ಹಾರೂಗೇರಿಯಲ್ಲಿ ಪ್ರಿಯಾಂಕಾ ವಾದ್ರಾ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆ ತಂದ ಕಾಂಗ್ರೆಸ್ಸಿಗರು
ಕುಡಚಿ :
ಕುಡಚಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತಕ್ಷೇತ್ರದ ಹಾರೂಗೇರಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗಮಿಸಿದ್ದ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತಂದು ಕಾಂಗ್ರೆಸ್ ಪರ ಘೋಷಣೆ ಮೊಳಗಿಸಿರುವ ಘಟನೆ ಇದೀಗ ಭಾರೀ ವೈರಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಪರ ಕ್ರಮ ಕೈಗೊಳ್ಳಬೇಕಾಗಿದ್ದ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈಗ ಬೇಸಿಗೆ ರಜೆ. ಹೀಗಾಗಿ ಮಕ್ಕಳನ್ನೇ ಪ್ರಿಯಾಂಕಾ ವಾದ್ರಾ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಲಾಗಿದೆ. ಮಕ್ಕಳು ಕಾರ್ಯಕ್ರಮಕ್ಕೆ ಆಗಮಿಸುವಾಗ ಕಾಂಗ್ರೆಸ್ಸಿಗೆ ಜೈಕಾರ ಹಾಕಿರುವ ವಿಡಿಯೋ ಸಹಾ ವೈರಲಾಗಿದೆ. ಜೊತೆಗೆ ಮಕ್ಕಳಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಘೋಷಣೆ ಕೂಗುವಂತೆ ಪ್ರಚೋದನೆ ನೀಡಲಾಗಿದೆ. ಏನು ಅರಿಯದ ಶಾಲಾ ಮಕ್ಕಳು ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಯ ಪರವಾಗಿ ಘೋಷಣೆ ಕೂಗಿದ್ದಾರೆ.
ಚುನಾವಣೆ ಪ್ರಚಾರ ಕಾರ್ಯಕ್ಕೆ 18 ವರ್ಷದ ಒಳಗಿನ ಮಕ್ಕಳನ್ನು ಬಳಸಿಕೊಳ್ಳುವುದು ನಿಷಿದ್ಧ. ಅಂತಹ ಮಕ್ಕಳನ್ನು ಕರೆ ತಂದ ಅಭ್ಯರ್ಥಿಯ ವಿರುದ್ಧ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕಾಗಿರುವ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ.
ರಾಜಕೀಯ ಪಕ್ಷಗಳ ಮೆರವಣಿಗೆ, ಸಾರ್ವಜನಿಕ ಭಾಷಣ, ಮನೆ-ಮನೆಗೆ ಭೇಟಿ ನೀಡುವುದು ಪಕ್ಷದ ಚಿಹ್ನೆಯಿರುವ ಬುಕ್ ಮತ್ತು ಬಟ್ಟೆಗಳನ್ನು ಹಂಚುವುದು, ಕರಪತ್ರಗಳನ್ನು ಹಂಚುವುದು ಮುಂತಾದ ಚಟುವಟಿಕೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡಲ್ಲಿ ಪ್ರಕರಣ ದಾಖಲಾಗಿದ್ದ ದಾಖಲು ಮಾಡಲಾಗುತ್ತದೆ.
ಆದರೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳ ಬಗ್ಗೆ ಇದುವರೆಗೆ ಸಹಾ ಸಂಬಂಧಿಸಿದ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗಮನಿಸಬೇಕಾದ ಅಂಶವಾಗಿದೆ. ಹಾರೂಗೇರಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಕಂಡುಬಂದಿದ್ದು ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ.