Breaking News

ಜಾರಿಯಾಯ್ತು ನೀತಿ ಸಂಹಿತೆ : ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿ ಸುಳ್ಳು ಸುದ್ದಿ ಹಾಕಿದರೆ ಅಡ್ಮಿನ್‌ ಹೊಣೆ !

Spread the love

ಜಾರಿಯಾಯ್ತು ನೀತಿ ಸಂಹಿತೆ : ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿ ಸುಳ್ಳು ಸುದ್ದಿ ಹಾಕಿದರೆ ಅಡ್ಮಿನ್‌ ಹೊಣೆ !

ಯುವ ಭಾರತ ಸುದ್ದಿ ಹೊಸಪೇಟೆ :
ಜಿಲ್ಲೆಯಾದ್ಯಂತ ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆಯೂ ವಿಶೇಷ ನಿಗಾ ವಹಿಸಲಾಗುವುದು. ವಾಟ್ಸ್ಯಾಪ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿ ಸುಳ್ಳು ಸುದ್ದಿ ಹಾಕಿದರೆ ಅದಕ್ಕೆ ಅದರ ಅಡ್ಮಿನ್‌ ರನ್ನು ಹೊಣೆಗಾರರಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಸುದ್ದಿ, ಸುಳ್ಳು ಸಮೀಕ್ಷೆಗಳನ್ನು ನಡೆಸುವ, ಸೋಷಿಯಲ್‌ ಮೀಡಿಯಾದಲ್ಲಿ ಯಾರೇ ಸುಳ್ಳು ಸುದ್ದಿ ಹರಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇದರ ಮೇಲೆ ನಿಗಾ ಇಡುವುದಕ್ಕಾಗಿಯೇ ಒಂದು ತಂಡ ರಚಿಸಲಾಗಿದೆ ಎಂದು ಹೇಳಿದರು.

ಎಲ್ಲ 23 ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಂಟ್ರೋಲ್‌ ರೂಂನಲ್ಲಿ ಕುಳಿತು ಅಲ್ಲಿನ ನೇರ ದೃಶ್ಯಾವಳಿ ನೋಡಬಹುದು. ಜಿಲ್ಲಾಧಿಕಾರಿ, ಎಸ್ಪಿಯವರ ಮೊಬೈಲ್‌ಗೂ ಸಂಪರ್ಕ ಕಲ್ಪಿಸಲಾಗಿದ್ದು, ಇಬ್ಬರೂ ನೋಡಬಹುದು. ಮತದಾರರಿಗೆ ಆಮಿಷವೊಡ್ಡುವ ಉಡುಗೊರೆಗಳ ಮೇಲೆ ಪಕ್ಷದ ಅಭ್ಯರ್ಥಿಗಳ ಹೆಸರು, ಭಾವಚಿತ್ರ ಅಥವಾ ಚಿಹ್ನೆ ಇದ್ದರೆ ಸಂಬಂಧಿಸಿದವರ ವಿರುದ್ಧ ಕೇಸ್‌ ದಾಖಲಿಸಲಾಗುವುದು ಎಂದು ತಿಳಿಸಿದರು.

ಯಾರ್‍ಯಾರ ಬಳಿ ಅನುಮತಿ ಪಡೆದ ಶಸ್ತ್ರಾಸ್ತ್ರಗಳಿವೆಯೋ ಅವರು ತಂದು ಠೇವಣಿ ಇರಿಸಬೇಕು. ಜಿಲ್ಲೆಯಲ್ಲಿ 643 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿವೆ. ಬ್ಯಾಂಕು ಸೇರಿದಂತೆ ಅಗತ್ಯ ಇರುವವರಿಗೆ ಮಾತ್ರ ಬಳಕೆಗೆ ಅನುಮತಿ ಕೊಡಲಾಗುವುದು. ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದರೆ ವಶಪಡಿಸಿಕೊಳ್ಳಲಾಗುವುದು. ಅನುಮತಿ ಇಲ್ಲದೆ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸುವಂತಿಲ್ಲ. ಪ್ರಚಾರವೂ ನಡೆಸುವಂತಿಲ್ಲ ಎಂದರು.

ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಯಾವುದೇ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮದುವೆ ಸಮಾರಂಭಗಳಲ್ಲಿ ಭಾಗವಹಿಸಬಹುದು. ಆದರೆ, ಮತಯಾಚನೆ ಮಾಡುವಂತಿಲ್ಲ. ರಾಜಕಾರಣಿಗಳಿಗೆ ಒದಗಿಸಿದ್ದ ಸರ್ಕಾರಿ ಕಾರುಗಳನ್ನು ವಾಪಸ್‌ ಪಡೆಯಲಾಗಿದೆ. ಅವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಸರ್ಕಾರಿ, ಅನುದಾನಿತ ಸಮುದಾಯ ಭವನ, ಅತಿಥಿ ಗೃಹಗಳನ್ನು ಷರತ್ತು ಹಾಕಿ ಕೊಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಹೋಟೆಲ್‌, ಕಲ್ಯಾಣ ಮಂಟಪ, ಟೂರಿಸ್ಟ್‌ ಏಜೆಂಟ್‌ಗಳಿಂದ ಹೊರಗಿನಿಂದ ಬಂದು ಹೋಗುವವರ ಮಾಹಿತಿ ನಿತ್ಯ ಸಂಗ್ರಹಿಸಲಾಗುತ್ತಿದೆ. ಚಿನ್ನಾಭರಣ, ವಾಣಿಜ್ಯ ಮಳಿಗೆಗಳಲ್ಲಿ ನಿತ್ಯ ನಡೆಯುವ ವ್ಯವಹಾರ, ಗೋದಾಮುಗಳ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 × 2 =