Breaking News

ಕೋವಿಡ್ ಸೊಂಕಿತರಿಗೆ ಕೆಎಂಎಫ್‍ನಿಂದ ಉಚಿತವಾಗಿ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.!!

Spread the love

ಕೋವಿಡ್ ಸೊಂಕಿತರಿಗೆ ಕೆಎಂಎಫ್‍ನಿಂದ ಉಚಿತವಾಗಿ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ!!
ತಿಂಗಳೊಳಗೆ 1 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ: ಕೆಎಂಎಫ್ ಸಭೆಯಲ್ಲಿ ತೀರ್ಮಾನ.

ಯುವ ಭಾರತ ಸುದ್ದಿ, ಬೆಂಗಳೂರು: “ಕೋವಿಡ್ ಎರಡನೇ ಅಲೆಯನ್ನು ಕರಾಳಗೊಳಿಸಿರುವ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿಯು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ” ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಮಂಗಳವಾರ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, “ಆಕ್ಸಿಜನ್ ಕೊರತೆಯಿಂದಾಗಿ ಬಹಳಷ್ಟು ಕೊರೋನಾ ಸೊಂಕಿತರು ಸಾವಿಗಿಡಾಗುತ್ತಿರುವ ಹಿನ್ನೆಲೆಯಲ್ಲಿ ಸೊಂಕಿತರ ಅನುಕೂಲಕ್ಕಾಗಿ 200 ಬೆಡ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಬೆಡ್, ಸಿಲಿಂಡರ್ ಮತ್ತು ಆಕ್ಸಿಜನ್ ಉತ್ಪಾದನೆ ಮಾಡಲು ಸಾಮರ್ಥ್ಯವಿರುವ ಕಂಪನಿಯೊಂದಕ್ಕೆ ಟೆಂಡರನ್ನು ನೀಡಲಾಗುತ್ತಿದೆ” ಎಂದರು.

“ಸೊಂಕಿತರಿಗೆ ಆಕ್ಸಿಜನ್‍ನ್ನು ಉಚಿತವಾಗಿ ನೀಡಲು ಯೋಜಿಸಿದ್ದು, ಸರ್ಕಾರಿ ಆಸ್ಪತ್ರೆಯೊಂದನ್ನು ಗುರುತಿಸಿ ಅಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಸೊಂಕಿತರಿಗೆ ಈ ಸೌಲಭ್ಯ ಪೂರ್ತಿಯಾಗಿ ಉಚಿತವಾಗಿದ್ದು, ತಿಂಗಳೊಳಗೆ ಕೊರೊನಾ ಸೊಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು” ಎಂದು ಅವರು ಹೇಳಿದರು.

ಕೆಎಂಎಫ್ ಗೆ 170 ಕೋಟಿ ರೂ.ಗಳ ನಿವ್ವಳ ಲಾಭ:

“ರೈತರ ಬಾಳಿನ ಆಶಾ ಕಿರಣವಾಗಿರುವ ಕೆಎಂಎಫ್ ಪ್ರಸಕ್ತ 2020-21ನೇ ಸಾಲಿನಲ್ಲಿ 170 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ದಿನನಿತ್ಯ 81.50 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 28 ಲಕ್ಷ ಲೀ. ಹಾಲನ್ನು ಹಾಲಿನ ಪೌಡರನ್ನಾಗಿ ಪರಿವರ್ತಿಸಲಾಗುತ್ತಿದೆ. 52 ಲಕ್ಷ ಲೀ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಕೋವಿಡ್‍ನಂತಹ ಸಂದಿಗ್ಧ ಸಂದರ್ಭದಲ್ಲೂ ರೈತರಿಂದ ಹಾಲನ್ನು ತಪ್ಪದೇ ಸಂಗ್ರಹಿಸಿಕೊಳ್ಳಲಾಗುತ್ತಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಂಎಫ್‍ನ ಎಲ್ಲ ನೌಕರ ವರ್ಗದವರಿಗೆ ಇನ್ಸೂರನ್ಸ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ” ಎಂದು ಹೇಳಿದರು.

ಸುರಕ್ಷತಾ ನಿಯಮ ಪಾಲಿಸುವಂತೆ ಮನವಿ:
“ಲಾಕಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಹಾಲು ಮತ್ತು ಹಾಲಿನ ಉತ್ಪನ್ನಗಳ ನಂದಿನಿ ಮಾರಾಟ ಮಳಿಗೆಗಳಲ್ಲಿ ದಿನಪೂರ್ತಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮಾರಾಟ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು” ಎಂದು ಬಾಲಚಂದ್ರ ಅವರು ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಪಶು ಸಂಗೋಪನೆ, ಮಾರುಕಟ್ಟೆ, ಗುಣ ನಿಯಂತ್ರಣ, ಅಭಿಯಂತರ ಹಾಗೂ ಖರೀದಿ ವಿಭಾಗದ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕಂಡು ಕಾಂಗ್ರೇಸ್‌ಗೆ ನಡುಕ.!

Spread the loveಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.! ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ …

Leave a Reply

Your email address will not be published. Required fields are marked *

17 − seven =