Breaking News

ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ :ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

 

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.


ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು.
ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ ಮಾದರಿ ಕೋವಿಡ್ ಕೇರ್ ಸೆಂಟರ್ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳಿಗೆ ಕಾರ್ಯಗಳನ್ನು ಹಂಚಿಕೆ ಮಾಡಿದರು. ಮುಖ್ಯಾಧಿಕಾರಿಗಳು ಮಲ್ಲಾಪೂರ ಪಿಜಿ ಇವರು ಅಂಬ್ಯುಲೆನ್ಸ್ ವಾಹನಗಳು ಸಂಚರಿಸಲು ರಸ್ತೆಯನ್ನು ಸಿದ್ಧಗೊಳಿಸಬೇಕು. ಕೋವಿಡ್ ಕೇರ್ ಸೆಂಟರ್‍ನಲ್ಲಿ ಬಲ್ಬ್, ಫ್ಯಾನ್ ಇತ್ಯಾಧಿಗಳನ್ನು ಅಳವಡಿಸುವುದು. ಕೋವಿಡ್ ಕೇರ್ ಸೆಂಟರ್‍ನಲ್ಲಿ ಬಳಕೆಯಾದ ಜೈವಿಕ ತ್ಯಾಜ್ಯಗಳನ್ನು ಪ್ರತಿದಿನ ಸರ್ಕಾರದ ಶಿಷ್ಠಾಚಾರದ ಪ್ರಕಾರ ವಿಲೇವಾರಿ ಮಾಡುವುದು. ಕೋವಿಡ್ ಕೇರ್ ಸೆಂಟರ್‍ನ ಕಟ್ಟಡ, ವರಾಂಡ ಹಾಗೂ ಶೌಚಾಲಯಗಳನ್ನು ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಲು ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರು ತಮ್ಮ ಅಡುಗೆ ಸಿಬ್ಬಂದಿ ಮೂಲಕ ದಾಖಲಾದ ಸೋಂಕಿತರಿಗೆ ರುಚಿಯಾದ ಪೌಷ್ಠಿಕ ಆಹಾರವನ್ನು ಸಿದ್ಧಪಡಿಸಿ ನೀಡುವುದು. ಆರೋಗ್ಯ ಇಲಾಖೆಯವರು ಮೂರು ಅವಧಿಗಳನ್ನಾಗಿ ವಿಂಗಡಿಸಿ ಕೆಲಸ ನಿರ್ವಹಿಸಲು ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುವುದು. ಹಾಗೂ ಉಪಚಾರಕ್ಕೆ ಬೇಕಾದ ಔಷಧಿ ಹಾಗೂ ಇತರೇ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸುವುದು. ಕಂದಾಯ ಇಲಾಖೆಯವರು ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗೆ ಅಡುಗೆ ತಯಾರಿಸಲು ಬೇಕಾದ ಆಹಾರ ಧಾನ್ಯಗಳನ್ನು ಪೂರೈಸುವುದು. ಪೊಲೀಸ್ ಇಲಾಖೆಯವರು ಸುರಕ್ಷತೆ ದೃಷ್ಟಿಯಿಂದ ನಿರಂತರವಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಮಲ್ಲಾಪೂರ ಪಿಜಿ ಕೋವಿಡ್ ಕೇರ್ ಸೆಂಟರ್ ಇರುವುದರ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಸೋಂಕಿತರನ್ನು ಈ ಕೇಂದ್ರಕ್ಕೆ ಕಳುಹಿಸುವ ಜವಾಬ್ದಾರಿ ನೀಡಿದರು.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ತಾಲೂಕಿಗೆ ಆಗಮಿಸುವ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಚಿಕಿತ್ಸೆಗೆ ಒಳಪಡಿಸುವುದು. ಜನರ ಜೀವ ಅಮೂಲ್ಯವಾದದ್ದು. ಅದನ್ನು ರಕ್ಷಿಸಿಕೊಳ್ಳುವತ್ತ ಸಾರ್ವಜನಿಕರು ಗಮನಹರಿಸಬೇಕು. ರೋಗದ ಲಕ್ಷಣಗಳು ಕಂಡುಬಂದಲ್ಲಿ ವಿಳಂಬಕ್ಕೆ ಅವಕಾಶವಿಲ್ಲದಂತೆ ಕೋವಿಡ್ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಸಾರ್ವಜನಿಕರು ಅನಗತ್ಯ ಓಡಾಟ ನಡೆಸದೇ ಮನೆಯಲ್ಲಿಯೇ ಸುರಕ್ಷಿತವಾಗಿರುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಆಗಾಗ ಕೈತೊಳೆದುಕೊಳ್ಳುವುದು. 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕೊರೋನಾ ವಿರುದ್ಧ ಸಮರಕ್ಕಾಗಿ ಸಿದ್ಧರಾಗಬೇಕು ಹಾಗೂ ಕೊರೋನಾ ಎರಡನೇ ಅಲೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಡಿವಾಯ್‍ಎಸ್‍ಪಿ ಜಾವೇದ ಇನಾಮದಾರ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್, ತಜ್ಞವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ಸಿಪಿಐಗಳಾದ ಸತೀಶ ಕಣಮೇಶ್ವರ, ಶ್ರೀಶೈಲ ಬ್ಯಾಕೂಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಯ್.ಎಂ. ಗುಜನಟ್ಟಿ, ಜಿಲ್ಲಾ ಸಮನ್ವಯಾಧಿಕಾರಿ ಆರ್.ಬಿ. ಗಂಗರಡ್ಡಿ, ಉಪತಹಶೀಲ್ದಾರರಾದ ಎಲ್.ಎಚ್. ಭೋವಿ, ಸಾಗರ ಕಟ್ಟಿಮನಿ, ತಾಪಂ ಸಹಾಯಕ ನಿರ್ದೇಶಕ ದೇಸಾಯಿ, ಮಲ್ಲಾಪೂರ ಪಿಜಿ ಮುಖ್ಯಾಧಿಕಾರಿ ಕೆ.ಬಿ. ಪಾಟೀಲ, ಪ್ರಾಚಾರ್ಯ ಕೆ.ಬಿ. ಬಾವಿಮನಿ, ಕಂದಾಯ ನಿರೀಕ್ಷಕ ಎಸ್.ಎನ್. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

13 + 7 =