ಪ್ರವಾಹ ನಿರ್ವಹಣೆ ||ಮಾಹಿತಿ ವಿನಿಮಯ ಕುರಿತು ||ಮಹಾರಾಷ್ಟ್ರದ ಸಚಿವರ ಜತೆ ಚರ್ಚೆ|| ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ..!!
ಮಹಾರಾಷ್ಟ್ರ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ.
ಯುವ ಭಾರತ ಸುದ್ದಿ ಇಚಲಕರಂಜಿ: ಪ್ರವಾಹ ಸ್ಥಿತಿ ಉದ್ಭವಿಸದಂತೆ ತಡೆಗಟ್ಟುವುದು; ಜಲಾಶಯಗಳಿಂದ ನೀರು ಬಿಡುಗಡೆ ಹಾಗೂ ತುರ್ತು ಸಂದರ್ಭಗಳಲ್ಲಿ ನದಿತೀರದ ಗ್ರಾಮಗಳ ಜನರು ಮತ್ತು
ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವರಾದ ಶ್ರೀ ರಾಜೇಂದ್ರ ಪಾಟೀಲ್ ಎಡ್ರಾವಕರ್ ಅವರ ಜತೆ ಚರ್ಚೆ ನಡೆಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು, ಮಹಾರಾಷ್ಟ್ರದ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಅತಿವೃಷ್ಟಿ ಭೀತಿಯ ಈಚಲಕರಂಜಿ ಬಳಿಯ ಪಂಚಗಂಗಾ ನದಿ ಸೇತುವೆ ಪರಿಶೀಲಿಸಿದ ಸಚಿವರು, ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾದರೆ ನೀರು ಬಿಡುಗಡೆ ಮಾಡುವ ಮುಂಚೆ ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರ ಸಚಿವರಲ್ಲಿ ಮನವಿ ಮಾಡಿಕೊಂಡರು.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಉಭಯ ರಾಜ್ಯಗಳ ಸಚಿವರು ಮತ್ತು ನೀರಾವರಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿರುವಂತೆ ನೀರು ಬಿಡುಗಡೆ ಕುರಿತು ನಿರಂತರವಾಗಿ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.
ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದರಲ್ಲದೇ ಬಹಳಷ್ಟು ಹಾನಿ ಉಂಟಾಗಿತ್ತು. ಆದ್ದರಿಂದ ಈ ಬಾರಿ ಕರ್ನಾಟಕ ಸರ್ಕಾರದ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿರುತ್ತದೆ. ಮಳೆಯ ಪ್ರಮಾಣ, ಜಲಾಶಯಗಳ ಮಟ್ಟ ಮತ್ತು ನೀರು ಬಿಡುಗಡೆಗೆ ಕುರಿತು ಎರಡೂ ರಾಜ್ಯಗಳು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರದ ಆರೋಗ್ಯ ಸಚಿವರಾದ ಶ್ರೀ ರಾಜೇಂದ್ರ ಪಾಟೀಲ್ ಎಡ್ರಾವಕರ್ ಅವರು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಸಚಿವರ ಜತೆ ಚರ್ಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರಾದ *ರಮೇಶ್ ಜಾರಕಿಜೊಳಿ* ಅವರು ಚಿಕ್ಕೋಡಿ ತಾಲ್ಲೂಕಿನ *ಮಾಂಜ್ರ ಸೇತುವೆ* ಬಳಿ ಕೃಷ್ಣಾ ನದಿ ನೀರಿನ ಹರಿವು ಪರಿಶೀಲಿಸಿದರು.
ನಂತರ ಅಂಕಲಿ, ಯಡೂರ ಗ್ರಾಮದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಇದೇ ವೇಳೆ ಎನ್.ಡಿ.ಆರ್.ಎಫ್. ತಂಡದ ಜತೆ ಬೋಟ್ ನಲ್ಲಿ ಸಂಚರಿಸಿ ತುರ್ತು ಪರಿಸ್ಥಿತಿ ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಖುದ್ದಾಗಿ ಮಾಹಿತಿಯನ್ನು ಪಡೆದುಕೊಂಡರು.
ಕಲ್ಲೋಳ-ಯಡೂರ ಬ್ಯಾರೇಜ್, ಶಮನೇವಾಡಿ ಸೇತುವೆ ಸೇರಿದಂತೆ ವಿವಿಧ ಕಡೆ ಸಚಿವರು ಭೇಟಿ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, “ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ. ಆದ್ದರಿಂದ ನದಿತೀರದ ಗ್ರಾಮಸ್ಥರು ಆತಂಕಪಡಬೇಕಿಲ್ಲ” ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದ ಜತೆ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಚಿವರು ಹೇಳಿದರು.