Breaking News

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ

Spread the love

ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ

ಸಚಿವರು ಮದ, ಗರ್ವ, ಜಂಬ, ಅಹಂಕಾರಗಳನ್ನು ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ -ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಳಗ್ಗೆ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಮಾತನಾಡುತ್ತ, ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಬರಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುವುದಾಗಿ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳಕರ್, ನಾವು ನಮ್ಮ ಹರ್ಷಶುಗರ್ಸ್ ಆರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅಧಿಕೃತವಾಗಿಯೇ ಕುಕ್ಕರ್ ವಿತರಿಸಿದ್ದೇವೆ. ಇದಕ್ಕೆ ಎಲ್ಲ ಲೆಕ್ಕ ಹಾಗೂ ದಾಖಲೆ ಇದೆ. ಜಿಎಸ್ ಟಿಯನ್ನು ಕೂಡ ತುಂಬಿದ್ದೇವೆ. ರಮೇಶ ಜಾರಕಿಹೊಳಿ ತಮ್ಮ ದುಡ್ಡಿನಿಂದ ಕುಕ್ಕರ್ ವಿತರಿಸಿದ್ದರೆ ಅದಕ್ಕೆ ಸೂಕ್ತ ದಾಖಲೆ ಮತ್ತು ಲೆಕ್ಕ ಕೊಡಲಿ. ಈ ವಿಷಯ ನ್ಯಾಯಾಲಯದಲ್ಲಿದೆ. ಆ ಕುರಿತು ಮಾತನಾಡುವುದು ನ್ಯಾಯಾಂಗ ನಿಂದನೆಯಾಗಲಿದೆ. ನಾನು ಈಗಾಗಲೆ ಈ ಬಗ್ಗೆ ನಮ್ಮ ವಕಿಲರೊಂದಿಗೆ ಮಾತನಾಡಿದ್ದೇನೆ. ರಮೇಶ ಜಾರಕಿಹೊಳಿ ಹೇಳಿಕೆಯ ವೀಡಿಯೋ ಪೂರ್ಣ ಪರಿಶೀಲಿಸಿ, 2-3 ದಿನದಲ್ಲಿ ಬೆಂಗಳೂರಿಗೆ ತೆರಳಿ ಕಾನುನು ಕ್ರಮದ ಕುರಿತು ವಕೀಲರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಬರಲಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ತಾವು ದುಡ್ಡು ಹಂಚುವುದಾಗಿ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಈ ಕುರಿತು ವೀಡಿಯೋ ಸಾಕ್ಷಿಯೊಂದಿಗೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದೂ ಹೆಬ್ಬಾಳಕರ್ ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ತಾವು ಕ್ಯಾಬಿನೆಟ್ ಸಚಿವರಾದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎಂದು ತಿಳಿದಂತಿದೆ. ಗೋಕಾಕದ ಜನರು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವ ಕಾರಣಕ್ಕೆ ಇವರಿಗೆ ಮತ ನೀಡಿದ್ದಾರೆಯೇ ವಿನಃ ಇವರ ಮುಖ ನೋಡಿ ಮತ ಹಾಕಿಲ್ಲ. ಇನ್ನಾದರೂ ತಮ್ಮ ಮದ, ಗರ್ವ, ಜಂಬ, ಅಹಂಕಾರಗಳನ್ನು ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕ ಸಂಜಯ ಪಾಟೀಲ ಅವರಿಗೆ ಅನ್ಯಾಯವಾಗಿದೆ ಎಂದು ಹೋದಲ್ಲಿ ಬಂದಲ್ಲಿ ರಮಶ ಜಾರಕಿಹೊಳಿ ಹೇಳಿಕೆ ನೀಡುತ್ತಿದ್ದಾರೆ. ಹಾಗಾದಲ್ಲಿ  ಸುಮ್ಮನೆ ಜನರ ದುಕ್ಕು ತಪ್ಪಿಸುವ ಕೆಲಸ ಮಾಡುವ ಬದಲು ಸಂಜಯ ಪಾಟೀಲ ಅವರಿಗೆ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೊಡಿಸಿ, ಗೆಲ್ಲಿಸಿ ತರುತ್ತೇನೆ ಎಂದು ಘೋಷಿಸಲಿ. ಬಿಜೆಪಿ ಕಾರ್ಯಕರ್ತರು ಇವರ ಮಾತಿಗೆ, ಧ್ವಂದ್ವ ನಿಲುವಿಗೆ, ಒಡೆದು ಆಳುವ ನೀತಿಗೆ ಮರುಳಾಗದಿರಲಿ ಎಂದು ಹೆಬ್ಬಾಳಕರ್ ಹೇಳಿದ್ದಾರೆ.

ನಾನು ಕಿತ್ತೂರು ರಾಣಿ ವಂಶಸ್ಥೆ. ನನ್ನದು ಹೋರಾಟದ ರಾಜಕಾರಣ. ಠೊಳ್ಳು ಬೆದರಿಕೆಗಳಿಗೆಲ್ಲ ನಾನು ಹೆದರುವವಳಲ್ಲ. ನನ್ನ ಬೆಳಗಾವಿ ತಾಲೂಕಿನ ಸ್ವಾಭಿಮಾನಿ ಜನರಿಗೋಸ್ಕರ ನನ್ನ ಹೋರಾಟ ಮುಂದುವರಿಸುತ್ತೇನೆ. ಸಮಯ ಮತ್ತು ನನ್ನ ಆತ್ಮಸ್ಥೈರ್ಯ ಇವರಿಗೆ ತಕ್ಕ ಉತ್ತರ ನೀಡುತ್ತದೆ. ಸ್ವಾಭಿಮಾನಿ ಬೆಳಗಾವಿ ತಾಲೂಕನ್ನು ಇವರ ಕಪಿ ಮುಷ್ಠಿಯಲ್ಲಿ ಸಿಲುಕಲು ನಾನು ಅವಕಾಶ ಕೊಡುವುದಿಲ್ಲ ಎಂದೂ ಅವರು ತಿರುಗೇಟು ನೀಡಿದ್ದಾರೆ.

ಹೋದಲ್ಲೆಲ್ಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದುಡ್ಡು ಹಂಚುತ್ತೇನೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುತ್ತೇನೆ ಎನ್ನುತ್ತಿರುವ ರಮೇಶ ಜಾರಕಿಹೊಳಿ ಅವರ ಕಬ್ಬಿನ ಬಿಲ್ ಸಿಗದೆ ಬೆಳಗಾವಿ, ಕಿತ್ತೂರು, ಬೈಲಹೊಂಗಲ ತಾಲೂಕಿನ ರೈತರು ಸಾಯುತ್ತಿದ್ದಾರೆ. ಸಂತಿ ಬಸ್ತವಾಡ, ವಿರಕಿನಕೊಪ್ಪಗಳಲ್ಲಿ ಸೇರಿದಂತೆ ಅನೇಕ ಕಡೆ ರೈತರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಲಾ 5 ಲಕ್ಷ ರೂ. ಕೊಡಲಿ. ಮೊದಲು ಬಡ ರೈತರ ಬಾಕಿ ಹಣ ನೀಡಿ ನಂತರ ಚುನಾವಣೆಯಲ್ಲಿ ಹಣ ಹಂಚುವ ಮಾತನಾಡಲಿ. ಜನರು ದಡ್ಡರಲ್ಲ, ಇವರ ಎಲ್ಲ ಹೇಳಿಕೆ, ವರ್ತನೆಗಳನ್ನು ಗಮನಿಸುತ್ತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

five × three =