ಸಿಎಂ ದಿಲ್ಲಿಗೆ ; ಈಶ್ವರಪ್ಪ, ರಮೇಶ ಜಾರಕಿಹೊಳಿ ಸಚಿವ ಸಂಪುಟ ಸೇರ್ಪಡೆ ಕುತೂಹಲ !
ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಮುಗಿಯುತ್ತಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹಾರಲಿದ್ದಾರೆ.
ಈ ಬಾರಿಯ ಅವರ ದೆಹಲಿ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಯಾಕೆಂದರೆ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಗೆ ಈ ಸಲವಾದರೂ ಸುಮುಹೂರ್ತ ಕೂಡಿ ಬರುತ್ತದೋ ನೋಡಬೇಕು.
ಮಾಜಿ ಸಚಿವರು ಹಾಗೂ ಬಿಜೆಪಿಯ ಪ್ರಬಲ ನಾಯಕರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಯಾಕೆಂದರೆ ಇವರಿಬ್ಬರು ಬಿಜೆಪಿಯ ವರ್ಚಸ್ವಿ ನಾಯಕರು. ಅದರಲ್ಲೂ ರಮೇಶ ಜಾರಕಿಹೊಳಿಯವರು ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಹೊಂದಿರುವುದಲ್ಲದೇ ಇತರರನ್ನು ಗೆಲ್ಲಿಸಿಕೊಂಡು ಬರುವಷ್ಟು ಜನಪ್ರಿಯ ನಾಯಕರಾಗಿದ್ದಾರೆ.
ಹೀಗಾಗಿ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ರಮೇಶ ಜಾರಕಿಹೊಳಿಯವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ತಂತ್ರಗಾರಿಕೆ ಹೆಣೆಯುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಬೊಮ್ಮಾಯಿ ಅವರು ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಅವರ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದರು. ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಸಚಿವ ಸ್ಥಾನ ನೀಡುವುದರಲ್ಲಿ ಯಾವುದೇ ತಕರಾರು ಇಲ್ಲ ಎಂದು ಬೊಮ್ಮಾಯಿ ತಿಳಿಸಿದ್ದರು. ಇವರಿಬ್ಬರಿಗೆ ಪಕ್ಷ ಮತ್ತೊಮ್ಮೆ ಸಚಿವ ಸ್ಥಾನ ನೀಡುವ ಮೂಲಕ
ಪಕ್ಷಕ್ಕೆ ನವ ಚೈತನ್ಯ ನೀಡುವ ಸಾಧ್ಯತೆ ಇದೆ. ಜೊತೆಗೆ ಬೊಮ್ಮಾಯಿ ಇವರಿಬ್ಬರ ವರ್ಚಸ್ಸು ಹಾಗೂ ಮತ ಸೆಳೆಯುವ ಬಗೆಗಿನ ಅನಿವಾರ್ಯತೆಯನ್ನು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಹೆಜ್ಜೆ ಇಟ್ಟಿದ್ದಾರೆ. ಪಕ್ಷ ಈಗ ಕೊನೆಯ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸೂಚಿಸಿದರೆ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಅವರು ಮತ್ತೊಮ್ಮೆ ಸಚಿವರಾಗುವುದು ಖಚಿತ.