Breaking News

ತ್ರಿಪುರಾ, ನಾಗಾಲ್ಯಾಂಡ್‌ ನಲ್ಲಿ ಬಿಜೆಪಿ-ಮಿತ್ರಪಕ್ಷಕ್ಕೆ ಬಹುಮತ, ಮೇಘಾಲಯದಲ್ಲಿ ಅತಂತ್ರ !

Spread the love

ತ್ರಿಪುರಾ, ನಾಗಾಲ್ಯಾಂಡ್‌ ನಲ್ಲಿ ಬಿಜೆಪಿ-ಮಿತ್ರಪಕ್ಷಕ್ಕೆ ಬಹುಮತ, ಮೇಘಾಲಯದಲ್ಲಿ ಅತಂತ್ರ !

ಯುವ ಭಾರತ ಸುದ್ದಿ ನವದೆಹಲಿ:
ಇಂದು ಗುರುವಾರ ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣೆಯ ಮತ ಎಣಿಕೆ ನಡೆದಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಬಹುಮತದತ್ತ ಮುನ್ನಡೆಯುತ್ತಿದ್ದರೆ ಮೇಘಾಲಯವು ಅತಂತ್ರ ವಿಧಾನಸಭೆ ಕಡೆಗೆ ಹೋಗುತ್ತಿದೆ. ಮೇಘಾಲಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತಕ್ಕಿಂತ ಹಿಂದೆ ಬಿದ್ದಿದೆ.
ತ್ರಿಪುರಾದ 60 ಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಐಪಿಎಫ್‌ಟಿ ಮೈತ್ರಿಕೂಟ (ಇಂಡಿಜಿನಸ್ ಪ್ರೋಗ್ರೆಸ್ಸಿವ್ ಫ್ರಂಟ್ ಆಫ್ ತ್ರಿಪುರ) 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಲ್ಲಿ 31 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಈ ರಾಜ್ಯದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹಾಗೂ ಐಪಿಎಫ್‌ಟಿ ಎಂಟು ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಅದಕ್ಕೆ ಹೋಲಿಸಿದರೆ ಮೈತ್ರಿಕೂಟದ ಸಂಖ್ಯೆ 11ರಷ್ಟು ಕಡಿಮೆಯಾಗಿದೆ. ಆದರೆ ಬಹುಮತ ಪಡೆಯುವತ್ತ ಸಾಗಿದೆ.

35 ವರ್ಷಗಳ ಕಾಲ ತ್ರಿಪುರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳು ಮತ್ತು ಅದರ ಹೊಸ ಮಿತ್ರ ಪಕ್ಷ ಕಾಂಗ್ರೆಸ್ ಮೈತ್ರಿಕೂಟ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇವೆರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೂ ಇವೆಡರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ 2018ರ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಗಿಂತ ಎರಡು ಸ್ಥಾನಗಳು ಕಡಿಮೆಯಾಗಿವೆ.
ಇದೇ ಮೊದಲ ಬಾರಿಗೆ ಕಣಕ್ಕಿಳಿದ ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೇಬ್‌ವರ್ಮಾ ಅವರ ತಿಪ್ರಾ ಮೋಥಾ ಪಕ್ಷವು 13 ಸ್ಥಾನಗಳಲ್ಲಿ ಗೆದ್ದಿದೆ. ಗ್ರೇಟರ್‌ ತ್ರಿಪುರಕ್ಕಾಗಿ ಒತ್ತಾಯಿಸುತ್ತಿರುವ ಪಕ್ಷವು ಐಪಿಎಫ್‌ಟಿ ಪಕ್ಷದ ಬುಡಕಟ್ಟು ವೋಟ್‌ ಬ್ಯಾಂಕಿಗೆ ದೊಡ್ಡ ಹೊಡೆತ ನೀಡಿದೆ. ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟದ 11 ಸ್ಥಾನಗಳು ಕಡಿಮೆಯಾಗಿರುವುದಕ್ಕೆ ಈ ಪಕ್ಷವೇ ಮುಖ್ಯ ಕಾರಣವಾಗಿದೆ. ವಿಶೇಷವಾಗಿ ಬುಡಕಟ್ಟು ಮತಗಳನ್ನು ಸೆಳೆಯಲು ಯಶಸ್ವಿಯಾಗಿದೆ.

