ಕಿತ್ತೂರು : 10 ಕೋಟಿ ವೆಚ್ಚದ ಸಭಾಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ರಾಜ್ಯ ಸರ್ಕಾರದಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಜೀವಕಳೆ ತುಂಬಿದ್ದು ಕಿತ್ತೂರಿಗರ ಬಹುದಿನಗಳ ನಿರೀಕ್ಷೆಯ ಭವ್ಯ ಕಲಾಮಂಟಪವೊಂದು ಪ್ರಾಧಿಕಾರದಡಿಯಲ್ಲಿ ತಲೆ ಎತ್ತಲಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಪ್ರಾಧಿಕಾರದಡಿಯಲ್ಲಿ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಚೌಕಿಮಠದ ಬಳಿ ರೂ. 10 ಕೋಟಿಯ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸಭಾಮಂಟಪಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಮಂಟಪ ನಿರ್ಮಾಣ ಇಲ್ಲಿಯ 75 ವರ್ಷಗಳ ಕನಸಾಗಿತ್ತು, ಈ ಕನಸಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಪ್ರಾಧಿಕಾರದಡಿಯಲ್ಲಿ ಅನುದಾನ ನೀಡಿದೆ, ಅಲ್ಲದೆ ಈ ಸಭಾ ಮಂಟಪಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ 2 ಎಕರೆ ಭೂಮಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜಿಸಿದ್ದಾರೆ ಎಂದು ಹೇಳಿದರು.
ರಾಣಿ ಚನ್ನಮ್ಮಾಜಿಯ ನೂತನ ಕೋಟೆಯ ನಿರ್ಮಾಣಕ್ಕಾಗಿ ಹಾಗೂ ಈಗೀರುವ ಕೋಟೆಯ ನವೀಕರಣಕ್ಕಾಗಿ ರಾಜ್ಯ ಸರ್ಕಾರ ವಿಶೇಷವಾಗಿ ಅನುದಾನ ನೀಡಿದೆ, ಮುಂಬರುವ ದಿನಗಳಲ್ಲಿ ಕಿತ್ತೂರು ಕೋಟೆಯೂ ಇಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ ಅವರು, ನ್ಯಾಯಾಲಯದ ಕಟ್ಟಡ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಚನ್ನವೇಷಬೇಂದ್ರ ಏತ ನೀರಾವರಿ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುಮತಿ ನೀಡಿದ್ದು ಇದೀಗ ಟೆಂಡರ್ ಪ್ರಕ್ರಿಯೆಯ ಹಂತವನ್ನು ತಲುಪಿವೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಗುರುವಾರ ಪೇಟೆಯಲ್ಲಿ ತುರ್ತು ಚಿಕಿತ್ಸೆಗಾಗಿ ನೂತನ ಆಸ್ಪತ್ರೆಗೆ ಸರ್ಕಾರ ಸಮ್ಮತಿ ನೀಡಿದೆ, ಹಾಗೂ ಈಗೀರುವ 30 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಕೆಲವರಲ್ಲಿ ಈ ಕುರಿತು ತಪ್ಪು ಮನೋಭಾವನೆ ಇದೆ ಎಂದು ಹೇಳಿದ ಅವರು ತಾಲೂಕಿಗೆ ಅವಶ್ಯವಿರುವ 100 ಹಾಸಿಗೆ ಆಸ್ಪತ್ರೆಯ ನಿರ್ಮಾಣಕ್ಕೆ ಜಾಗೆ ಗುರುತಿಸಲಾಗಿದ್ದು ಅದು ಅಲ್ಲಿಯೇ ತಲೆ ಎತ್ತಲಿದೆ ಎಂದು ಸ್ಪಷ್ಟ ಪಡಿಸಿದರು.
