Breaking News

ವಡಗಾವಿ ಯಳ್ಳೂರ ರಸ್ತೆಯ ಅನ್ನಪೂರ್ಣೇಶ್ವರಿ ದೇವಿಯ ದಶಮಾನೋತ್ಸವ ಬುಧವಾರ ಆರಂಭ

Spread the love

ವಡಗಾವಿ ಯಳ್ಳೂರ ರಸ್ತೆಯ ಅನ್ನಪೂರ್ಣೇಶ್ವರಿ ದೇವಿಯ ದಶಮಾನೋತ್ಸವ ಬುಧವಾರ ಆರಂಭ

ಬೆಳಗಾವಿ :
ವಡಗಾವಿ ಯಳ್ಳೂರ ರಸ್ತೆಯ ಅನ್ನಪೂರ್ಣೇಶ್ವರಿ ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದಶಮಾನೋತ್ಸವ ಜೂನ್ 7 ರಿಂದ 9 ರವರೆಗೆ ನಡೆಯಲಿದೆ. ವರ್ಷಾವಧಿ ಉತ್ಸವ ಉಡುಪಿ ಜಿಲ್ಲೆ ಉಚ್ಚಿಲದ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ದಶಮಾನೋತ್ಸವವಾಗಿ ಈ ವರ್ಷ ವಿಶೇಷವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಜೂನ್ 7 ರಂದು ಬೆಳಿಗ್ಗೆ 5 ಕ್ಕೆ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ ಶುದ್ದಿ, ಗಣಹೋಮ ಮತ್ತು ಶುದ್ದಿ ಪ್ರಕ್ರಿಯೆಗಳು, ನವಗ್ರಹ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಸುದರ್ಶನ ಹೋಮ.

ಜೂನ್ 8 ರಂದು ಬೆಳಿಗ್ಗೆ 5 ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರುಗಳಿಗೆ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ಕ್ಕೆ ರಂಗಪೂಜೆ, ಬಲಿ, ಶ್ರೀ ದೇವಿಯ ಪಲ್ಲಕಿ ಮೆರವಣಿಗೆ ಹಾಗೂ ದೀಪೋತ್ಸವ.

ಜೂನ್ 9 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ಬಲಿ, ಬೆಳಗ್ಗೆ 8.30 ಕ್ಕೆ ಮಹಾ ಚಂಡಿಕಾಯಾಗ, 10 ಕ್ಕೆ ದೇವಿಗೆ ವಿಶೇಷ ಅಲಂಕಾರ ಪೂಜಾರಾಧನೆ,
ಮಧ್ಯಾಹ್ನ 1 ರಿಂದ 3 ರವರೆಗೆ ಮಹಾಪ್ರಸಾದ ನೆರವೇರಲಿದೆ.

*ದೇವಸ್ಥಾನ ನಿರ್ಮಾಣದ ಹಿಂದಿದೆ ಈ ಕತೆ :*
ಬೆಳಗಾವಿ ವಡಗಾವಿ ಯಳ್ಳೂರು ರಸ್ತೆಯಲ್ಲಿ ಶ್ರೀ ಅನ್ನಪೂರ್ಣ ದೇವಿಯ ಭವ್ಯ ದೇಗುಲ ನಿರ್ಮಾಣಗೊಂಡಿದೆ. ಈ ಸುಂದರ ದೇಗುಲ ನಿರ್ಮಿಸಿದವರು ಬೆಳಗಾವಿಯ ಹೋಟೆಲ್ ಉದ್ಯಮಿ 85 ವರ್ಷದ ರವಿರಾಜ್ ಹೆಗ್ಡೆ. ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯ್ಯಾರಿನವರಾದ ರವಿರಾಜ್ ಹೆಗ್ಡೆ ಅವರು 19 ವರ್ಷಗಳ ಹಿಂದೆ ಮೂಡಬಿದಿರೆ ಬಳಿಯ ಪ್ರಸಿದ್ದ ಸುಕ್ಷೇತ್ರ ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೋಗಿದ್ದರು. ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಭಾಗ್ಯ ಲಭಿಸಿದಾಗ ರವಿರಾಜ್ ಹೆಗ್ಡೆಯವರಿಗೆ ಮನಸ್ಸಿನಲ್ಲಿ ಒಂದು ಪ್ರೇರಣೆಯಾಯಿತಂತೆ. ತಾನೇಕೆ ಇಂಥ ದೇವಸ್ಥಾನವನ್ನು ಕಟ್ಟಬಾರದೇಕೆ ಎಂಬ ಯೋಚನೆ ಬಂತಂತೆ.

ನಂತರ ಅವರು ಬೆಳಗಾವಿಗೆ ಬಂದು ಈ ಬಗ್ಗೆ ದೃಢ ಚಿಂತನೆ ಮಾಡಿದರು. ದೇವಸ್ಥಾನ ನಿರ್ಮಿಸಲು ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ತಳೆದರು.
ಹೊಟೇಲು ಉದ್ಯಮದಿಂದ ಹಣ ಸಂಗ್ರಹಿಸಿ ದೇವಸ್ಥಾನ ನಿರ್ಮಾಣದ ಬಗ್ಗೆ ನೀಲನಕ್ಷೆ ತಯಾರಿಸಿದರು. ನಂತರ ಅದರ ನಿರ್ಮಾಣಕ್ಕೆ ಮುಂದಾದರು. ಲಕ್ಷಾಂತರ ರೂ. ವೆಚ್ಚದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ನಿರ್ಮಿಸಿದರು.

ದೇವಿಯ ಆಲಯ ನಿರ್ಮಾಣಕ್ಕೆ ತಾವೇ ಸ್ವತಃ ಛಲದಿಂದ ತಮ್ಮ ಮಕ್ಕಳೊಂದಿಗೆ ಸೇರಿ ಸ್ವಂತ ಜಾಗ ಖರೀದಿಸಿ 2013 ರಲ್ಲಿ ಸುಂದರ ದೇಗುಲ ನಿರ್ಮಿಸಿದ್ದಾರೆ.

ಅಂದಿನಿಂದ ವರ್ಷ ವರ್ಷವೂ ದೇವಸ್ಥಾನದಲ್ಲಿ ವಿವಿಧ ಸೇವಾ ಕಾರ್ಯಗಳು ನೆರವೇರುತ್ತವೆ ವರ್ಷಾವಧಿ ಪೂಜೆ, ನವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದೆ. ಈಗ ಹತ್ತನೇ ವರ್ಷದ ವರ್ಷಾವಧಿ ಸೇವೆಯ ಸಂಭ್ರಮ.
ದೇವಸ್ಥಾನಕ್ಕೆ ವರ್ಷವೂ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಈ ಭಾಗದಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇರುವುದನ್ನು ಮನಗಂಡು ರವಿರಾಜ್ ಹೆಗ್ಡೆಯವರು ಇದೀಗ ದೇವಸ್ಥಾನದ ಪಕ್ಕದಲ್ಲಿ ಜಾಗ ಖರೀದಿ ಮಾಡಿ ಸುಂದರ ಹಾಗೂ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿ ಈ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fourteen − five =