ಕನ್ನಡ ಸಾಹಿತ್ಯ ಪರಿಷತ್ತಿನ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಹಾಗೂ ಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ದತ್ತಿ ಪ್ರಕಟ
ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ತು ೨೦೨೦, ೨೦೨೧ ಹಾಗೂ ೨೦೨೨ ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ೨೦೨೨ನೆಯ ಸಾಲಿನ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್.ಇಂದಿರಾ ದತ್ತಿʼ ಪ್ರಶಸ್ತಿ ಪ್ರಕಟಿಸಲಾಗಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೦ನೇ ಸಾಲಿನ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ಬಸವರಾಜ ಪಾಟೀಲ ಸೇಡಂ ಅವರು ಆಯ್ಕೆಯಾಗಿದ್ದಾರೆ. ೨೦೨೧ ನೇ ಸಾಲಿನ ಪ್ರಶಸ್ತಿಗಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಬೆಂಗಳೂರಿನ ʻಸಂಧ್ಯಾ ದೀಪ ಸಂಸ್ಥೆʼಆಯ್ಕೆಯಾಗಿದೆ. ೨೦೨೨ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಧಾರವಾಡದ ಬಸವರಾಜ ಸಾದರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದ ಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ದತ್ತಿʼ ಪ್ರಶಸ್ತಿಯನ್ನು ೨೦೨೨ನೇ ಸಾಲಿನ ಪ್ರಶಸ್ತಿಗೆ ʻಬೆಳ್ಳಿ ಸೀಮೆಯ ರೈಲ್ವೆ ಸ್ಟೇಷನ್ʼ ಎನ್ನುವ ಕಾದಂಬರಿ ರಚಿಸಿದ ಲೇಖಕಿ ʻಉಡುಪಿಯ ಸೌಮ್ಯ ಪುತ್ರನ್ʼ ಅವರು ಆಯ್ಕೆಯಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.