Breaking News

ಭಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮನ ಜನ್ಮಸ್ಥಳದಲ್ಲೇ ಪ್ರಧಾನಿ ಮೋದಿ ಕೆಂಡ

Spread the love

ಭಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮನ ಜನ್ಮಸ್ಥಳದಲ್ಲೇ ಪ್ರಧಾನಿ ಮೋದಿ ಕೆಂಡ

ಹೊಸಪೇಟೆ:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು, ಮಂಗಳವಾರ ‘ಭಗವಾನ್‌ ರಾಮ’ನ ಬಗ್ಗೆ ಅವರಿಗೆ (ಕಾಂಗ್ರೆಸ್‌ಗೆ) ಸಮಸ್ಯೆ ಇತ್ತು ಮತ್ತು ಈಗ “ಜೈ ಬಜರಂಗಬಲಿ (ಜೈ ಹನುಮಂತ)” ಎಂದು ಘೋಷಣೆ ಕೂಗುವವರನ್ನೂ ಲಾಕ್‌ ಮಾಡುವುದಾಗಿ ಕಾಂಗ್ರೆಸ್‌ನವರು ಪ್ರತಿಜ್ಞೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಹನುಮಂತನ ಭೂಮಿಗೆ ನನ್ನ ನಮನ ಸಲ್ಲಿಸಲು ಬಂದಿರುವ ಸಮಯದಲ್ಲಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹನುಮಂತನಿಗೆ ಜೈಕಾರ ಹಾಕುವವರಿಗೆ ಠಾಣೆಯಲ್ಲಿ ಲಾಕ್‌ ಮಾಡಲು ನಿರ್ಧರಿಸಿದೆ ಎಂದು ಹೊಸಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಈ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಇದೀಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಭಜರಂಗದಳ ನಿಷೇಧಿಸುವುದಾಗಿ ಘೋಷಿಸಿದೆ. ಇದರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಶ್ರೀರಾಮಚಂದ್ರ ಹಾಗೂ ಹನುಮಾನ್ ನಮಗೆ ಪೂಜ್ಯ ಎಂದಿದ್ದಾರೆ. ವಿಜಯನಗರದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಹನುಮಾನ ಜನ್ಮಸ್ಥಾನಕ್ಕೆ ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಆದರೆ ಇದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗಬಲಿ ಅಂದರೆ ಹನುಮಂತನನ್ನ ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶ್ರೀರಾಮಚಂದ್ರನನ್ನು ಬಂಧಿಸಿಟ್ಟಿದ್ದರು. ಅವರಿಗೆ ಈ ಹಿಂದೆ ಶ್ರೀರಾಮ ಕಂಡರೂ ಆಗುತ್ತಿಲ್ಲ. ಇದೀಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮ ಚಂದ್ರ ಹಾಗೂ ಹನುಮಂತ ಪೂಜ್ಯ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಬದ್ಧರಾಗಿದ್ದೇವೆ. ನಮ್ಮ ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ವಿಜಯನಗರ ಜಿಲ್ಲೆ ಅತ್ಯಂತ ಐತಿಹಾಸಿಕ ಸ್ಥಳವಾಗಿದೆ. ಪುರಾಣ, ಇತಿಹಾಸದಲ್ಲೂ ಉಲ್ಲೇಖವಿದೆ. ಇದು ಕರ್ನಾಟಕದ ಅತ್ಯಂತ ಯುವ ಜಿಲ್ಲೆಯಾಗಿದೆ. ವಿಜಯನಗರ ಜಿಲ್ಲೆಯಾಗಿ ಮಾಡಲಾಗಿದೆ. ಇಲ್ಲಿನ ಪ್ರತಿ ಮನೆ ಮನೆಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಈಗಾಗಲೇ ವಿಜನಗರ ಜನರು ಬಿಜೆಪಿಯ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ವಿಜಯನಗರ ನಿರ್ಧಾರ ಮಾಡಿದ್ದಾರೆ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ದಶಕಗಳ ಆಡಳಿತದಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವೆ ದೊಡ್ಡದಾದ ಕಂದಕ ನಿರ್ಮಾಣವಾಗಿದೆ. ಈ ಕಂದಕವನ್ನು ದೂರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಇಂದು ನಗರದಲ್ಲಿ ಸಿಗುವ ಸೌಲಭ್ಯಗಳು, ಗ್ರಾಮೀಣ ಪ್ರದೇಶದಲ್ಲಿ ಸಿಗಬೇಕು ಅನ್ನೋ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಹಾಗೂ ನಗರ ಪ್ರದೇಶದ ದೂರ ಕಡಿಮೆ ಮಾಡಲು ಬಿಜೆಪಿ ಕೆಲಸ ಮಾಡುತ್ತಿದೆ. ಎಲ್ಲಾ ರೈತರ ಜಮೀನಿಗೆ ಬೇಕಾದ ನೀರಾವರಿ ವ್ಯವಸ್ಥೆ ಆಗಬೇಕು ಅನ್ನೋದು ಅವರ ಬೇಡಿಕೆಯಾಗಿತ್ತು. ಇದನ್ನು ಪರಿಗಣಿಸಿ ಈ ಭಾಗದಲ್ಲಿ 70ಕ್ಕೂ ಹೆಚ್ಚು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷಿ ಕಾಲೇಜನ್ನು ಸ್ಥಾಪನೆ ಮಾಡಲಾಗುತ್ತಿದೆ. ಡಿಜಿಟಲ್ ಇಂಡಿಯಾ ಅಭಿಯಾನ, ಪ್ರತಿಯೊಂದು ಮನಗೆ ಕುಡಿಯವ ನೀರು ಪೂರೈಸುವ ಅಭಿಯಾನ, ಆರೋಗ್ಯ ಅಭಿಯಾನ ಎಲ್ಲವೂ ಗ್ರಾಮ ಹಾಗೂ ನಗರದ ಅಂತರ ಕಡಿಮೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ.

