ಚುನಾವಣೆ ಹಿನ್ನೆಲೆಯಲ್ಲಿ ಚುರುಕುಗೊಂಡ ಕಾರ್ಯಾಚರಣೆ : ಅಪಾರ ಹಣ ವಶ
ಯುವ ಭಾರತ ಸುದ್ದಿ ಬೆಳಗಾವಿ :
ಚುನಾವಣೆ ಘೋಷಣೆ ಬೆನ್ನಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಅಧಿಕಾರಿ ವರ್ಗವು ಚುರುಕು ಆಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ 70 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಬುಧವಾರ ಸಂಜೆ ನಡೆದಿದ್ದು, ಈ ಬಗ್ಗೆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಕರ್ನಾಟಕದ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾಗವಾಡ ಮತ್ತು ಮೀರಜ ಚೆಕ್ ಪೋಸ್ಟ್ ಬಳಿಯಲ್ಲಿ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಮಿರಜದಿಂದ ಇಂಡಿಕಾ ಕಾರಿನಲ್ಲಿ ದಾಖಲೆ ಇಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಸಾಗಿಸುತ್ತಿದ ಹಣವನ್ನು ಚೆಕ್ ಪೊಸ್ಟ್‍ನಲ್ಲಿ ಅಧಿಕಾರಿ ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿ ಇರಿಸಲಾಗಿದ್ದ ಬ್ಯಾಗನಲ್ಲಿ 70 ಲಕ್ಷ ಹಣ ತುಂಬಿಕೊಂಡು ಸಾಗಿಸುತ್ತಿದ್ದ ಹಣ ದೊರೆತಿದೆ. ಹಣ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಾಗಾಟ ಮಾಡುತ್ತಿದ್ದ 70 ಲಕ್ಷ ಹಣದ ಮೂಲವನ್ನು ಕಾಗವಾಡ ಪೊಲೀಸರು ಹುಡುಕುತ್ತಿದ್ದಾರೆ. ಖಾಸಗಿ ಬ್ಯಾಂಕ್‍ಗೆ ಸೇರಿದ ಈ ಹಣವು ಎಂದು ಮಾಹಿತಿ ಲಭ್ಯವಾಗಿದ್ದು, ಆದರೆ ಯಾವದೇ ದಾಖಲಾತಿಗಳು ದೊರೆತಿರುವುದಿಲ್ಲ ಎನ್ನಲಾಗಿದೆ. ಈ ಕುರಿತು ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರೂಗೇರಿಯಲ್ಲಿ 2.30 ಲಕ್ಷ ಅಕ್ರಮ ಹಣ ಪತ್ತೆ :
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ 30 ಸಾವಿರ ಹಣ ಹಾರೊಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೂಗೇರಿ ಕ್ರಾಸ್‍ನಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿಯಲ್ಲಿ ಈ ಹಣ ಸೀಜ್ ಮಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.