ಘಟ್ಟಿ ಬಸವಣ್ಣ ಯೋಜನೆಗೆ ಶಾಸಕರ ಮುತುವರ್ಜಿ : ನೀರಾವರಿ ಸಮಸ್ಯೆಯಿಂದ ಮುಕ್ತವಾದ ಗೋಕಾಕ ತಾಲೂಕು
ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ತಾಲೂಕಿನ ನೀರಾವರಿ ಸಮಸ್ಯೆಗೆ ಶಾಶ್ವತವಾಗಿ ಇತಿಶ್ರೀ ಹಾಡಿದ ಶ್ರೇಯಸ್ಸು ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ.
ರಮೇಶ ಜಾರಕಿಹೊಳಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಕ್ಷೇತ್ರದಲ್ಲಿ ನೀರಾವರಿ ಕ್ಷೇತ್ರ ಬಹಳ ಕಡಿಮೆ ಇತ್ತು. ಆದರೆ, ಇದೀಗ ಶೇಕಡಾ 95 ರಷ್ಟು ಭಾಗ ನೀರಾವರಿ ಸೌಲಭ್ಯ ಪಡೆದುಕೊಂಡಿದೆ. ಅವರ ನೀರಾವರಿ ಮೇಲಿನ ಪ್ರೀತಿ ಎನ್ನಬಹುದು. ಗೋಕಾಕ ಜನರನ್ನು ಕಾಡುತ್ತಿದ್ದ ನೀರಿನ ಸಮಸ್ಯೆ ಇದೀಗ ದೂರವಾಗಿದೆ. ಇದೀಗ ಶಾಸಕ ರಮೇಶ ಜಾರಕಿಹೊಳಿ ಅವರ ಪರಿಶ್ರಮದ ಮೂಲಕ ಗೋಕಾಕ ತಾಲೂಕಿನ ಯೋಗಿಕೊಳ್ಳ ರಸ್ತೆಯ ಮಾರ್ಕಂಡೇಯ ನದಿಗೆ ಅಡ್ಡಲಾಗಿ 969 ಕೋಟಿ ರೂಪಾಯಿ ವೆಚ್ಚದಲ್ಲಿ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ, ಹಾಗೂ ಅಡಿಗಲ್ಲು ಸಮಾರಂಭ ನೆರವೇರುತ್ತಿದೆ. ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ 6.00 ಟಿಎಂಸಿ ನೀರನ್ನು ಶೇಖರಣೆ ಮಾಡಿ ಗೋಕಾಕ ಮತ್ತು ಸುತ್ತಲಿನ 131 ಗ್ರಾಮಗಳಿಗೆ ಹಾಗೂ ಹುಕ್ಕೇರಿ, ಬೈಲಹೊಂಗಲ, ಸವದತ್ತಿ ತಾಲೂಕಿನ ಭಾಗಶಃ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಲ್ಲದೇ ಗೋಕಾಕ ತಾಲೂಕಿನ ಸುತ್ತಮುತ್ತಲಿನ ಆಯ್ದ ಕೆರೆಗಳನ್ನು ತುಂಬಿಸಲು ಅನುಕೂಲವಾಗುತ್ತದೆ. ಜೊತೆಗೆ ಕಾರ್ಖಾನೆಗಳಿಗೆ ನೀರನ್ನು ಒದಗಿಸಲು ಮತ್ತು ಗೋಕಾಕ ಪಟ್ಟಣವನ್ನು ಮಾರ್ಕಂಡೇಯಾ ನದಿ ಪ್ರವಾಹದಿಂದ ರಕ್ಷಿಸುವ ಅತ್ಯಂತ ಮಹತ್ವದ ಯೋಜನೆ ಇದಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮ ಯೋಗಿಕೊಳ್ಳ ರಸ್ತೆ ಘಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಾರ್ಚ್ 1 ರಂದು ಬೆಳಗ್ಗೆ 9 ಕ್ಕೆ ನಡೆಯಲಿದೆ. ಈ ಕಾಮಗಾರಿಗೆ ಸಂಬಂಧಪಟ್ಟಂತೆ ಅಣೆಕಟ್ಟಿನ ಉದ್ದ 427.50 ಮೀಟರ್ ಇರಲಿದೆ. 86.50 ಮೀಟರ್ ಅಣೆಕಟ್ಟು ಎತ್ತರ ಇದ್ದು ಸ್ಟೀಲ್ ಗೇಟ್ ಗಳ ಸಂಖ್ಯೆ ಆರು ಇರಲಿದೆ.
ಒಟ್ಟಾರೆ ಗೋಕಾಕ ಸೇರಿದಂತೆ ಸುತ್ತಮುತ್ತಲ ತಾಲೂಕುಗಳಲ್ಲಿ ರಮೇಶ ಜಾರಕಿಹೊಳಿಯವರ ಈ ದೊಡ್ಡ ಪ್ರಯತ್ನ ನೀರಾವರಿಗೆ ಶಾಶ್ವತವಾದ ಪರಿಹಾರ ಒದಗಿಸಲಿದೆ. ಮುಂದಿನ ದಿನಗಳಲ್ಲಿ ಈ ಭಾಗ ಹಚ್ಚಹಸುರಾಗಿ ವಸುಂಧರೆ ಮತ್ತಷ್ಟು ಕಂಗೊಳಿಸುವುದರಲ್ಲಿ ಯಾವ ಸಂದೇಹ ಇಲ್ಲ. ಜೊತೆಗೆ ರೈತರ ಕೃಷಿ ಸೇರಿದಂತೆ ಇತರ ಚಟುವಟಿಕೆಗಳಿಗೂ ದೊಡ್ಡ ಪ್ರಮಾಣದಲ್ಲಿ ಲಾಭವಾಗುವುದರಲ್ಲಿ ಅನುಮಾನವಿಲ್ಲ. ಗೋಕಾಕ ಶಾಸಕರ ನೀರಾವರಿ ಮೇಲಿನ ಕಾಳಜಿ ಇಡೀ ಕ್ಷೇತ್ರವನ್ನು ನೀರಾವರಿಯಿಂದ ಶಾಶ್ವತವಾಗಿ ಪಾರು ಮಾಡಿದಂತಾಗಿದೆ.