ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಹಕ್ಕುಗಳ ರಕ್ಷಣೆಗೆ ಸಮುದಾಯದ ಸಹಕಾರ ಅಗತ್ಯ: ಕೆ.ನಾಗಣ್ಣಗೌಡ
ಯುವ ಭಾರತ ಸುದ್ದಿ ಬೆಳಗಾವಿ :
ಲೈಂಗಿಕ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ ಸೇರಿದಂತೆ ವಿವಿಧ ಬಗೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರಲು ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ(ಜ.18) ನಡೆದ ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ. ಕಾಯ್ದೆ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗಿದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವು ಶಾಲೆಗಳಲ್ಲಿ ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳ ವರದಿಯಾಗುತ್ತಿವೆ. ತಂದೆಯ ವಯಸ್ಸಿನ ವ್ಯಕ್ತಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಖೇದಕರ. ಇಂತಹ ಸನ್ನಿವೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ.
ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವರೆಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಶಾಲಾಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ ಕಂಡುಬಂದ ತಕ್ಷಣವೇ ಸೂಕ್ತ ಕಾನೂನು ಕ್ತಮ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಿಸಿಯೂಟ ತಯಾರಿಕೆ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟ ಗಮನಹರಿಸಬೇಕು. ಈ ಕುರಿತು ನಿರಂತರ ಸಭೆ ನಡೆಸಬೇಕು ಎಂದು ಹೇಳಿದರು.
ಮಕ್ಕಳಿಗೆ ಪೌಷ್ಟಿಕಾಹಾರ ಮಹತ್ವದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಬೇಕು.
ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ನವಜಾತ ಶಿಶುಗಳು ದೊರೆತಾಗ ಕೂಡಲೇ ನಿಯಮಾವಳಿ ಪ್ರಕಾರ ದತ್ತುಕೇಂದ್ರಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು.
1098 ಅಥವಾ 112 ಸಹಾಯವಾಣಿ ಮಾಹಿತಿ ನೀಡಲು ಸೂಚನೆ:
ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಜಿಲ್ಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದಾಗ 1098 ಅಥವಾ 112 ಗೆ ತಕ್ಷಣ ತಿಳಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.
ಬಾಲಕಿಯರ ವಸತಿಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಪುರುಷ ವಾರ್ಡನ್ ಇರಕೂಡದು. ಒಂದು ವೇಳೆ ಇದ್ದರೆ ಬದಲಾಯಿಸಬೇಕು ಎಂದರು.
ವಸತಿನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವುದರ ಜತೆಗೆ ಓದಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು.
ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಒದಗಿಸಬೇಕು.
ಬಾಲಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಕೌನ್ಸಿಲಿಂಗ್ ಮೂಲಕ ಮನಃ ಪರಿವರ್ತಿಸಿ ಸರಕಾರಿ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಸಮಾಜ ಕಲ್ಯಾಣ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಸೂಚನೆ:
ಬಾಲ್ಯವಿವಾಹ ತಡೆಗೆ ರಚಿಸಲಾಗಿರುವ ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿ ಅರಿತುಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ವಿಫಲವಾಗುವ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಎಚ್ಚರಿಕೆ ನೀಡಿದರು.
ಇದು ಅಧಿಕಾರಯುತ ಸಮಿತಿಯಾಗಿದ್ದು, ಸಮಿತಿಯ ಎಲ್ಲರೂ ಸೇರಿ ಕೆಲಸ ಮಾಡಿದರೆ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯ. ಎಂತಹ ಒತ್ತಡವನ್ನೂ ಎದುರಿಸಿ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದರು.
ಕೌಟುಂಬಿಕ ದೌರ್ಜನ್ಯ ಸಂದರ್ಭದಲ್ಲಿ ವ್ಯತಿರಿಕ್ತವಾಗಿ ಪರಿಣಾಮ ಎದುರಿಸುವ ಮಕ್ಕಳ ಹಿತರಕ್ಷಣೆಗೆ ಆದ್ಯತೆ ನೀಡಬೇಕು.
ಮಕ್ಕಳ ಹಕ್ಕುಗಳ ರಕ್ಷಣೆಯು ಸಮುದಾಯದ ಹೊಣೆ ಕೂಡ ಹೌದು. ಆದ್ದರಿಂದ ಸಮುದಾಯ ಕೂಡ ಸರಕಾರಿ ಇಲಾಖೆಯ ಜತೆಗೆ ಕೈಜೋಡಿಸಬೇಕು.
ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರುವ ನಿಟ್ಟಿನಲ್ಲಿ ಆಟಪಾಠಗಳನ್ನು ಜಾರಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಕ್ಕಳ ಕಳ್ಳ ಸಾಗಾಣಿಕೆ, ಕಾಣೆಯಾದ ಪ್ರಕರಣಗಳು, ಪೋಕ್ಸೋ ಮತ್ತಿತರ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕೆ.ನಾಗಣ್ಣಗೌಡ ಅವರು ತಿಳಿಸಿದರು.
ಲಿಖಿತ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸೂಚನೆ:
ಬಾಲ್ಯವಿವಾಹ ಹಾಗೂ ಅಪ್ರಾಪ್ತ ಗರ್ಭಿಣಿಯರು ಕಂಡುಬಂದಾಗ ವಯಸ್ಸಿನ ದೃಢೀಕರಿಸುವಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಇಂತಹ ಪ್ರಕರಣಗಳು ವರದಿಯಾದ ಕೂಡಲೇ ಲಿಖಿತವಾಗಿ ಸಂಬಂಧಿಸಿದ ಇಲಾಖೆಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಬೆಳಗಾವಿ ಹಾಗೂ ಖಾನಾಪುರದ ಬಾಲಕರ ಅನುಪಾಲನಾ ಗೃಹ ಹಾಗೂ ಸವದತ್ತಿಯಲ್ಲಿರುವ ಬಾಲಕಿಯರ ಅನುಪಾಲನಾ ಗೃಹದಲ್ಲಿ ಸಾಕಷ್ಟು ಅವಕಾಶವಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅರಿತುಕೊಳ್ಳಬೇಕು.
ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಾಟೀಲ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಮಾತನಾಡಿ, ವಸತಿಶಾಲೆಗಳಿಗೆ ಕೆಲವು ಮೂಲಸೌಕರ್ಯವನ್ನು ನರೇಗಾ ಯೋಜನೆಯಡಿ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಸಂಬಂಧಿಸಿದಂತೆ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಲು ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ಅವರು, ಬಾಲ್ಯವಿವಾಹ ತಡೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಬಾಲ್ಯವಿವಾಹ ತಡೆಯುವ ವೇಳೆ ಯಾರಾದರೂ ಜನಪ್ರತಿನಿಧಿಗಳು ಅಥವಾ ಸ್ಥಳೀಯ ಮುಖಂಡರು ಒತ್ತಡ ಹೇರಿದರೆ ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರುಳಿ ಮನೋಹರ ರೆಡ್ಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬಸವರಾಜ ನಾಲತವಾಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ, ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಮಕ್ಕಳ ರಕ್ಷಣಾ ಘಟಕದ ಸದಸ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ. ಕಾಯ್ದೆ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗೀದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.