ಕಡಬ: ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ
ಯುವ ಭಾರತ ಸುದ್ದಿ ಮಂಗಳೂರು :
ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಗುರುವಾರ ಕಡಬ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಎಡಮಂಗಲ ಸಮೀಪದ ಇಡ್ಯಡ್ಕ ಎಂಬಲ್ಲಿ ನಡೆದಿದೆ.
ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರಾಗಿದ್ದ ಕಾಂತು ಅಜಿಲ ಮೂಲಂಗೀರಿಯವರು ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಾರ್ಚ್ 30 ರಂದು ಗುರುವಾರ ಎಡಮಂಗಲ ಸಮೀಪ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೋತ್ಸವದಲ್ಲಿ ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಿಲ್ಲ ಎಂದು ಹೇಳಲಾಗಿದೆ.
ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಅವರು ಹೃದಯಾಘಾತಕ್ಕೆ ಒಳಗಾಗಿರಬಹುದೆಂದು ಶಂಕಿಸಲಾಗಿದೆ. ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕಾಂತು ಅಜಿಲ ಮೂಲಂಗೀರಿಯವರು ಎಡಮಂಗಲ ಪರಿಸರದಲ್ಲಿ ಮತ್ತು ಇತರ ಕಡೆಗಳಲ್ಲಿಯೂ ದೊಡ್ಡ ದೊಡ್ಡ ದೈವಗಳ ನರ್ತನ ಸೇವೆಯನ್ನು ಮಾಡುತ್ತಿದ್ದರು.