್ಟದಲ್ಲಿ ಸಮಿತಿ ರಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಬೇಕು. ಇದರಿಂದ ಜನರು ಕಡೆ ಗಳಿಗೆಯಲ್ಲಿ ಆಸ್ಪತ್ರೆಗೆ ಧಾವಿಸುವುದನ್ನು ತಡೆಗಟ್ಟಬಹುದು. ಈ ಬಗ್ಗೆ ಆದ್ಯತೆ‌ ನೀಡುವಂತೆ ಅವರು ಸಲಹೆ ನೀಡಿದರು.

ತಾಲ್ಲೂಕು ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಆಯಾ ತಾಲ್ಲೂಕುಗಳಲ್ಲಿ ಲಕ್ಷಣರಹಿತರಿಗೆ ಆರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಸರ್ಕಾರ ಹೆಚ್ಚುವರಿ ವೆಂಟಿಲೇಟರ್ ಕಳುಹಿಸಿದ್ದು, ಅಗತ್ಯತೆ ಆಧರಿಸಿ ಬಿಮ್ಸ್ ಹಾಗೂ ತಾಲ್ಲೂಕು ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ರ್ಯಾಪಿಡ್ ಆಂಟಿಜೆನ್ ಕಿಟ್ ಸೇರಿದಂತೆ ಪ್ರತಿದಿನ ಒಂದು ಸಾವಿರ ಜನರ ಮಾದರಿ ತಪಾಸಣಾ ಸೌಲಭ್ಯವಿದೆ ಎಂದು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಕಣಗಲಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಸೇರಿದಂತೆ ಕೃಷಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

3 × two =