ನಂದಿನಿ ಹಾಲು ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ- ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …!!
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, ಕಹಾಮ 992 ನೌಕರರಿಗೆ ವಿಮೆ ಮಾಡಿಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ಸಂದರ್ಭದಲ್ಲಿ ನಾಡಿನ ಗ್ರಾಹಕರಿಗೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ದಿನನಿತ್ಯ ತಲುಪಿಸುತ್ತಿರುವ ನಮ್ಮ ಸಂಸ್ಥೆಯ ನೌಕರರಿಗೆ 5 ಲಕ್ಷ ರೂ.ವರೆಗಿನ ಕೋವಿಡ್ ಆರೋಗ್ಯ ಸುರಕ್ಷತೆ ವಿಮೆಯನ್ನು ಮಾಡಿಸಲು ನಿರ್ಧರಿಸಲಾಗಿದೆ.
ಈಗಾಗಲೇ 3 ಲಕ್ಷ ರೂ.ಗಳವರೆಗಿನ ಸಾಮಾನ್ಯ ಆರೋಗ್ಯ ವಿಮೆ ಸೌಲಭ್ಯವು ಕೂಡ ಕಹಾಮ ನೌಕರರಿಗೆ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.
ನಂದಿನಿ ಹೊಸ ಉತ್ಪನ್ನಗಳ ಬಿಡುಗಡೆ : ಕಳೆದ 40 ವರ್ಷಗಳಿಂದ ರಾಜ್ಯದ ಎಲ್ಲ ವರ್ಗದ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ನಂದಿನಿಯು ರುಚಿ-ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ.
ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಈ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯದಾದ್ಯಂತ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ಈ ಸಾಂಕ್ರಾಮಿಕ ರೋಗಕ್ಕೆ ಪ್ರತ್ಯೇಕ ಔಷಧಿ ಲಭ್ಯವಿಲ್ಲದ ಕಾರಣ ಜನ ಸಾಮಾನ್ಯರು ಈ ಸೊಂಕಿನಿಂದ ರಕ್ಷಿಸಿಕೊಳ್ಳಲು ದೇಹದ ರೋಗ ನಿರೋಧಕ ಶಕ್ತಿ ವೃದ್ಧಿ ಮಾಡಲು ಆಯುರ್ವೇದದ ಕಷಾಯ ಅವಶ್ಯವಿದೆ. ಆರೋಗ್ಯದ ಹಿತದೃಷ್ಟಿಯಿಂದ ಕಹಾಮ ವತಿಯಿಂದ ಈಗಾಗಲೇ ನಂದಿನಿ ಅರಿಷಿನ ಹಾಲು ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ನಂದಿನಿ ಅರಿಷಿನ ಹಾಲಿನ ಜೊತೆಗೆ ಆಯುರ್ವೇದಿಕ ಗುಣಗಳೊಂದಿಗೆ ಹಾಲಿನ ಪೌಷ್ಠಿಕಾಂಶಗಳನ್ನು ಹೊಂದಿರುವ ವಿವಿಧ ಬಗೆಯ ಹಾಲು ಮತ್ತು ಆರೋಗ್ಯದಾಯಕ ಸಿರಿಧಾನ್ಯ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು. ನಂದಿನಿ ತುಳಸಿ ಹಾಲು, ನಂದಿನಿ ಅಶ್ವಗಂಧ ಹಾಲು, ನಂದಿನಿ ಕಾಳುಮೆನಸು ಹಾಲು, ನಂದಿನಿ ಲವಂಗ ಹಾಲು, ನಂದಿನಿ ಶುಂಠಿ ಹಾಲು, ನಂದಿನಿ ಸಿರಿಧಾನ್ಯ ಸಿಹಿ ಪೊಂಗಲ್, ನಂದಿನಿ ಸಿರಿಧಾನ್ಯ ಕಾರ ಪೊಂಗಲ್, ನಂದಿನಿ ಸಿರಿಧಾನ್ಯ ಪಾಯಸ್ ಉತ್ಪನ್ನಗಳು ಇನ್ನು ಮುಂದೆ ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಹೇಳಿದರು.
ಆಯುರ್ವೇದಿಕ ಗುಣವುಳ್ಳ ಹಾಲಿನ ಪಾನಿಗಳ ಮಾರುಕಟ್ಟೆ ದರವು ರೂ. 25 ಗಳಿದ್ದು, ಆರಂಭಿಕ ಕೊಡುಗೆಯಾಗಿ ರೂ. 20 ರಂತೆ ದರವನ್ನು ನಿಗಧಿಪಡಿಸಲಾಗಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಹಾಮ ಆಡಳಿತ ಮಂಡಳಿ ಸದಸ್ಯರಾದ ಎಚ್.ಡಿ. ರೇವಣ್ಣ, ಭೀಮಾನಾಯ್ಕ, ಎಚ್.ಜಿ. ಹಿರೇಗೌಡರ, ಮಾರುತಿ ಕಾಶಂಪೂರ, ದಿವಾಕರ ಶೆಟ್ಟಿ, ಶ್ರೀಶೈಲಗೌಡ ಪಾಟೀಲ, ಕೆ.ಎಸ್. ಕುಮಾರ, ಅಮರನಾಥ ಜಾರಕಿಹೊಳಿ, ಆನಂದಕುಮಾರ, ಆರ್.ಶ್ರೀನಿವಾಸ್, ಎಂ. ನಂಜುಂಡಸ್ವಾಮಿ, ವೀರಭದ್ರ ಬಾಬು, ಪ್ರಕಾಶ, ಸಹಕಾರ ಸಂಘಗಳ ನಿಬಂಧಕ ಜಿಯಾವುಲ್ಲಾ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಹಾಗೂ ಇತರೇ ಕಹಾಮ ಅಧಿಕಾರಿಗಳು ಉಪಸ್ಥಿತರಿದ್ದರು.