 

 

ಮೇಘಾಲಯದಲ್ಲಿ ಅತಂತ್ರ….
ಮೇಘಾಲಯದಲ್ಲಿ ಬಿಜೆಪಿಯೊಂದಿಗೆ ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ರಾಜ್ಯದ 60 ಸ್ಥಾನಗಳ ಪೈಕಿ ಅದು 25ರಲ್ಲಿ 23ರಲ್ಲಿ ಗೆಲುವು ಸಾಧಿಸಿದೆ ಹಾಗೂ ಎರಡರಲ್ಲಿ ಮುನ್ನಡೆ ಪಡೆದಿದೆ. ಆದರೆ ಸರಳ ಬಹುಮತಕ್ಕೆ ಇನ್ನೂ ಆರು ಸ್ಥಾನಗಳು ಬೇಕಾಗುತ್ತದೆ.
ಬಿಜೆಪಿ ಮೂರು ಸ್ಥಾನಗಳಲ್ಲಿ ಗೆದ್ದು ಒಂದು ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಕಾನ್ರಾಡ್‌ ಸಂಗ್ಮಾ ಅವರು ಚುನಾವಣೋತ್ತರ ಮೈತ್ರಿಗಾಗಿ ಮಾತುಕತೆ ನಡೆಸುತ್ತಿದ್ದಾರೆ. ನಿನ್ನೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಸಭೆ ಕೂಡ ನಡೆದಿದೆ. ಆದರೂ ಉಭಯ ನಾಯಕರು, ಇದೊಂದು ಸೌಹಾರ್ದಯುತ ಭೇಟಿ ಎಂದಷ್ಟೇ ಹೇಳಿದ್ದಾರೆ. ನಾವು ಅಂತಿಮ ಫಲಿತಾಂಶದ ವರೆಗೆ ಕಾಯುತ್ತೇವೆ ಮತ್ತು ನಂತರ ಹೇಗೆ ಮುಂದುವರಿಯಬೇಕೆಂದು ನಿರ್ಧರಿಸುತ್ತೇವೆ ಎಂದು ಸಂಗ್ಮಾ ಸುದ್ದಿಗಾರರಿಗೆ ತಿಳಿಸಿದರು.
ಮೇಘಾಲಯದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಎಕ್ಸಿಟ್ ಪೋಲ್ ಭವಿಷ್ಯವನ್ನು ಸುಳ್ಳಾಗಿಸಿ ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮಿತ್ರಕೂಟಕ್ಕೆ ಬಹುಮತ…
ನಾಗಾಲ್ಯಾಂಡ್‌ನ ವಿಧಾನಸಭೆಯ 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) 36 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮೈತ್ರಿಕೂಟ ಕಳೆದ ಬಾರಿಗಿಂತ ಎಂಟು ಸ್ಥಾನಗಳನ್ನು ಹೆಚ್ಚು ಪಡೆದಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಎನ್‌ಡಿಪಿಪಿ ಪಕ್ಷದಿಂದ ಗೆಲುವು ಸಾಧಿಸಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಉಳಿದಂತೆ ಎನ್‌ಪಿಎಫ್‌ 2 ಸ್ಥಾನಗಳಲ್ಲಿ ಹಾಗೂ ಇತರರು 21 ಸ್ಥಾನಗಳಲ್ಲಿ ಮುಂದಿದ್ದಾರೆ ಅಥವಾ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಸಾಧನೆ ಮಾತ್ರ ಶೂನ್ಯ ಸಂಪಾದನೆಯಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

sixteen − eleven =