ಬಜೆಟ್ ಕುರಿತು ಮಾತನಾಡಿದ ಶಾಸಕ ದೊಡ್ಡಗೌಡರ, ಅಭಿವೃದ್ಧಿ ಪರ ಹಾಗೂ ಬಡಜನರ ಪರವಾಗಿರುವ ಬಜೆಟ್ ಸಿಎಂ ಬೊಮ್ಮಾಯಿ ಮಂಡಿಸಿದ್ದಾರೆ, ರೈತರಿಗೆ ಅನುಕೂಲ ಕಲ್ಪಿಸಲು 5 ಲಕ್ಷದವರೆಗೆ ಶೂನ್ಯ ಬಡ್ಡಿದರ, ಶಾಲೆಯ ಮಕ್ಕಳಿಗೆ ಉಚಿತ ಬಸ್ ಪಾಸ, ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲಿದ್ದಾರೆ ಎಂದು ಹೇಳಿದ ಅವರು, 7 ಜಿಲ್ಲೆಗಳನ್ನು ಒಳಗೊಂಡು ರೂಪುಗೊಳ್ಳುತ್ತಿರುವ ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಚುರುಕು ನೀಡುವ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ ರಚಿಸುವ ಘೋಷಣೆಯಾಗಿದ್ದು ಕಿತ್ತೂರು ಕರ್ನಾಟಕವೂ ಸಹ ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಡಿಯಲ್ಲಿ ನೂರಾರು ಕೋಟಿಯ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತಿವೆ, ಸಾರ್ವಜನಿಕರ ಸ್ಪಂದನೆ ಹಾಗೂ ಸಹಕಾರ ಇನ್ನಷ್ಟು ಅಭಿವೃದ್ಧಿ ಮಾಡಲು ನಮ್ಮಲ್ಲಿ ಹುರುಪು ತುಂಬುತ್ತದೆ ಕಾರಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿಕೊಂಡ ಅವರು, ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಕಾಂಗ್ರೆಸ್ ಕಿವಿಯಲ್ಲಿ ಹೂ ಇಟ್ಟುಕೊಂಡಿದ್ದರು, ಬಿಜೆಪಿ ಹೂವಿನ ಚಿನ್ಹೆಯ ಪಕ್ಷ ಇದರಿಂದ ಬಿಜೆಪಿ ಮಂಡಿಸಿರುವ ಬಜೆಟಗೆ ಕಾಂಗ್ರೆಸ್ ಹೂ ಹಿಡಿಯುವ ಮೂಲಕ ಬಿಜೆಪಿಯನ್ನು ಹಾಗೂ ಮಂಡಿಸಿರುವ ಬಜೆಟ್ ಅನ್ನು ಬೆಂಬಲಿಸಿದೆ ಎಂದು ಕಾಂಗ್ರಸ್ ಪಕ್ಷದವರ ಕಾಲೆಳೆದರು.
ಇದಕ್ಕೂ ಮೊದಲು ರಾಜಗುರು ಶ್ರೀ ಮಠದ ವತಿಯಿಂದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಸತ್ಕರಿಸಲಾಯಿತು.
ನೂತನ ಸಭಾ ಮಂಟಪದ ಭೂಮಿ ಪೂಜೆಯ ಸಂದರ್ಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಪ್ರಾಧಿಕಾರದ ಆಯುಕ್ತರಾದ ಪ್ರಭಾವತಿ, ಪಿಡಬ್ಲೂಡಿ ಅಧಿಕಾರಿಗಳಾದ ಎಸ್.ಎಸ್. ಸೊಬ್ರದ, ಪ್ರವೀಣ ಹುಲಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಮಹಿಳಾ ಮಂಡಳ ಅಧ್ಯಕ್ಷೆ ಉಮಾದೇವಿ ಬಿಕ್ಕಣ್ಣವರ, ಹಿರಿಯರಾದ ಚನ್ನಬಸಪ್ಪ ಮೊಕಾಶಿ, ನಿಜಲಿಂಗಯ್ಯಾ ಹಿರೇಮಠ, ಕಸಾಪ ತಾಲೂಕಾಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಸರಸ್ವತಿ ಹೈಬತ್ತಿ, ಸುಭಾಷ ರಾವಳ ಸೇರಿದಂತೆ ಇತರರು ಇದ್ದರು.