ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ
ಯುವ ಭಾರತ ಸುದ್ದಿ ಬೆಂಗಳೂರು:
ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಎಲ್ಲಾ ಮಹಿಳೆಯರೂ ಉಚಿತ ಪ್ರಯಾಣ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಇಂದು, ಮಂಗಳವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಿದ್ದೇವೆ. ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ಮಾಡಿದ್ದೇವೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಲೋಚನೆ ನಡೆಸಿದ್ದಾರೆ. ಸಾರಿಗೆ ನಿಗಮಗಳ ಎಂಡಿಗಳಿಂದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ವರದಿ ಪಡೆದು ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ಎಪಿಎಲ್ ಬಿಪಿಎಲ್ ಕಾರ್ಡುದಾರರು ಎಂದು ಹೇಳಿಲ್ಲ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಯಾವುದೇ ಷರತ್ತುಗಳು ಇಲ್ಲ, ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.