ಹಂಪಿ ಬಗ್ಗೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೆ ಹೆಮ್ಮೆಯ ಪ್ರತೀಕ. ಆದರೆ ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್‌ಗೆ ಇದು ಹೆಮ್ಮೆಯ ವಿಷಯವಲ್ಲ. ಇದರ ಪರಿಣಾಮ ಹಂಪಿಯಂತ ಪಾರಪಂರಿಕ ತಾಣ ನಿರ್ಲಕ್ಷ್ಯಕ್ಕೊಳಗಾಯಿತು. ಆದರೆ ನಮ್ಮ ಸರ್ಕಾರ 50 ರೂಪಾಯಿ ನೋಟಿನಲ್ಲಿ ಹಂಪಿಯ ಕಲ್ಲಿನ ರಥ ಮುದ್ರಣ ಮಾಡಲಾಗಿದೆ. ಹಂಪಿಯ ವಿರಾಸತ್‌ನ್ನು ಬಿಜೆಪಿ ಸಂರಕ್ಷಣೆ ಮಾಡುತ್ತಿದೆ. ಹಂಪಿ, ಬಾದಾಮಿ, ಐಹೋಳೆ, ಪಟ್ಟದಕಲ್ಲು, ಬಿಜಾಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಹನುಮಂತನ ಪಾದಗಳಿಗೆ ತಲೆಬಾಗಿ ಪ್ರಾರ್ಥಿಸುತ್ತೇನೆ. ಹಾಗೂ ಕರ್ನಾಟಕದ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆ ತರಲು ನಾವು ಯಾರಿಗೂ ಬಿಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೇ 10 ರ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಬಜರಂಗದಳದೊಂದಿಗೆ ಸಮೀಕರಿಸಿದ ಕಾಂಗ್ರೆಸ್, ಪಿಎಫ್‌ಐ ಹಾಗೂ ಬಜರಂಗದಳದಂತಹ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.

ಮೊದಲು ಅವರು (ಕಾಂಗ್ರೆಸ್) ಭಗವಾನ್ ರಾಮನಿಗೆ ಲಾಕ್‌ ಮಾಡಿದರು ಮತ್ತು ಈಗ ಅವರು ‘ಜೈ ಹನುಮಾನ’ ಎಂದು ಕೂಗುವವರನ್ನು ಲಾಕ್‌ ಮಾಡುವುದಾಗಿ ಶಪಥ ಮಾಡಿದ್ದಾರೆ. ಈವರೆಗೆ ಭಗವಾನ್‌ ಶ್ರೀರಾಮನ ಜೊತೆಗೆ ಅವರಿಗೆ (ಕಾಂಗ್ರೆಸ್‌ಗೆ) ಸಮಸ್ಯೆಯಿತ್ತು. ಈಗ ಹನುಮಂತನ ಜೈಕಾರ ಹಾಕುವವರ ಬಗ್ಗೆಯೂ ಅವರಿಗೆ ತೊಂದರೆಯಾಗಿರುವುದು ದೇಶದ ದೌರ್ಭಾಗ್ಯ ಎಂದರು.

ವಿಜಯನಗರ ಸಾಮ್ರಾಜ್ಯ ಮತ್ತು ಅದರ ಇತಿಹಾಸ ಭಾರತದ ಹೆಮ್ಮೆ ಎಂದ ಅವರು, ವಿಜಯನಗರ ಸಾಮ್ರಾಜ್ಯದ ವೈಭವೋಪೇತ ದೊರೆಗಳ ಹೆಸರನ್ನು ಹೇಳುತ್ತಾ, ಶ್ರೀಕೃಷ್ಣದೇವರಾಯ ತನ್ನ ಸಂಪನ್ಮೂಲಗಳಿಂದ ಈ ಪ್ರದೇಶವನ್ನು ಅಮರಗೊಳಿಸಿದ್ದಾನೆ. ವಿವಿಧ ದೇಶಗಳೊಂದಿಗೆ ವ್ಯಾವಹಾರಿಕ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದ. ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಾದ್ಯಂತ ಪ್ರಸಿದ್ಧಿಗೊಳಿಸಿದ್ದ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಮಾರ್ಗಸೂಚಿ ಇದೆ ಎಂದು ಪ್ರದಾನಿ ಮೋದಿ ಹೇಳಿದರು. ಏಕರೂಪ ನಾಗರಿಕ ಸಂಹಿತೆ ಜಾರಿ, ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳು ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಸೇರಿವೆ. ತನ್ನ ಭರವಸೆಗಳು ಸಮಾಜದ ಪ್ರತಿಯೊಂದು ವರ್ಗವನ್ನು ಮುಟ್ಟುತ್ತವೆ ಎಂದು ಅವರು ಹೇಳಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

14 − 11 =