Breaking News

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

Spread the love

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

ಯುವ ಭಾರತ ಸುದ್ದಿ ಮಂಗಳೂರು :
ನಾಡಿನ ಹೆಸರಾಂತ ಸಾಹಿತಿ ಸಾರಾ ಅಬುಬಕ್ಕರ್ (87) ಮಂಗಳವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ.

ಮಂಗಳೂರಿನ ಕ್ಯಾಟ್ ಹಿಲ್ ಬಳಿ ನೆಲೆಸಿದ್ದು ನಾಲ್ವರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ನಗರದ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಅಂತ್ಯಕ್ರಿಯೆ ನಗರದ ಬಂದರ್ ನ ಜೀನತ್ ಬಕ್ಷ್ ಮಸೀದಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಕಾಸರಗೋಡು ಜಿಲ್ಲೆಯ ‘ಪುದಿಯಾಪುರ್ (ಹೊಸಮನೆ) ತರವಾಡು ಮನೆಯಲ್ಲಿ ಪಿ. ಅಹ್ಮದ್ ಮತ್ತು ಜೈನಾಬಿ ದಂಪತಿಗಳ ಮಗಳಾಗಿ ಜನಿಸಿದ್ದ ಸಾರಾ 1984ರಲ್ಲಿ ರಚಿಸಿದ ‘ಚಂದ್ರಗಿರಿಯ ತೀರದಲ್ಲಿ’ ಎಂಬ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಕಾದಂಬರಿಯು ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಒರಿಯಾ ಭಾಷೆಗೆ ಅನುವಾದಗೊಂಡಿತು. ‘ಹೊತ್ತು ಕಂತುವ ಮುನ್ನ’ ಅವರ ಆತ್ಮಕತೆ.

ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ತಳಒಡೆದ ದೋಣಿಯಲ್ಲಿ, ಪ್ರವಾಹ-ಸುಳಿ, ಪಂಜರ, ಇಳಿಜಾರು, ಕಾಣಿಕೆ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ಐದು ಕಥಾಸಂಕಲನ, ನಾಟಕ, ಪ್ರವಾಸ ಕೃತಿಗಳು, ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ಕಮಲಾದಾಸ್ (ಮನೋಮಿ), ಬಿ.ಎಂ. ಸುಹರಾ(ಬಲೆ) ಪಿ.ಕೆ. ಬಾಲಕೃಷ್ಣನ್ (ನಾನಿನ್ನು ನಿದ್ರಿಸುವೆ), ಈಚರ ವಾರಿಯರ್(ತುರ್ತು ಪರಿಸ್ಥಿತಿಯ ಕರಾಳ ಮುಖ) , ಆರ್. ಬಿ. ಶ್ರೀಕುಮಾರ್ (ಧರ್ಮದ ಹೆಸರಿನಲ್ಲಿ), ಡಾ. ಕತೀಜಾ ಮುಮ್ತಾಜ್ (ಮುಂಬೆಳಕು), ಎಂ.ಎನ್. ಕಾರಶೇಂ(ವೈಕಂ ಮಹಮ್ಮದ್ ಬಷೀರ್), ಸಯ್ಯದ್ ಮೆಹಬೂಬ್ ಶಾ ಖಾದ್ರಿ (ಮುಸ್ಲಿಂ ಮಹಿಳೆಯರು ಮತ್ತು ತಲಾಖ್) ಎಂಬ ಕೃತಿಗಳನ್ನು ಮಲಯಾಳ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದರು.

ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಪ್ರಕಾಶಕಿಯೂ ಆಗಿದ್ದ ಅವರು ಚಂದ್ರಗಿರಿ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವು ಅವರಿಗೆ 2008ರಲ್ಲಿ ಗೌರವ ಡಾಕ್ಟರೇಟ್‌ ನೀಡಿತ್ತು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × four =